"ನಮ್ಮ ಅನ್ನದ ತಟ್ಟೆಗಳು ಎಲ್ಲಿ ಕಳೆದು ಹೋಗಿವೆ ಎಂಬುದು ಗೊತ್ತಿತ್ತು. ಅವುಗಳನ್ನು ನ್ಯಾಯಬದ್ಧವಾಗಿ ವಾಪಸ್ ಪಡೆದು ನಮಗೆ ದೊರಕಿಸುವ ಕೆಲಸವನ್ನು ಮಾದಿಗ ಸಮುದಾಯ ಮಾಡುತ್ತಿದೆ. ಅಲೆಮಾರಿಗಳು ಮಾದಿಗರಿಗೆ ಆಭಾರಿಯಾಗಿರುತ್ತೇವೆ."
“ಕಳೆದ 70 ವರ್ಷಗಳಿಂದಲೂ ದಿಕ್ಕಿಲ್ಲದೆ ಬದುಕುತ್ತಿರುವ ಅಲೆಮಾರಿಗಳನ್ನು ತಮ್ಮೊಂದಿಗೆ ಕರೆದುಕೊಂಡು ಹೆಜ್ಜೆ ಹಾಕಿದವರು ಮಾದಿಗರು. ಒಳಮೀಸಲಾತಿ ಹೋರಾಟ ನಮಗೂ ನ್ಯಾಯ ದೊರಕಿಸಿ ಕೊಟ್ಟಿದೆ. ಮಾದಿಗ ಸಮುದಾಯವು ತಾಯ್ತನದಿಂದ ನಮ್ಮನ್ನು ಪೊರೆದಿದೆ” ಎಂದು ‘ಅಲೆಮಾರಿ, ಅರೆಅಲೆಮಾರಿ ವಿಮುಕ್ತ ಬುಡಕಟ್ಟು ಒಕ್ಕೂಟ’ದ ಕಾರ್ಯಾಧ್ಯಕ್ಷ ಹಾಗೂ ಗೋಸಂಗಿ ಸಮುದಾಯದ ಚಾವಡಿ ಲೋಕೇಶ್ ಹೇಳಿದರು.
ಜಸ್ಟಿಸ್ ನಾಗಮೋಹನ ದಾಸ್ ಆಯೋಗದ ವರದಿ ಜಾರಿಗೆ ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಹೋರಾಟದ ಸ್ಥಳದಲ್ಲಿ ಇಂದು (ಮಂಗಳವಾರ) ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
“ಮಾದಿಗ ಸಹೋದರರು ನಮ್ಮನ್ನು (ಅಲೆಮಾರಿಗಳನ್ನು) ಅಪ್ಪಿಕೊಂಡಿದ್ದಾರೆ. ಸಂವಿಧಾನ ಜಾರಿಯಾಗಿ ಎಪ್ಪತ್ತು ವರ್ಷಗಳಾಯಿತು. ಇಷ್ಟು ಕಾಲ ಬೀದಿಯಲ್ಲಿ ಬಿದ್ದಿದ್ದ ನಮ್ಮನ್ನು ಕೈ ಹಿಡಿದು ನಡೆಸುವ ಕೆಲಸ ಮಾಡಿದ್ದು ಮಾದಿಗ ಸಹೋದರರು” ಎಂದು ಮಾರ್ಮಿಕವಾಗಿ ನುಡಿದರು.
“ನಾವು ಕಾಡಲ್ಲಿ ಇರಲಿಕ್ಕೂ ಬಿಡಲಿಲ್ಲ, ನಾಡಲ್ಲಿ ಇರಲಿಕ್ಕೂ ಬಿಡಲಿಲ್ಲ. ನಮ್ಮ ಮಕ್ಕಳ ಮೇಲೆ ಅತ್ಯಾಚಾರಗಳಾಗಿವೆ. ನಮ್ಮ ಮೇಲೆ ಕೇಸ್‌ಗಳನ್ನು ಹಾಕಿದ್ದಾರೆ. ಅಂತಹ ಅನಿಷ್ಟ ಜೀವನ ನಮ್ಮದು. ಹೀಗಿರುವಾಗ ಒಳಮೀಸಲಾತಿ ಚಳವಳಿಗಾರರು ನಮ್ಮನ್ನು ಮಡಿಲಿಗೆ ಹಾಕಿಕೊಂಡು ತಾಯಿ ರೀತಿಯಲ್ಲಿ ಪೋಷಣೆ ಮಾಡಿದ್ದಾರೆ” ಎಂದರು.
“ನಮ್ಮ ಅನ್ನದ ತಟ್ಟೆಗಳು ಎಲ್ಲಿ ಕಳೆದು ಹೋಗಿವೆ ಎಂಬುದು ಗೊತ್ತಿತ್ತು. ಅವುಗಳನ್ನು ನ್ಯಾಯಬದ್ಧವಾಗಿ ವಾಪಸ್ ಪಡೆದು ನಮಗೆ ದೊರಕಿಸುವ ಕೆಲಸ ಮಾಡುತ್ತಿದ್ದಾರೆ. ಮಾದಿಗ ಸಮುದಾಯಕ್ಕೆ ಅಲೆಮಾರಿಗಳು ಆಭಾರಿಯಾಗಿರುತ್ತೇವೆ” ಎಂದು ಕೃತಜ್ಞತೆ ಸಲ್ಲಿಸಿದರು.
ಇದನ್ನೂ ಓದಿರಿ: ‘ನೆಪಗಳನ್ನಿಟ್ಟು ಒಳಮೀಸಲಾತಿ ಜಾರಿ ತಡಮಾಡದಿರಿ’; ಅನಿರ್ದಿಷ್ಟಾವಧಿ ಹೋರಾಟ ಆರಂಭ
“ಎಪ್ಪತ್ತು ವರ್ಷಗಳಿಂದಲೂ ಬೀದಿಯಲ್ಲಿದ್ದ ನಮ್ಮನ್ನು, 35 ವರ್ಷಗಳ ಹಿಂದೆ ಜೊತೆಯಲ್ಲಿ ಕರೆದುಕೊಂಡು ಹೊರಟವರು ಮಾದಿಗರು. 49 ಜಾತಿಗಳನ್ನೆಲ್ಲ ಒಟ್ಟುಗೂಡಿಸಿದರೂ ನಮ್ಮ ಸಂಖ್ಯೆ 4 ಲಕ್ಷ ದಾಟುವುದಿಲ್ಲ. ನಮಗೆ ಒಳಮೀಸಲಾತಿ ಬೇಕಾಗಿದೆ. ಸರ್ಕಾರದ ಆದೇಶ ಪ್ರತಿ ಸಿಗುವವರೆಗೂ ಹಿಂತಿರುಗಿ ಹೋಗುವುದಿಲ್ಲ. 70 ವರ್ಷಗಳಿಂದಲೂ ನಾವು ಬೀದಿಯಲ್ಲೇ ಇದ್ದೇವೆ. ಹೋರಾಟ ಮಾಡುವುದು ನಮಗೆ ಹೊಸದಲ್ಲ” ಎಂದು ತಿಳಿಸಿದರು.
ಒಳಮೀಸಲಾತಿ ಹೋರಾಟಗಾರರಾದ ಎಸ್.ಮಾರೆಪ್ಪ, ಅಂಬಣ್ಣ ಅರೋಲಿಕರ್, ಬಸವರಾಜ್ ಕೌತಾಳ್, ಕರಿಯಪ್ಪ ಗುಡಿಮನಿ, ಶಿವರಾಯ ಅಕ್ಕರಕಿ ಮೊದಲಾದ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
