ಬೆಂಗಳೂರಿನ ಗೋರಿಪಾಳ್ಯವನ್ನು ಪಾಕಿಸ್ತಾನಕ್ಕೆ ಹೋಲಿಸಿದ್ದ, ಮಹಿಳಾ ವಕೀಲೆಯನ್ನು ಅಸಭ್ಯವಾಗಿ ನಿಂದಿಸಿದ್ದ ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶ ವಿ ಶ್ರೀಶಾನಂದ ಮತ್ತೆ ಮಹಿಳಾ ವಿರೋಧಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸಾರ್ವಜನಿಕ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಗೋರಿಪಾಳ್ಯವನ್ನು ಪಾಕಿಸ್ತಾನಕ್ಕೆ ಹೋಲಿಸಿ ಮಾತನಾಡಿದ್ದ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ನ್ಯಾಯಾಧೀಶರು ಘಟನೆ ಮತ್ತು ಎಚ್ಚರಿಕೆಯಿಂದ ಮಾತನಾಡಬೇಕೆಂದು ಸುಪ್ರೀಂ ಕೋರ್ಟ್ ಬುದ್ದಿ ಹೇಳಿತ್ತು. ಆದರೂ, ನ್ಯಾಯಾಧೀಶ ಶ್ರೀಶಾನಂದ ಅವರು ತಮ್ಮ ವಿವಾದಾತ್ಮಕ ಹೇಳಿಕೆಗಳನ್ನು ಮುಂದುವರೆಸಿದ್ದಾರೆ. ”ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ಹೆಣ್ಣು ಮಕ್ಕಳ ಮೊದಲ ರಾತ್ರಿ ಆ ಊರಿನ ನಾಯಕನ ಜೊತೆಗೇ ನಡೆಯುತ್ತದೆ” ಎಂದು ಮಹಿಳಾ ವಿರೋಧಿ ಹೇಳಿಕೆ ನೀಡಿದ್ದಾರೆ.
ಪ್ರಕರಣವೊಂದರ ವಿಚಾರಣೆ ನಡೆಸಿದ್ದ ಶ್ರೀಶಾನಂದ ಅವರು, ”ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನಲ್ಲಿ ಯಾರನ್ನು ಬೇಕಾದರೂ ಮದುವೆ ಮಾಡಿಕೊಳ್ಳಬಹುದು. ಆದರೆ, ಮೊದಲ ರಾತ್ರಿ ಮಾತ್ರ ನಾಯಕನ ಜೊತೆ ಎಂಬ ಆಚರಣೆ ಇಂದಿಗೂ ಆಸ್ತಿತ್ವದಲ್ಲಿದೆ” ಎಂದು ಹೇಳಿದ್ದಾರೆ. ಅವರ ಮಹಿಳಾ ವಿರೋಧಿ ಹೇಳಿಕೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
“ಹಳೆಯ ಶಿಲಾಯುಗದ ಕಾಲದಲ್ಲಿ ಹೆಣ್ಣು ಮಕ್ಕಳಿಗೋಸ್ಕರ ಕಾದಾಟಗಳು ನಡೆದಿದ್ದವು. ಯಾರಿಗೆ ಶಕ್ತಿ ಇತ್ತೋ (ಮೈಟಿ ಇಸ್ ದಿ ರೈಟ್) ಅವನು ನಾಯಕನಾಗುತ್ತಿದ್ದ. ಆ ನಾಯಕನಿಗೆ ಆ ಹೆಣ್ಣು ಮಗಳನ್ನು ಒಪ್ಪಿಸಿ, ಉಳಿದವರು ಎರಡು ಅಥವಾ ಮೂರನೆಯವರಾಗಿ ಆ ಹೆಣ್ಣು ಮಗಳನ್ನು ಉಪಯೋಗಿಸಿಕೊಳ್ಳಬೇಕಿತ್ತು. ಈ ದುಷ್ಟ ಆಚರಣೆ ಈಗಲೂ ಸುರಪುರದಲ್ಲಿದೆ ಎಂಬುದು ನಿಮಗೆ ಗೊತ್ತಿರಲಿ” ಎಂದು ನ್ಯಾಯಾಧೀಶ ಶ್ರೀಶಾನಂದ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
”ಮೊದಲ ರಾತ್ರಿಯನ್ನು ನಾಯಕನ ಜೊತೆ ಕಳೆದ ಬಳಿಕ, ಅವರು ಅಲ್ಲೇ ಇರಬಹುದು ಅಥವಾ ಬೇರೆ ಕಡೆ ಹೋಗಿ ಮದುವೆ ಮಾಡಿಕೊಳ್ಳಬಹುದು. ಏನ್ ಸಾರ್ ಅದೆಲ್ಲವೂ ಸಾಧ್ಯವಾ? ಎಂದರೆ ಆ ಥರ ಈಗಲೂ ನಡೆಯುತ್ತಿದೆ. ಅದರ ಮೇಲೆ ಬೇಕಾದಷ್ಟು ಚಲನಚಿತ್ರಗಳು ಬಂದಿವೆ. ಬೆತ್ತಲೆ ಸೇವೆ ಅಂಥ ಸಿನಿಮಾ ಬಂದಿದೆ. ಇನ್ನೊಂದು, ಮತ್ತೊಂದು ಬಂತು ಎಲ್ಲವೂ ಆಯ್ತು. ಸರಿಹೋಯ್ತ ಎಂದು ನೋಡಿದರೆ ಇನ್ನೂ ಸರಿ ಹೋಗಲಿಲ್ಲ. ದೇವದಾಸಿಯರು ಎಂದರೆ ಏನು? ಅವರೂ ಅದೇನೇ… ಎಲ್ಲ ಬೇಕಾದಷ್ಟು ಮಾಡಿಕೊಂಡರು.. ಅದು ಇರಲಿ.. ನಾವು ಆ ವಿಚಾರದ ಮೇಲಿಲ್ಲ” ಎಂದು ಹೇಳಿದ್ದಾರೆ. ನ್ಯಾಯಾಧೀಶರ ವಿರುದ್ದ ಯಾದಗಿರಿ ಜಿಲ್ಲೆಯಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ.
Is this man fit to b a judge ? He claims , falsely , that all women of a particular village go to the leader on getting married on” fist night” they are then “ second hand” The same judge who apologised to the SC for his obscene and anti secular comments i @TheLeaflet_in pic.twitter.com/hRQ86YA0WZ
— Indira Jaising (@IJaising) January 15, 2025
ಯಾದಗಿರಿ ಮತ್ತು ಶಹಾಪುರದಲ್ಲಿ ಮಹರ್ಷಿ ವಾಲ್ಮೀಕಿ ನಾಯಕ ಸಂಘ ಮತ್ತು ಸಾಮೂಹಿಕ ಸಂಘಟನೆಗಳ ಒಕ್ಕೂಟಗಳ ಮುಖಂಡರು ಪ್ರತಿಭಟನೆ ನಡೆಸಿದ್ದಾರೆ. ನ್ಯಾಯಮೂರ್ತಿ ಶ್ರೀಶಾನಂದ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಷ್ಟ್ರಪತಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಹಾಗೂ ರಾಜ್ಯಪಾಲರಿಗೆ ಪ್ರತಿಭಟನಾಕಾರರು ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
”ಶ್ರೀಶಾನಂದ ಅವರು ನ್ಯಾಯಮೂರ್ತಿಯಾಗಿರಲು ಅರ್ಹರೇ? ಅಶ್ಲೀಲ ಮತ್ತು ಜಾತ್ಯತೀತ ವಿರೋಧಿ ಹೇಳಿಕೆ ನೀಡಿ, ಸುಪ್ರೀಂ ಕೋರ್ಟ್ ಕ್ಷಮೆ ಕೋರಿದ್ದವರು ಈಗ ಮತ್ತೆ ಅಶ್ಲೀಲ ಹೇಳಿಕೆ ನೀಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.