ಕಳಸಾ ಬಂಡೂರಿ | ನಮ್ಮ ಪಾಲಿನ ನೀರು ಬಳಸಲು ನಮಗೆ ಸಂಪೂರ್ಣ ಹಕ್ಕಿದೆ: ಡಿಸಿಎಂ ಡಿ.ಕೆ. ಶಿವಕುಮಾರ್

Date:

Advertisements

ಕಳಸಾ ಬಂಡೂರಿ ಯೋಜನೆ ಮೂಲಕ ನಮ್ಮ ಪಾಲಿನ ನೀರನ್ನು ಬಳಸಲು ರಾಜ್ಯಕ್ಕೆ ಸಂಪೂರ್ಣ ಹಕ್ಕಿದೆ. ಈ ವಿಚಾರವಾಗಿ ನಾವೆಲ್ಲರೂ ಒಟ್ಟಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕೋಣ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕ ಕೋನರೆಡ್ಡಿ ಅವರು ಮಹದಾಯಿ ಯೋಜನೆ ವಿಚಾರವಾಗಿ ಗೋವಾ ಸಿಎಂ ಅಲ್ಲಿನ ವಿಧಾನಸಭೆಯಲ್ಲಿ ನೀಡಿರುವ ಹೇಳಿಕೆ ಬಗ್ಗೆ ಪ್ರಶ್ನಿಸಿದರು, ಇದಕ್ಕೆ ಪ್ರತಿಕ್ರಿಯೆ ನೀಡಿದ ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, “ಇಡೀ ರಾಜ್ಯದ ಜನ ಪಕ್ಷಬೇಧ ಮರೆತು ಈ ವಿಚಾರವಾಗಿ ಹೋರಾಟ ಮಾಡಿದ್ದಾರೆ. ನ್ಯಾಯಾಲಯದಲ್ಲಿ ಇದರ ತೀರ್ಪು ಬಂದಿದ್ದು, ನಮ್ಮ ರಾಜ್ಯಕ್ಕೆ ಅಗತ್ಯ ಪಾಲಿನ ನೀರು ಹಂಚಿಕೆ ಮಾಡಲಾಗಿದೆ. 2022ರಲ್ಲಿ ಕೇಂದ್ರ ಜಲ ಆಯೋಗ ಕೂಡ ಈ ನೀರನ್ನು ಬಳಸಿಕೊಳ್ಳಲು ಅನುಮತಿ ನೀಡಿತು. ಹುಬ್ಬಳ್ಳಿ ಧಾರವಾಡದಲ್ಲಿ ಶಾಸಕರುಗಳು ಸೇರಿ ವಿಜಯೋತ್ಸವವನ್ನು ಆಚರಿಸಿದರು” ಎಂದರು.

“ಈ ಮಧ್ಯೆ ಗೋವಾದ ಅಧಿಕಾರಿ ಈ ಯೋಜನೆ ಪ್ರಶ್ನಿಸಿ ನಮ್ಮ ಸರ್ಕಾರಕ್ಕೆ ಶೋಕಾಸ್ ನೋಟಿಸ್ ನೀಡಿದ್ದಾರೆ. ಅವರು ನಮ್ಮ ರಾಜ್ಯಕ್ಕೆ ಹೇಗೆ ನೋಟಿಸ್ ನೀಡಲು ಸಾಧ್ಯ? ಕೆಲವು ವಿಚಾರದಲ್ಲಿ ಕೇಂದ್ರ ಸರ್ಕಾರ ನಮಗೆ ನೋಟಿಸ್ ನೀಡಬಹುದು. ನಮ್ಮ ರಾಜ್ಯದ ಅಧಿಕಾರಿ ಬೇರೆ ರಾಜ್ಯಕ್ಕೆ ನೋಟಿಸ್ ನೀಡಲು ಸಾಧ್ಯವೇ? ನಾವು ಆ ನೋಟೀಸ್ ಗೆ ಹೆಚ್ಚು ಮಾನ್ಯತೆ ನೀಡದೇ ಯೋಜನೆ ಮುಂದುವರಿಸಬೇಕಿತ್ತು. ಆದರೆ ಆಗ ನಮ್ಮ ರಾಜ್ಯದವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಅಂದು ನಾನು ಅಧಿಕಾರದಲ್ಲಿ ಇದ್ದಿದ್ದರೆ, ಆ ನೋಟಿಸ್ ಕೊಡಲು ನೀನು ಯಾರು ಎಂದು ಪ್ರಶ್ನೆ ಮಾಡುತ್ತಿದ್ದೆ” ಎಂದು ಹೇಳಿದರು.

Advertisements

“ನಾನು ನಾಲ್ಕು ಬಾರಿ ಕೇಂದ್ರ ಜಲ ಶಕ್ತಿ ಸಚಿವ ಭೂಪೇಂದ್ರ ಯಾದವ್ ಅವರನ್ನು ಭೇಟಿ ಮಾಡಿದ್ದು, ಈ ವಿಚಾರವಾಗಿ ಚರ್ಚೆ ಮಾಡಿದ್ದೇನೆ. ಅವರಿಗೆ ಯಾವ ರಾಜಕೀಯ ಒತ್ತಡ ಇದೆಯೋ ಗೊತ್ತಿಲ್ಲ. ಇನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರು ಮೂರು ಬಾರಿ ಭೇಟಿ ಮಾಡಿ ಮನವಿ ಮಾಡಿದ್ದಾರೆ. ಈ ತಿಂಗಳು ಮತ್ತೆ ದೆಹಲಿಗೆ ಬಂದು ಭೇಟಿ ಮಾಡುವಂತೆ ದಿನಾಂಕ ನೀಡಿದ್ದಾರೆ. ಕಳಸಾ ಬಂಡೂರಿ ವಿಚಾರದಲ್ಲಿ ಕರ್ನಾಟಕ ರಾಜ್ಯಕ್ಕೆ ಮೀಸಲಾಗಿರುವ ಪ್ರತಿಯೊಂದು ಹನಿ ನೀರನ್ನು ಬಳಸಲು ಎಲ್ಲಾ ಹಕ್ಕು ಇದೆ. ನಾನು ಇಲಾಖೆ ಅಧಿಕಾರ ವಹಿಸಿಕೊಂಡ ಬಳಿಕ ಟೆಂಡರ್ ಕರೆದು ಗುತ್ತಿಗೆಯನ್ನು ಅಂತಿಮಗೊಳಿಸಿದ್ದೇನೆ. ಕಾನೂನು ವಿಚಾರಗಳನ್ನು ಸ್ವಲ್ಪ ಅಧ್ಯಯನ ಮಾಡುತ್ತಿದ್ದು, ಈ ವಿಚಾರದಲ್ಲಿ ಕಾನೂನು ತೊಡಕು ಇದ್ದರೆ ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಿರುವ ಅರ್ಜಿಯನ್ನು ಹಿಂಪಡೆದು ನಾವು ಯೋಜನೆ ಆರಂಭಿಸಬಹುದು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಈ ವಿಚಾರವಾಗಿ ಅಡ್ವೊಕೇಟ್ ಜನರಲ್ ಜೊತೆ ಚರ್ಚೆ ಮಾಡುತ್ತಿದ್ದೇನೆ” ಎಂದು ವಿವರಿಸಿದರು.

“ಇದು ನಮ್ಮ ರಾಜ್ಯದ ಹಿತದ ವಿಚಾರ. ಇದು ಅನಗತ್ಯವಾಗಿ ವಿಳಂಬವಾದರೆ ನೀರು ಸುಮ್ಮನೆ ಹರಿದು ಹೋಗುತ್ತಿರುತ್ತದೆ. ನಾವೆಲ್ಲರೂ ಈ ವಿಚಾರದಲ್ಲಿ ಒಗ್ಗಟ್ಟಿನ ಹೋರಾಟ ಮಾಡಬೇಕು. ನಾನು ದಿನಾಂಕ ನಿಗದಿ ಮಾಡುತ್ತೇನೆ ಎಲ್ಲರೂ ಹೋಗಿ ಈ ಯೋಜನೆ ಜಾರಿಗೆ ಆಗ್ರಹ ಮಾಡೋಣ. ನಾನು ಈ ವಿಚಾರವಾಗಿ ಪ್ರಧಾನಮಂತ್ರಿಗಳ ಮುಂದೆಯೂ ಪ್ರಸ್ತಾಪ ಮಾಡಿದ್ದೇನೆ. ನಾವು ನಮ್ಮ ಪ್ರಯತ್ನ ಮಾಡುತ್ತಿದ್ದೇವೆ. ನೀವು ಒತ್ತಡ ಹಾಕಿ. ಈ ಯೋಜನೆ ಜಾರಿಯಾದರೆ ಕೇವಲ ಒಂದೇ ವರ್ಷದಲ್ಲಿ ಫಲಿತಾಂಶ ಕಾಣಲಿದೆ” ಎಂದು ತಿಳಿಸಿದರು.

ನ್ಯಾಯಾಲಯದಲ್ಲಿ ಇದು ಬಗೆಹರಿಯುವುದಿಲ್ಲ

ಈ ವೇಳೆ ಬೆಲ್ಲದ್ ಅವರು ಮಾತನಾಡಿ, ನಾವು ಒತ್ತಡ ಹಾಕುವುದಿಲ್ಲ, ನೀವು ಕೋರ್ಟ್ ನಲ್ಲಿ ತೀರ್ಮಾನ ಮಾಡಿಸಿ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, “ನ್ಯಾಯಾಲಯದಲ್ಲಿ ಈ ವಿಚಾರ ಬಗೆಹರಿಯಲು ಸಾಧ್ಯವೇ ಇಲ್ಲ. ನ್ಯಾಯಾಲಯದ ಮೆಟ್ಟಿಲೇರಿದರೆ ಅದು ಎಲ್ಲೆಲ್ಲೋ ಹೋಗುತ್ತದೆ. ಗೋವಾ ಅಧಿಕಾರಿ ನಮ್ಮ ರಾಜ್ಯಕ್ಕೆ ನೋಟೀಸ್ ನೀಡಲು ಹೇಗೆ ಸಾಧ್ಯ? ಬೇರೆ ಪಕ್ಷದಲ್ಲಿರುವ ನಿಮಗೆ ನಾನು ನೋಟೀಸ್ ನೀಡಲು ಸಾಧ್ಯವೇ? ಅಥವಾ ನೀವು ನನಗೆ ನೋಟೀಸ್ ನೀಡಲು ಸಾಧ್ಯವೇ?” ಎಂದು ಪ್ರಶ್ನಿಸಿದರು. ಈ ವೇಳೆ ಬೆಲ್ಲದ್ ಅವರು ಉಪಮುಖ್ಯಮಂತ್ರಿಗಳ ನಿಲುವು ಸರಿಯಾಗಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರದಿಂದ ಯೋಜನೆಗೆ ಆರ್ಥಿಕ ನೆರವು ಕೊಡಿಸಿ

ಶಾಸಕ ಎಂ.ಆರ್ ಪಾಟೀಲ್ ಅವರು ಕುಂದಗೋಳ ತಾಲೂಕಿನ ಬೆಣ್ಣೆಹಳ್ಳದಿಂದ ಆಗುತ್ತಿರುವ ಪ್ರವಾಹ ತಡೆಯಲು ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಕೇಳಿದಾಗ, “ಈ ಬೆಣ್ಣೆಹಳ್ಳ ಪ್ರದೇಶವನ್ನು ನಾನೇ ಖುದ್ದಾಗಿ ನೋಡಿದ್ದೇನೆ. ನಮ್ಮ ಶಾಸಕರಾದ ಕೋನರೆಡ್ಡಿ ಸೇರಿದಂತೆ ಅನೇಕ ಶಾಸಕರು ನನ್ನ ಹಾಗೂ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿದರು. ನಾವು ಈ ವಿಚಾರ ಗಮನದಲ್ಲಿಟ್ಟುಕೊಂಡು ಈ ವರ್ಷ ರೂ.200 ಕೋಟಿ ಅಂದಾಜು ವೆಚ್ಚದ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಇದಲ್ಲದೇ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದೇನೆ. ನಾವು ರೂ‌.1610 ಕೋಟಿ ಮೊತ್ತದ ಯೋಜನೆ ರೂಪಿಸಿ ಕೇಂದ್ರ ಸರ್ಕಾರಕ್ಕೆ ಎಐಬಿಪಿ ಯೋಜನೆಯಡಿ ಕಳುಹಿಸಿಕೊಟ್ಟಿದ್ದೇವೆ. ಕೇಂದ್ರ ಸಚಿವರು ಕೂಡ ಇದನ್ನು ಕಳುಹಿಸಿಕೊಡಿ ಎಂದಿದ್ದರು. ಹೀಗಾಗಿ ನಾನು ಬಿಜೆಪಿ ಶಾಸಕರಾದ ಸಿ.ಸಿ.ಪಾಟೀಲ್, ಅರವಿಂದ ಬೆಲ್ಲದ್ ಅವರಿಗೆ ಹೇಳುವುದೆಂದರೆ ನೀವೆಲ್ಲರೂ ಸೇರಿ ಒತ್ತಡ ಹಾಕಿ. ನಿಮ್ಮ ಜೊತೆಗೆ ನಾನು ಕೂಡ ಬರುತ್ತೇನೆ. ಈ ಯೋಜನೆಯಾದರೆ ಇದಕ್ಕೆ ಮುಕ್ತಿ ಸಿಗುತ್ತದೆ. ಇದರ ಹೊರತಾಗಿ ಸಣ್ಣ ಪುಟ್ಟ ಯೋಜನೆ ಮಾಡಿದರೆ ಇದರಿಂದ ಪರಿಹಾರ ಸಿಗುವುದಿಲ್ಲ. ಕೇಂದ್ರ ಸರ್ಕಾರದಿಂದ ಆರ್ಥಿಕ ನೆರವು ಸಿಕ್ಕರೆ ಈ ಯೋಜನೆ ಜಾರಿ ಮಾಡಿ ಸಮಸ್ಯೆಗೆ ಸೂಕ್ತ ಪರಿಹಾರ ಕಲ್ಪಿಸಬಹುದು” ಎಂದು ತಿಳಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧರ್ಮಸ್ಥಳ ಪ್ರಕರಣ: SIT ತನಿಖೆ ನಿಷ್ಪಕ್ಷಪಾತವಾಗಿ ಮುಂದುವರಿಸಲು ಸರ್ಕಾರಕ್ಕೆ ‘ನಾವೆದ್ದು ನಿಲ್ಲದಿದ್ದರೆ-ಕರ್ನಾಟಕ’ ಆಗ್ರಹ

ಧರ್ಮಸ್ಥಳದಲ್ಲಿ ನಡೆದಿರುವ ಮಹಿಳೆಯರ ನಾಪತ್ತೆ, ಅತ್ಯಾಚಾರ ಮತ್ತು ಬರ್ಬರ ಕೊಲೆಗಳ ಪ್ರಕರಣಗಳ...

ಪಿಒಪಿ ಬಳಸಲ್ಲ ಎಂದು ಗಣೇಶೋತ್ಸವ ಸಮಿತಿಯಿಂದ ಮುಚ್ಚಳಿಕೆ ಬರೆಸಿಕೊಳ್ಳಿ: ಈಶ್ವರ ಖಂಡ್ರೆ ಸೂಚನೆ

ಸಾರ್ವಜನಿಕ ಗಣೇಶೋತ್ಸವಗಳಲ್ಲಿ ಪಿಒಪಿ ಗಣಪತಿ ಮೂರ್ತಿ ಬಳಸುವುದಿಲ್ಲವೆಂದು ಪೆಂಡಾಲ್‌ಗೆ ಅನುಮತಿ ನೀಡುವ...

ಮಹೇಶ್ ಶೆಟ್ಟಿ ತಿಮರೋಡಿ ಪೊಲೀಸ್‌ ವಶಕ್ಕೆ, ಬ್ರಹ್ಮಾವರ ಪೊಲೀಸ್ ಠಾಣೆ ಸುತ್ತ ಒಂದು ದಿನದ ನಿಷೇಧಾಜ್ಞೆ ಜಾರಿ

ಮಹೇಶ್ ಶೆಟ್ಟಿ ತಿಮರೋಡಿ ತೀವ್ರ ವಿಚಾರಣೆಯ ಹಿನ್ನೆಲೆಯಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆ...

Download Eedina App Android / iOS

X