ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಮಕ್ಕಳು ಮತ್ತು ಮಹಿಳೆಯರ ಪೌಷ್ಠಿಕತೆ ಸುಧಾರಣೆಗಾಗಿ ಶ್ರಮಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಮೂಲಭೂತ ವಿಷಯದ ಬಗ್ಗೆ ಪ್ರಶ್ನೆಗಳನ್ನು ಮುನ್ನೆಲೆಗೆ ತಂದಿದ್ದಾರೆ. ತಾವು ಧರಿಸುವ ಸಮವಸ್ತ್ರದ ಕುರಿತು ಗಮನ ಸೆಳೆದಿದ್ದಾರೆ. ತಮಗೆ ನೀಡಲಾಗುತ್ತಿರುವ ಸೀರೆಗಳು ಕಳಪೆ ಗುಣಮಟ್ಟದ್ದಾಗಿದ್ದು, ವಾರಗಳಲ್ಲಿಯೇ ಹರಿದುಹೋಗುತ್ತಿವೆ. ಹರಿದ ಸೀರೆಗಳನ್ನು ಹೇಗೆ ಧರಿಸಬೇಕು ಎಂದು ಪ್ರಶ್ನಿಸಿದ್ದಾರೆ.
ಸೀರೆ ವಿತರಣೆ ಗುತ್ತಿಗೆ ಪಡೆದಿರುವ ಸಂಸ್ಥೆ ಕೊಡುತ್ತಿರುವ ಸೀರೆಗಳ ಗುಣಮಟ್ಟ ತೀರಾ ಕಳಪೆಯಾಗಿದೆ. ಕೆಲವೇ ದಿನಗಳಲ್ಲಿ ಸೀರೆಗಳ ಬಣ್ಣ ಮುಸುಕಾಗುತ್ತದೆ. ಕೆಲವೇ ವಾರಗಳಲ್ಲಿ ಹರಿದುಹೋಗುತ್ತವೆ. ಇಂತಹ ಸೀರೆಗಳನ್ನು ಧರಿಸುವುದು ಮುಜುಗರ ಉಂಟುಮಾಡುತ್ತದೆ. ಹೀಗಾಗಿ, ನಾವು ನಮ್ಮ ವೈಯಕ್ತಿಕ ಸೀರೆಗಳನ್ನು ಧರಿಸಬೇಕಾಗಿದೆ ಎಂದು ಅಂಗನವಾಡಿ ಕಾರ್ಯಕರ್ತೆಯರು ಹೇಳಿದ್ದಾರೆ.
“ಸೀರೆಗಳ ಗುಣಮಟ್ಟ ಅತ್ಯಂತ ಕಳಪೆಯಾಗಿದೆ. ಆರಂಭದಲ್ಲಿ, ಸೀರೆಗಳನ್ನು ಮಾರ್ಚ್‌ನಲ್ಲಿ ನಮಗೆ ವಿತರಣೆ ಮಾಡಲಾಗುತ್ತಿತ್ತು. ಆದರೆ ಈ ವರ್ಷ, ನಮಗೆ ಇನ್ನೂ ಸೀರೆಗಳು ತಲುಪಿಲ್ಲ. ನಮಗೆ ಸಾಸಿವೆ ಬಣ್ಣದ ಸೀರೆಗಳನ್ನು ನೀಡುವುದಾಗಿ ಸಮವಸ್ತ್ರ ಪೂರೈಕೆ ಗುತ್ತಿಗೆದಾರರು ಭರವಸೆ ನೀಡಿದ್ದರು. ಆದರೆ, ವಿಭಿನ್ನ ಬಣ್ಣದ ಸೀರೆಗಳನ್ನು ನೀಡಲಾಗಿದೆ. ಮೆರೂನ್ ಬಣ್ಣದ ಸೀರೆಗಳನ್ನು ಪಡೆಯಬೇಕಿದ್ದ ಸಹಾಯಕಿಯರಿಗೆ ನೀಲಿ ಬಣ್ಣದ ಸೀರೆಗಳು ಬಂದಿದೆ. ಈ ಸೀರೆಗಳು ಮೂರು ತಿಂಗಳೊಳಗೆ ಹರಿಯಲು ಆರಂಭಿಸುತ್ತವೆ. ನೂಲುಗಳು (ದಾರ) ಬಿಟ್ಟುಕೊಳ್ಳುತ್ತವೆ. ಅಂತಹ ಸೀರೆಗಳನ್ನು ಧರಿಸಲು ಆಗುವುದಿಲ್ಲ. ಆದರೆ, ನಮ್ಮ ವೈಯಕ್ತಿಕ ಸೀರೆಗಳನ್ನು ಧರಿಸಿದರೆ, ನೋಟಿಸ್ ನೀಟುವುದಾಗಿ ಬೆದರಿಕೆ ಹಾಕುತ್ತಾರೆ” ಎಂದು ಚಿಕ್ಕಬಳ್ಳಾಪುರದ ಅಂಗನವಾಡಿ ಶಿಕ್ಷಕಿ ಸುಮಾ ಹೇಳಿರುವುದಾಗಿ ‘TOI’ ವರದಿ ಮಾಡಿದೆ.
“ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ (ಕೆಎಚ್‌ಡಿಸಿ) ಮೂಲಕ ಖರೀದಿಸುತ್ತಿದ್ದ ಸೀರೆಗಳು ಹೆಚ್ಚು ಬಾಳಿಕೆ ಬರುತ್ತಿದ್ದವು. ಆದರೆ, ಸಮವಸ್ತ್ರ ಪೂರೈಕೆ ಟೆಂಡರ್‌ಅನ್ನು ಬದಲಾಯಿಸಿದ ಬಳಿಕ, ಸೀರೆಗಳ ಗುಣಮಟ್ಟ ತೀವ್ರವಾಗಿ ಕುಸಿದಿದೆ” ಎಂದು ಚಿಕ್ಕಬಳ್ಳಾಪುರದ ನಾಗರತ್ನ ಹೇಳಿದ್ದಾರೆ.
“2018ರಲ್ಲಿ ನಾವು ಹತ್ತಿ-ಪಾಲಿಯೆಸ್ಟರ್‌ನಿಂದ ನೇಯ್ದ ಸೀರೆಗಳನ್ನು ಪಡೆದಿದ್ದೆವು. ಆ ಸೀರೆಗಳು ಮೆರೂನ್ ಬಣ್ಣದಲ್ಲಿದ್ದವು, ಕೇವಲ 170 ರೂ. ಬೆಲೆಯ ಆ ಸೀರೆಗಳು ಉತ್ತಮ ಗುಣಮಟ್ಟದ್ದಾಗಿದ್ದವು. ಆದರೆ, ಈಗ ವಿತರಿಸಲಾಗಿರುವ ಸೀರೆಗಳ ಹೊಲಿಗೆ ದುರ್ಬಲವಾಗಿವೆ. ಪ್ರತಿ ಬ್ಯಾಚ್‌ನಲ್ಲಿಯೂ ಬಣ್ಣಗಳು ಬದಲಾಗುತ್ತಿವೆ” ಎಂದು ನಾಗರತ್ನ ವಿವರಿಸಿದ್ದಾರೆ.
ಈ ವರದಿ ಓದಿದ್ದೀರಾ?: ಬರಪೀಡಿತ ಪ್ರದೇಶದಲ್ಲಿ ಕೃಷಿ ಪುನರುಜ್ಜೀವನಕ್ಕೆ ನಾಂದಿ ಹಾಡಿದ ವಿಧವೆಯರು, ಒಂಟಿ ಮಹಿಳೆಯರು
“2011ರಿಂದ, ಸೀರೆಯ ಬಣ್ಣಗಳು ಬದಲಾಗುತ್ತಲೇ ಇದ್ದವು. 2020ರಲ್ಲಿ, ನಾವು ಸೀರೆಗಳ ಉದ್ದ ಮತ್ತು ಬ್ಲೌಸ್‌ಗಳ ಬಗ್ಗೆ ದೂರು ನೀಡಿದ್ದೆವು. ಈ ಸೀರೆಗಳು 6.5 ಮೀಟರ್ ಉದ್ದವೂ ಇಲ್ಲ. ಸೀರೆಗಳನ್ನು ನೀರಿನಲ್ಲಿ ಅದ್ದಿದಾಗ, ದಾರಗಳು ಬಿಟ್ಟುಕೊಳ್ಳುತ್ತವೆ. ಕೆಲವು ಕಾರ್ಯಕರ್ತೆಯರು ಹರಿದ ಸೀರೆಗಳನ್ನೇ ಧರಿಸುತ್ತಿದ್ದಾರೆ. ಸಮವಸ್ತ್ರ ಧರಿಸದಿದ್ದರೆ ದಂಡ ವಿಧಿಸುವ ಬೆದರಿಕೆ ನೀಡಲಾಗಿದೆ. ಆದರೆ, ಹರಿದ ಬಟ್ಟೆಗಳನ್ನು ಹೇಗೆ ಧರಿಸಲು ಸಾಧ್ಯ? ನಮಗೆ ಒಂದು ಸೆಟ್‌ಗೆ ಸರಿಯಾದ ಸೀರೆಗಳು, ಸರಿಯಾದ ಹೊಲಿಗೆಯುಳ್ಳ ಎರಡು ಬ್ಲೌಸ್‌ಗಳು ಬೇಕು” ಎಂದು ಕರ್ನಾಟಕ ಅಂಗನವಾಡಿ ಕಾರ್ಯಕರ್ತೆಯರ ಕಲ್ಯಾಣ ಸಮಿತಿಯ ರಾಜ್ಯ ಅಧ್ಯಕ್ಷೆ ಪದ್ಮಾವತಮ್ಮ ಎಂ ಹೇಳಿದ್ದಾರೆ.
ಆದರೆ, “ನಮಗೆ ಯಾವುದೇ ಅಧಿಕೃತ ದೂರುಗಳು ಬಂದಿಲ್ಲ. ಪುರಾವೆಗಳಿದ್ದರೆ, ಅವುಗಳನ್ನು ನಮಗೆ ರವಾನಿಸಬಹುದು. ಪ್ರಸ್ತುತ ಪ್ರಕ್ರಿಯೆಗಳಲ್ಲಿ ಓಪನ್ ಟೆಂಡರ್‌ಅನ್ನು ಅನುಸರಿಸಲಾಗುತ್ತಿದೆ. ಕೆಎಚ್‌ಡಿಸಿ ಟೆಂಡರ್‌ನಿಂದ ನಿಷೇಧಿಸಲಾಗಿಲ್ಲ” ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕ ರಾಘವೇಂದ್ರ ಹೇಳಿದ್ದಾರೆ.