ಶಿವಮೊಗ್ಗ ಹಾಗೂ ರಾಯಚೂರಿನಲ್ಲಿ ಮೇ.2 ರಂದು ಚುನಾವಣಾ ರ್ಯಾಲಿಯಲ್ಲಿ ಭಾಷಣ ಮಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಜೆಡಿಎಸ್ ದೂರು ದಾಖಲಿಸಿದೆ.
ಬೆಂಗಳೂರು ಘಟಕದ ಜೆಡಿಎಸ್ ಅಧ್ಯಕ್ಷ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾದ ಹೆಚ್ ಎಂ ರಮೇಶ್ ಗೌಡ ಅವರು ರಾಜ್ಯ ಡಿಜಿಪಿ, ಶಿವಮೊಗ್ಗ ಹಾಗೂ ರಾಯಚೂರು ಎಸ್‌ಪಿ ಅವರಿಗೆ ದೂರು ದಾಖಲಿಸಿದ್ದಾರೆ.
ರಾಹುಲ್ ಗಾಂಧಿ ಹೇಳಿದಂತೆ ಪ್ರಜ್ವಲ್ ರೇವಣ್ಣ 400 ಮಹಿಳೆಯರನ್ನು ಅತ್ಯಾಚಾರವೆಸಗಿದ್ದರೆ, ಅತ್ಯಾಚಾರಕ್ಕೊಳಗಾದವರ ಬಗ್ಗೆ ರಾಹುಲ್ ಗಾಂಧಿಗೆ ಮಾಹಿತಿ ಗೊತ್ತಿರಬೇಕು. ಅವರು ಉದ್ದೇಶಪೂರ್ವಕವಾಗಿ ಮಾಹಿತಿಯನ್ನು ಮುಚ್ಚಿಟ್ಟಿದ್ದಾರೆ. ಇದು ಐಪಿಸಿ ಸೆಕ್ಷನ್ 202ರ ಪ್ರಕಾರ ಅಪರಾಧವಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸರ್ಕಾರಕ್ಕೆ ಒಂದು ವರ್ಷ, ಸಮರ್ಥನೀಯವಲ್ಲದ ನಡೆ
ಕರ್ನಾಟಕ ಸರ್ಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಏ.28ರಂದು ಎಸ್‌ಐಟಿ ರಚಿಸಿದ್ದು, ಇಲ್ಲಿಯವರೆಗೂ ರಾಹುಲ್ ಗಾಂಧಿ ನೀಡಿರುವ ಹೇಳಿಕೆಯ ಬಗ್ಗೆ ಮಾಹಿತಿ ಪಡೆಯಲು ಅವರಿಗೆ ಯಾವುದೇ ನೋಟಿಸ್ ನೀಡಿಲ್ಲ. 400 ಮಹಿಳೆಯರು ಅತ್ಯಾಚಾರಕ್ಕೊಳಗಾಗಿದ್ದಾರೆ ಎಂದು ಹೇಳಿಕೆ ನೀಡಿರುವ ರಾಹುಲ್ ಗಾಂಧಿಯವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ತಿಳಿಸಲಾಗಿದೆ.
‘ಪ್ರಜ್ವಲ್ ರೇವಣ್ಣ 400 ಮಹಿಳೆಯರನ್ನು ಅತ್ಯಾಚಾರವೆಸಗಿ ವಿಡಿಯೋ ಮಾಡಿದ್ದಾನೆ. ಇದು ಸೆಕ್ಸ್ ಹಗರಣವಲ್ಲ ಸಮೂಹ ಅತ್ಯಾಚಾರ. ಪ್ರಧಾನ ಮಂತ್ರಿ ಆತನ ಪರವಾಗಿ ಮತಯಾಚಿಸಿದ್ದಾರೆ. ನೀವು ಸಮೂಹ ಅತ್ಯಾಚಾರಿಗೆ ಮತ ನೀಡಿದರೆ ಆತನಿಗೆ ಸಹಾಯ ಮಾಡಿದಂತಾಗುತ್ತದೆ’ ಎಂದು ರಾಹುಲ್ ಗಾಂಧಿ ಶಿವಮೊಗ್ಗ ಹಾಗೂ ರಾಯಚೂರಿನಲ್ಲಿ ಮೇ.2 ರಂದು ಚುನಾವಣಾ ರ್ಯಾಲಿಯಲ್ಲಿ ಭಾಷಣ ಮಾಡಿದ್ದರು.
