ಗಾಯಕ ಸೋನು ನಿಗಮ್ ಅವರು ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಕನ್ನಡ ಹಾಡು ಹಾಡಲು ಹೇಳಿದಾಗ, ಇಂತಹ ನಡವಳಿಕೆಗಳಿಂದ ಪಹಲ್ಗಾಮ್ ಭಯೋತ್ಪಾದಕ ದಾಳಿ ನಡೆದಿದೆ ಎಂದು ಹೇಳುವ ಮೂಲಕ ಕನ್ನಡಿಗರನ್ನು ಅವಮಾನಿಸಿದ್ದಾರೆ. ಅವರ ಹೇಳಿಕೆಯಿಂದ ಕನ್ನಡಿಗರು ತೀವ್ರ ಆಘಾತಗೊಂಡಿದ್ದಾರೆ, ಘಾಸಿಗೊಂಡಿದ್ದಾರೆ. ಈ ಹೇಳಿಕೆಗಳು ಕೇವಲ ಆಕ್ಷೇಪಾರ್ಹವಲ್ಲದೇ ಅಪಮಾನಕಾರಿಯೂ ಆಗಿದ್ದು, ಕನ್ನಡಿಗ ಸಮುದಾಯಕ್ಕೆ ಗಂಭೀರ ಆತಂಕವನ್ನು ಉಂಟುಮಾಡಿದೆ ಮತ್ತು ಕನ್ನಡಿಗರ ಘನತೆಗೆ ಧಕ್ಕೆ ತಂದಿದೆ. ಹಾಗಾಗಿ ಸೋನು ನಿಗಮ್ ಅವರನ್ನು ತಕ್ಷಣವೇ ಬಂಧಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ನಿಯೋಗ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದೆ.
“ಬೆಂಗಳೂರು ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಶ್ರೀ ಧರ್ಮರಾಜ್ ಎ. ಅವರು ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಔಪಚಾರಿಕ ದೂರು ದಾಖಲಿಸಿದ್ದಾರೆ ಮತ್ತು ಈ ವಿಷಯಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿದೆ ಎಂಬುದನ್ನು ನಿಮ್ಮ ಗಮನಕ್ಕೆ ತರಲು ಇಚ್ಛಿಸುತ್ತೇವೆ. ಸೋನು ನಿಗಮ್ ಅವರ ಟೀಕೆಗಳು ಅತ್ಯಂತ ಖಂಡನೀಯವಾಗಿದ್ದು, ಇವು ದ್ವೇಷವನ್ನು ಪ್ರಚೋದಿಸುವುದರ ಜೊತೆಗೆ ಕರ್ನಾಟಕ ಮತ್ತು ಭಾರತದ ಸಾಂಸ್ಕೃತಿಕ ಮತ್ತು ಸಾಮಾಜಿಕ ರಚನೆಗೆ ಕೊಡುಗೆ ನೀಡುವ ಕನ್ನಡಿಗರ ಖ್ಯಾತಿಗೆ ಕಳಂಕ ತರುತ್ತವೆ. ಸೋನು ನಿಗಮ್ ವಿರುದ್ಧ ಈ ಕೆಳಗಿನ ಕ್ರಮಗಳನ್ನು ತಕ್ಷಣವೇ ಕೈಗೊಳ್ಳಬೇಕೆಂದು ನಾವು ಒತ್ತಾಯಿಸುತ್ತೇವೆ:
- ಸೋನು ನಿಗಮ್ ಅವರನ್ನು ತಕ್ಷಣವೇ ಬಂಧಿಸಬೇಕು.
- ನ್ಯಾಯವನ್ನು ಎತ್ತಿಹಿಡಿಯಲು ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಗಟ್ಟಲು ಈ ವಿಷಯದ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕು.
- ಇಂತಹ ಜವಾಬ್ದಾರಿಯಿಲ್ಲದ ಮತ್ತು ಒಡಕು ಉಂಟುಮಾಡುವ, ಕನ್ನಡಿಗರನ್ನು ಹೀಯಾಳಿಸುವ, ನಿಂದಿಸುವ ಹೇಳಿಕೆಗಳನ್ನು ಮಾಡದಂತೆ ವ್ಯಕ್ತಿಗಳನ್ನು ತಡೆಗಟ್ಟಲು ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳುವುದು.
ಕರ್ನಾಟಕ ರಕ್ಷಣಾ ವೇದಿಕೆಯು ಕನ್ನಡ ಗೌರವ, ಸಂಸ್ಕೃತಿ ಮತ್ತು ಕನ್ನಡಿಗರ ಹಕ್ಕುಗಳ ರಕ್ಷಣೆಗಾಗಿ ದೃಢವಾಗಿ ನಿಂತಿದೆ. ತಾವು ಈ ಗಂಭೀರ ವಿಷಯವನ್ನು ತಕ್ಷಣವೇ ಗಮನಹರಿಸಬೇಕು” ಎಂದು ಮನವಿ ಮಾಡಿದ್ದಾರೆ.