ಕನ್ನಡದ ಪ್ರಸಿದ್ಧ ಲೇಖಕಿ ಬಾನು ಮುಷ್ತಾಕ್ ಅವರು ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಭಾಜನರಾಗಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಅನೇಕ ನಾಯಕರು ಅಭಿನಂದನೆ ಸಲ್ಲಿಸಿದ್ದಾರೆ.
ಬಾನು ಮುಷ್ತಾಕ್ ಅವರು ಬರೆದಿದ್ದ ಹಸೀನಾ ಮತ್ತು ಇತರ ಕತೆಗಳು ಕೃತಿಯನ್ನು ದೀಪಾ ಭಾಸ್ತಿ ಅವರು ʼಹಾರ್ಟ್ ಲ್ಯಾಂಪ್ʼ ಶೀರ್ಷಿಕೆಯಡಿ ಇಂಗ್ಲಿಷ್‌ಗೆ ಅನುವಾದ ಮಾಡಿದ್ದರು. ಈ ಕೃತಿ ಈಗ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಪಾತ್ರವಾಗಿದೆ.
ಕನ್ನಡದ ಕಂಪು ಜಗದಗಲಕ್ಕೆ ಪಸರಿಸಲಿ: ಸಿಎಂ
“ಅಂತಾರಾಷ್ಟ್ರೀಯ ಬೂಕರ್ ಸಾಹಿತ್ಯ ಪ್ರಶಸ್ತಿ ಪುರಸ್ಕೃತರಾಗಿರುವ ಕನ್ನಡದ ಹೆಮ್ಮೆಯ ಲೇಖಕಿ ಬಾನು ಮುಷ್ತಾಕ್ ಅವರಿಗೆ ಅಭಿನಂದನೆಗಳು. ಇದು ಕನ್ನಡ, ಕನ್ನಡಿಗ ಮತ್ತು ಕರ್ನಾಟಕ ಸಂಭ್ರಮಿಸುವ ಹೊತ್ತು. ಈ ನೆಲದ ಸೌಹಾರ್ದತೆ, ಜಾತ್ಯತೀತತೆ ಮತ್ತು ಸೋದರತ್ವದ ನಿಜ ಮೌಲ್ಯಗಳನ್ನು ಮೈಗೂಡಿಸಿಕೊಂಡು ಬರೆಯುತ್ತಿರುವ ಬಾನು ಮುಷ್ತಾಕ್ ಅವರು ಕನ್ನಡದ ಹಿರಿಮೆಯ ಬಾವುಟವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿ ನಮಗೆಲ್ಲ ಗೌರವ ತಂದುಕೊಟ್ಟಿದ್ದಾರೆ” ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
“ಅವರು ಇನ್ನಷ್ಟು ಕಾಲ ಸತ್ವಯುತವಾಗಿ ಬರೆಯುತ್ತಾ ಕನ್ನಡದ ಕಂಪನ್ನು ಜಗದಗಲಕ್ಕೆ ಪಸರಿಸುತ್ತಾ ಇರಲಿ ಎಂದು ಹಾರೈಸುತ್ತೇನೆ. ಬೂಕರ್ ಪ್ರಶಸ್ತಿಗೆ ಭಾಜನವಾಗಿರುವ ಅವರ ಕೃತಿ ‘ಹೃದಯ ದೀಪ’ವನ್ನು ಇಂಗ್ಲೀಷ್ ಗೆ ಅನುವಾದಿಸಿರುವ ಪ್ರತಿಭಾವಂತ ಲೇಖಕಿ ದೀಪಾ ಭಾಸ್ತಿ ಅವರಿಗೂ ಕನ್ನಡಿಗರೆಲ್ಲರ ಪರವಾಗಿ ಅಭಿನಂದನೆಗಳು” ಎಂದು ಹೇಳಿದ್ದಾರೆ.
ಬಾನೆತ್ತರಕ್ಕೇರಿಸಿದ ಬಾನು ಮುಷ್ತಾಕ್: ಡಿ ಕೆ ಶಿವಕುಮಾರ್
“ಕನ್ನಡ ಸಾಹಿತ್ಯದ ಗರಿಮೆಯನ್ನು ಬಾನೆತ್ತರಕ್ಕೇರಿಸಿದ ಬಾನು ಮುಷ್ತಾಕ್ ಅವರಿಗೆ ಅಭಿನಂದನೆಗಳು! ಕನ್ನಡದ ಸಾಹಿತಿ ಬಾನು ಮುಷ್ತಾಕ್ ಅವರ “ಹಾರ್ಟ್ ಲ್ಯಾಂಪ್” ಸಣ್ಣ ಕಥೆಗಳ ಸಂಕಲನವು ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಭಾಜನವಾಗಿರುವುದು ಹೆಮ್ಮೆಯ ವಿಚಾರ. ಈ ಮೂಲಕ ಇದೇ ಮೊದಲ ಬಾರಿಗೆ ಕನ್ನಡದ ಕೃತಿಗೆ ಈ ಪ್ರತಿಷ್ಠಿತ ಪ್ರಶಸ್ತಿ ದೊರಕಿದೆ. ಬಾನು ಮುಷ್ತಾಕ್ ಹಾಗೂ ಈ ಕೃತಿಯನ್ನು ಇಂಗ್ಲಿಷ್‌ಗೆ ಅನುವಾದಿಸಿದ ದೀಪಾ ಭಾಸ್ತಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಇನ್ನಷ್ಟು ಉತ್ತಮ ಕೃತಿಗಳು ನಿಮ್ಮ ಲೇಖನಿಯಿಂದ ಮೂಡಿಬರಲಿ, ಸಾಹಿತ್ಯ ಸೇವೆಯು ಜಗದಗಲ ಹೆಸರು ಮಾಡಲಿ ಎಂದು ಶುಭ ಹಾರೈಸುತ್ತೇನೆ” ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಶುಭಾಶಯ ತಿಳಿಸಿದ್ದಾರೆ.
ಹೆಚ್ ಡಿ ಕುಮಾರಸ್ವಾಮಿ ಶುಭಾಶಯ
“ಸಮಸ್ತ ಕನ್ನಡಿಗರಿಗೆ ಇದು ಹೆಮ್ಮೆಯ ಕ್ಷಣ. ಜಾಗತಿಕ ಬೂಕರ್ ಸಾಹಿತ್ಯ ಪ್ರಶಸ್ತಿ ಪುರಸ್ಕೃತರಾಗಿರುವ ನಮ್ಮ ನಾಡಿನ ಹೆಮ್ಮೆಯ ಲೇಖಕಿ ಬಾನು ಮುಷ್ತಾಕ್ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು. ಹಾಗೆಯೇ ಬೂಕರ್ ಪ್ರಶಸ್ತಿ ಪುರಸ್ಕೃತವಾಗಿರುವ ಅವರ ಹೃದಯ ದೀಪ ಕೃತಿಯನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸಿರುವ ಲೇಖಕಿ ದೀಪಾ ಭಾಸ್ತಿ ಅವರಿಗೂ ಅಭಿನಂದನೆಗಳು. ಬಾನು ಮುಷ್ತಾಕ್ ಅವರಿಂದ ಇದೇ ರೀತಿಯಲ್ಲಿ ಇನ್ನಷ್ಟು ಉತ್ತಮ ಕೃತಿಗಳು ಬರಲಿ. ಅವರಿಂದ ಕನ್ನಡ ಸಾಹಿತ್ಯಲೋಕ ಮತ್ತಷ್ಟು ಶ್ರೀಮಂತವಾಗಲಿ ಹಾಗೂ ಜಗತ್ತಿನ ಉದ್ದಗಲಕ್ಕೂ ಕನ್ನಡದ ಕಂಪು ಹರಡಲಿ ಎಂದು ಹಾರೈಸುತ್ತೇನೆ” ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹರ್ಷ ವ್ಯಕ್ತಪಡಿಸಿದ್ದಾರೆ.
ಕನ್ನಡಿಗರು ಹೆಮ್ಮೆ ಪಡುವ ಸಂಗತಿ: ವಿಜಯೇಂದ್ರ
“ಪ್ರತಿಷ್ಠಿತ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಭಾಜನರಾಗಿರುವ ಕನ್ನಡದ ಹಿರಿಯ ಸಾಹಿತಿ ಬಾನು ಮುಷ್ತಾಕ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಬಾನು ಮುಷ್ತಾಕ್ ಅವರ ‘ಹಸೀನಾ ಮತ್ತು ಇತರ ಕತೆಗಳು’ ಕೃತಿಯ ಆಂಗ್ಲ ಭಾಷಾ ಅನುವಾದಿತ ಹಾರ್ಟ್ ಲ್ಯಾಂಪ್‌ಗೆ ಪ್ರಶಸ್ತಿ ದೊರೆಯುವ ಮೂಲಕ ಇದೇ ಮೊದಲ ಬಾರಿಗೆ ಕನ್ನಡದ ಕೃತಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಿರುವುದು ಸಮಸ್ತ ಕನ್ನಡಿಗರಿಗೆ ಹೆಮ್ಮೆಯ ಸಂಗತಿ. ಕನ್ನಡ ಭಾಷೆ ಹಾಗೂ ಸಾಹಿತ್ಯದ ಕಂಪನ್ನು ವಿಶ್ವದೆದುರು ಪಸರಿಸಿ ಕನ್ನಡಿಗರು ಹೆಮ್ಮೆ ಪಡುವಂತೆ ಮಾಡಿರುವ ಬಾನು ಮುಷ್ತಾಕ್ ಅವರಿಗೆ ಅಭಿನಂದಿಸುತ್ತಾ, ಮತ್ತಷ್ಟು ಗೌರವ, ಹಿರಿಮೆಗಳು ತಮ್ಮ ಮಡಿಲು ತುಂಬಲಿ, ಆ ಮೂಲಕ ಕನ್ನಡ ಸಾಹಿತ್ಯ ಲೋಕ ವಿಶ್ವಮಟ್ಟದಲ್ಲಿ ವಿಜೃಂಭಿಸಲಿ ಎಂದು ಹಾರೈಸುವೆ. ಪ್ರತಿಷ್ಠಿತ ಬೂಕರ್ ಪ್ರಶಸ್ತಿಗೆ ಭಾಜನವಾಗಿರುವ ಅವರ ಕೃತಿ ‘ಹೃದಯ ದೀಪ’ವನ್ನು ಆಂಗ್ಲ ಭಾಷೆಗೆ ಅನುವಾದಿಸಿರುವ ಪ್ರತಿಭಾವಂತ ಲೇಖಕಿ ದೀಪ ಭಾಸ್ತಿ ಅವರಿಗೂ ಸಹ ಕನ್ನಡಿಗರ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಟ್ವೀಟ್ ಮಾಡಿದ್ದಾರೆ.
ಭಾರತೀಯತೆಯ ಬೆಸುಗೆಗೆ ಬೂಕರ್ ಮನ್ನಣೆ: ಕೆ.ವಿ.ಪ್ರಭಾಕರ್
“ಬೂಕರ್ ವೇದಿಕೆಯಲ್ಲಿ ಕನ್ನಡದ ಸಾಹಿತ್ಯದ ಹಿರಿಮೆಯನ್ನು ಎತ್ತಿ ಹಿಡಿದ ಲೇಖಕಿ, ಪತ್ರಕರ್ತೆ, ಕತೆಗಾರ್ತಿ ಬಾನು ಮುಷ್ತಾಕ್ ಅವರಿಗೆ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಲಭಿಸಿರುವುದು ಅವರ ಕತೆಗಳಲ್ಲಿ ಬೆಸೆದಿರುವ ಭಾರತೀಯತೆಯ ಬೆಸುಗೆಗೆ ಸಿಕ್ಕಿರುವ ಅಂತಾರಾಷ್ಟ್ರೀಯ ಮನ್ನಣೆ” ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಸಂತಸ ವ್ಯಕ್ತಪಡಿಸಿದ್ದಾರೆ.
“ತಮ್ಮ ಲೇಖನ, ಭಾಷಣ ಮತ್ತು ಕತೆಗಳಲ್ಲಿ ನಮ್ಮ ನೆಲದ ಮೂಲ ಸತ್ವ ಮತ್ತು ಮೂಲ ತತ್ವ ಆಗಿರುವ ಸರ್ವ ಜನಾಂಗದ ಶಾಂತಿಯ ತೋಟ ಎನ್ನುವ ಮೌಲ್ಯವನ್ನು ಮತ್ತು ಜಾತ್ಯತೀತತೆಯನ್ನು ಬೆಸೆಯುವ ಕಾರ್ಯ ಮಾಡುತ್ತಲೇ ಬರುತ್ತಿದ್ದಾರೆ. ಇವರಿಗೆ ಬೂಕರ್ ಪ್ರಶಸ್ತಿ ಬಂದಿರುವುದು ಕನ್ನಡ ಸಾಹಿತ್ಯ ಮತ್ತು ಕನ್ನಡತನದ ಹಿರಿಮೆಯನ್ನು ಹೆಚ್ಚಿಸಿದ್ದು ಪ್ರತಿಯೊಬ್ಬ ಕನ್ನಡಿಗನೂ ಹೆಮ್ಮೆ ಪಡಬೇಕಾದ ಸಂದರ್ಭ ಇದಾಗಿದೆ. ವಿಶ್ವ ಮಾನವತೆಯ ಸದಾಶಯವನ್ನು ಎತ್ತಿ ಹಿಡಿಯುವ ಬಾನು ಮುಷ್ತಾಕ್ ಅವರ ಕತೆಗಳು ವಿಶ್ವದ ಎಲ್ಲಾ ಭಾಷೆಗಳಿಗೂ ಅನುವಾದಗೊಳ್ಳಬೇಕು ಎನ್ನುವುದು ನನ್ನ ಆಶಯ. ಬಾನು ಮುಷ್ತಾಕ್ ಅವರ ಹಸೀನಾ ಮತ್ತು ಇತರ ಕತೆಗಳು ನನಗೆ ಬಹಳ ಇಷ್ಟವಾದ ಸಂಕಲನ. ಇವರನ್ನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ” ಎಂದಿದ್ದಾರೆ.
ಅಂತಾರಾಷ್ಟ್ರೀಯ ಬೂಕರ್ ಸಾಹಿತ್ಯ ಪ್ರಶಸ್ತಿ ಪುರಸ್ಕೃತರಾಗಿರುವ ಕನ್ನಡದ ಹೆಮ್ಮೆಯ ಲೇಖಕಿ ಬಾನು ಮುಸ್ತಾಕ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಇದು ಕನ್ನಡ, ಕನ್ನಡಿಗ ಮತ್ತು ಕರ್ನಾಟಕ ಸಂಭ್ರಮಿಸುವ ಹೊತ್ತು.
— Siddaramaiah (@siddaramaiah) May 21, 2025
ಈ ನೆಲದ ಸೌಹಾರ್ದತೆ, ಜಾತ್ಯತೀತತೆ ಮತ್ತು ಸೋದರತ್ವದ ನಿಜ ಮೌಲ್ಯಗಳನ್ನು ಮೈಗೂಡಿಸಿಕೊಂಡು ಬರೆಯುತ್ತಿರುವ ಬಾನು ಮುಸ್ತಾಕ್ ಅವರು… pic.twitter.com/ZGitjeuDm5