ಕರ್ನಾಟಕ ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ (ತಿದ್ದುಪಡಿ) ಮಸೂದೆಯನ್ನು ರಾಷ್ಟ್ರಪತಿಗಳ ಒಪ್ಪಿಗೆಗಾಗಿ ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಕಾಯ್ದಿರಿಸಿದ್ದಾರೆ.
“ಈ ಮಸೂದೆಯು ಸಾಂವಿಧಾನಿಕ ನಿರ್ಬಂಧಗಳಿಗೆ ಒಳಪಡುತ್ತಿದೆ. ಪರಿಶೀಲನೆಯ ಅಗತ್ಯವಿದೆ. ಹೀಗಾಗಿ, ಹೆಚ್ಚಿನ ಸಾಂವಿಧಾನಿಕ ತೊಡಕುಗಳನ್ನು ನಿವಾರಿಸಲು ಪ್ರಸ್ತಾವಿತ ಮಸೂದೆಗೆ ಒಪ್ಪಿಗೆ ನೀಡುವ ಬದಲು, ಗೌರವಾನ್ವಿತ ರಾಷ್ಟ್ರಪತಿಗಳ ಪರಿಗಣನೆಗೆ ಕಾಯ್ದಿರಿಸುವುದು ಸೂಕ್ತವೆಂದು ನಾನು ಭಾವಿಸುತ್ತೇನೆ” ಎಂದು ರಾಜ್ಯಪಾಲ ಗೆಹ್ಲೋಟ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಈ ಮಸೂದೆಯನ್ನು 2024ರ ಮಾರ್ಚ್ 6ರಂದು ಸದನದಲ್ಲಿ ಅಂಗೀಕರಿಸಲಾಗಿತ್ತು. ರಾಜ್ಯಪಾಲರ ಅಂಕಿತಕ್ಕಾಗಿ 2025ರ ಮೇ 16ರಂದು ರಾಜ್ಯಪಾಲರ ಕಚೇರಿಗೆ ಸಲ್ಲಿಸಲಾಗಿತ್ತು.
ಮಸೂದೆಯು, ಹೆಚ್ಚಿನ ಆದಾಯ ಗಳಿಸುವ ದೇವಾಲಯಗಳಿಂದ ಸರ್ಕಾರಕ್ಕೆ ಬರುವ ನಿಧಿಯ ಮೊತ್ತವನ್ನು ಹೆಚ್ಚಿಸುವುದಾಗಿ ಹೇಳುತ್ತದೆ. ಇದರಡಿ, ಒಂದು ಕೋಟಿ ರೂ.ಗೂ ಅಧಿಕ ಆದಾಯ ಪಡೆಯುವ ಧಾರ್ಮಿಕ ಸಂಸ್ಥೆಗಳ ಒಟ್ಟು ಆದಾಯದಲ್ಲಿ ದತ್ತಿ ಇಲಾಖೆಗೆ ಬರುವ ಪಾಲನ್ನು 10%ರಷ್ಟು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ.
ಆ ಹಣವನ್ನು ಕಡಿಮೆ ಮತ್ತು ಅತೀ ಕಡಿಮೆ ಆದಾಯ ಹೊಂದಿರುವ ವರ್ಗ-ಬಿ ಮತ್ತು ವರ್ಗ-ಸಿ ದೇವಾಲಯಗಳ ಅಭಿವೃದ್ಧಿಗೆ ವರ್ಗಾಯಿಸಲು ಮಸೂದೆಯಲ್ಲಿ ಸರ್ಕಾರ ಪ್ರಸ್ತಾಪಿಸಿದೆ.