ಪ್ರಸ್ತುತ 86 ಸರ್ಕಾರಿ ಆಸ್ಪತ್ರೆಗಳಲ್ಲಿ ಜಾರಿಯಲ್ಲಿರುವ ಪುನೀತ್ ರಾಜ್‌ಕುಮಾರ್ ಹೃದಯ ಜ್ಯೋತಿ ಯೋಜನೆಯನ್ನು ಯಶಸ್ಸಿನ ಆಧಾರದ ಮೇಲೆ, ಕರ್ನಾಟಕ ಆರೋಗ್ಯ ಇಲಾಖೆಯು ಈ ಯೋಜನೆಯನ್ನು ಎಲ್ಲ ತಾಲ್ಲೂಕುಗಳಲ್ಲಿ ವಿಸ್ತರಿಸಲು ಕೆಲಸ ಮಾಡುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಆರೋಗ್ಯ ಇಲಾಖೆಯು ಕಳೆದ ವರ್ಷ ಕರ್ನಾಟಕದ ಹೃದಯಾಘಾತ (ಎಸ್‌ಟಿಇಎಂಐ) ನಿರ್ವಹಣೆ ಯೋಜನೆಯನ್ನು ತಾಲ್ಲೂಕು ಮಟ್ಟದಲ್ಲಿ ಪುನೀತ್ ರಾಜ್‌ಕುಮಾರ್ ಹೃದಯ ಜ್ಯೋತಿ ಯೋಜನೆ ಎಂದು ನಾಮಕರಣ ಮಾಡಲಾಗಿದೆ. ಗ್ರಾಮೀಣ ಪ್ರದೇಶದ ಹೃದಯಾಘಾತ ರೋಗಿಗಳಿಗೆ ರೋಗನಿರ್ಣಯ ಮತ್ತು ಚಿಕಿತ್ಸೆ ನೀಡುವಲ್ಲಿ ವಿಳಂಬವಾಗುವುದನ್ನು ತಪ್ಪಿಸಲು ಪ್ರಾರಂಭಿಸಲಾದ ಯೋಜನೆಯನ್ನು ‘ಹಬ್ ಮತ್ತು ಸ್ಪೋಕ್’ ಮಾದರಿಯಲ್ಲಿ ಜಾರಿಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಯೋಜನೆಯ ಯಶಸ್ಸಿನ ಆಧಾರದ ಮೇಲೆ ಇದೀಗ ರಾಜ್ಯಾದ್ಯಂತ ವಿಸ್ತರಿಸಲಾಗುವುದು “ಈಗ 86 ಆಸ್ಪತ್ರೆಗಳಲ್ಲಿ ಯೋಜನೆಯನ್ನು (15 ಜಿಲ್ಲೆಗಳು ಮತ್ತು 71 ತಾಲೂಕು ಆಸ್ಪತ್ರೆಗಳು) ಕಾರ್ಯನಿರ್ವಹಿಸಲಾಗುತ್ತಿದೆ. ಇದಲ್ಲದೆ, ಜಯದೇವ ಹೃದ್ರೋಗ ಸಂಶೋಧನಾ ಸಂಸ್ಥೆ ಸೇರಿದಂತೆ 16 ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ 10 ‘ಹಬ್’ಗಳನ್ನು ರಚಿಸಲಾಗಿದೆ. ಯೋಜನೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ, ಶೀಘ್ರದಲ್ಲೇ ಎಲ್ಲ ತಾಲೂಕುಗಳಲ್ಲಿ ಯೋಜನೆಯನ್ನು ವಿಸ್ತರಿಸಲು ನಾವು ಕೆಲಸ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.
2,363 ರೋಗಿಗಳ ಜೀವ ಉಳಿಸಲಾಗಿದೆ
ಮಾರ್ಚ್ 2023 ರಿಂದ, ಯೋಜನೆಯ 86 ಆರೋಗ್ಯ ಸೌಲಭ್ಯಗಳಲ್ಲಿ ಎದೆನೋವು ಕಾಣಿಸಿಕೊಂಡ 2,69,091 ರೋಗಿಗಳಲ್ಲಿ, ವೈದ್ಯರು 45 ವರ್ಷಕ್ಕಿಂತ ಕಡಿಮೆ ವಯಸ್ಸಿನ 390 ಮಂದಿ ಸೇರಿದಂತೆ 2,363 ರೋಗಿಗಳ ಜೀವಗಳನ್ನು ಉಳಿಸಿದ್ದಾರೆ. ಇದಲ್ಲದೆ, ಈ ಯೋಜನೆಯಡಿ ಹೃದಯಾಘಾತಕ್ಕೆ ಮೊದಲ ಹಂತದ ಚಿಕಿತ್ಸೆಯಾದ ಟೆನೆಕ್ಟೆಪ್ಲೇಸ್ ಚುಚ್ಚುಮದ್ದನ್ನು ನೀಡುವ ಮೂಲಕ ಜುಲೈ 2024 ರಿಂದ ಹೃದಯಾಘಾತದ ಲಕ್ಷಣಗಳನ್ನು ಹೊಂದಿರುವ 245 ರೋಗಿಗಳ ಜೀವಗಳನ್ನು ಉಳಿಸಲಾಗಿದೆ. ರೋಗಲಕ್ಷಣಗಳ ಪ್ರಾರಂಭದ ನಂತರ ಸಾಧ್ಯವಾದಷ್ಟು ಬೇಗ (ಸಾಮಾನ್ಯವಾಗಿ ಒಂಬತ್ತು ಗಂಟೆಗಳ ಒಳಗೆ) ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ (ಹೃದಯಾಘಾತ) ಚಿಕಿತ್ಸೆಗಾಗಿ ಈ ಚುಚ್ಚುಮದ್ದನ್ನು ಬಳಸಲಾಗುತ್ತದೆ ಎಂದು ಆರೋಗ್ಯ ಸಚಿವರು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ವಿಧಾನಸೌಧದಲ್ಲೇ ಅತ್ಯಾಚಾರ? ಇದು ಕೇವಲ ತನಿಖೆಯಿಂದ ಬಗೆಹರಿಯುವ ಸಂಗತಿಯಲ್ಲ
ಖಾಸಗಿ ಆಸ್ಪತ್ರೆಗಳು ಒಂದು ಟೆನೆಕ್ಟೆಪ್ಲೇಸ್ ಚುಚ್ಚುಮದ್ದಿಗೆ 25,000 ರೂ. ಕ್ಕಿಂತ ಹೆಚ್ಚು ಶುಲ್ಕ ವಿಧಿಸುತ್ತಿದ್ದರೆ, ಆರೋಗ್ಯ ಇಲಾಖೆ ಈ ಯೋಜನೆಯಡಿ ರೋಗಿಗಳಿಗೆ ಈ ಜುಲೈನಿಂದ ಉಚಿತವಾಗಿ ನೀಡುತ್ತಿದೆ. ಎಲ್ಲ ನಿರ್ಣಾಯಕ ರೋಗಿಗಳನ್ನು ಅವರ ಆರೋಗ್ಯ ಸ್ಥಿತಿಯನ್ನು ಪರೀಕ್ಷಿಸಲು ಆರು ತಿಂಗಳವರೆಗೆ ಚಿಕಿತ್ಸೆ ನೀಡಲಾಗುತ್ತದೆ. ಅದರ ನಂತರವೂ ರೋಗಿಗಳ ಆರೋಗ್ಯ ಸುಧಾರಣೆಯನ್ನು ಗಮನಿಸಲಾಗುತ್ತದೆ. ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಬಳಸಿಕೊಂಡು, ವೈದ್ಯರು ರೋಗಿಗಳ ಸ್ಥಿತಿ ಗಂಭೀರವಾಗಿದೆಯೇ ಮತ್ತು ಅವರಿಗೆ ಟೆನೆಕ್ಟೆಪ್ಲೇಸ್ ಚುಚ್ಚುಮದ್ದು ಅಗತ್ಯವಿದೆಯೇ ಎಂದು ಪತ್ತೆಹಚ್ಚಲು ಸಾಧ್ಯವಾಗಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
ಯಾರಿಗಾದರೂ ಎದೆನೋವಿನ ಲಕ್ಷಣಗಳು ಕಂಡುಬಂದಲ್ಲಿ ‘ಸ್ಪೋಕ್’ ಕೇಂದ್ರಗಳಿಗೆ ಭೇಟಿ ನೀಡಿ ತಕ್ಷಣವೇ ಇಸಿಜಿ ಮಾಡಿಸಿಕೊಳ್ಳಬಹುದು. ಎಐ ತಂತ್ರಜ್ಞಾನದ ಮೂಲಕ, ವೈದ್ಯರು ತಮ್ಮ ಸ್ಥಿತಿ ಗಂಭೀರವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನಾಲ್ಕು ಅಥವಾ ಐದು ನಿಮಿಷಗಳಲ್ಲಿ ಪತ್ತೆಹಚ್ಚಲು ಸಾಧ್ಯವಾಗುತ್ತದೆ. ರೋಗಿಯು ಗಂಭೀರ ಸ್ಥಿತಿಯಲ್ಲಿದ್ದರೆ, ದುಬಾರಿ ಟೆನೆಕ್ಟೆಪ್ಲೇಸ್ ಚುಚ್ಚುಮದ್ದನ್ನು ಉಚಿತವಾಗಿ ನೀಡಲಾಗುವುದು ಎಂದು ಸಚಿವರು ಹೇಳಿದರು.
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್, ಇಂಡಿಯಾ ಸ್ಟೇಟ್-ಲೆವೆಲ್ ಡಿಸೀಸ್ ಬರ್ಡನ್ ಇನಿಶಿಯೇಟಿವ್, 2016 ರ ಪ್ರಕಾರ, ‘ಸಿವಿಡಿ’ ಮತ್ತು ‘ಎಸ್‌ಟಿಇಎಂಐ’ನಿಂದ ಕರ್ನಾಟಕದಲ್ಲಿ ಅತಿ ಹೆಚ್ಚು (40 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲಿ ಶೇ. 35 ಕ್ಕಿಂತ ಹೆಚ್ಚು) ಸಾವುಗಳಿಗೆ ಕಾರಣವಾಗುತ್ತದೆ. ಕರ್ನಾಟಕದಲ್ಲಿ ಸಿವಿಡಿ ಸಾವಿನ ಪ್ರಮಾಣವು ಒಂದು ಲಕ್ಷ ಜನಸಂಖ್ಯೆಗೆ 289.5 ಇದೆ. ಆದರೆ ರಕ್ತಕೊರತೆಯ ಹೃದ್ರೋಗವು ವರ್ಷಕ್ಕೆ ಶೇ. 24.7 ರಷ್ಟು ಸಿವಿಡಿ ಸಾವುಗಳು ಸಂಭವಿಸುತ್ತದೆ. ಹೀಗಾಗಿ ಕರ್ನಾಟಕದಲ್ಲಿ ಪ್ರತಿ ವರ್ಷ ಸುಮಾರು 40,000 ಜನರು ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.
- ಸೆಪ್ಟೆಂಬರ್ 29 ಅನ್ನು ವಿಶ್ವ ಹೃದಯ ದಿನವನ್ನಾಗಿ ಆಚರಣೆ
- ಪುನೀತ್ ರಾಜ್‌ಕುಮಾರ್ ಹೃದಯ ಜ್ಯೋತಿ ಯೋಜನೆಯಡಿ ಫಲಾನುಭವಿಗಳು :ಮಾರ್ಚ್ 2023 ರಿಂದ ಎದೆನೋವು ಕಾಣಿಸಿಕೊಂಡ ಒಟ್ಟು ರೋಗಿಗಳು – 2,69,091
- ಒಟ್ಟು ಇಸಿಜಿಗಳು: 2,79,787
- ಉಳಿಸಿದ ಜೀವಗಳು: 2,363 (45 ವರ್ಷಕ್ಕಿಂತ ಕಡಿಮೆ ವಯಸ್ಸಿನ 390 ಒಳಗೊಂಡು)
- ಆಂಜಿಯೋಪ್ಲ್ಯಾಸ್ಟಿ ಮತ್ತು ಸ್ಟೆಂಟ್ ಅಗತ್ಯವಿರುವ ರೋಗಿಗಳು: 849
- ಬೈಪಾಸ್ ಶಸ್ತ್ರಚಿಕಿತ್ಸೆಯ ಅಗತ್ಯವಿರುವ ರೋಗಿಗಳು: 8
- ಟೆನೆಕ್ಟೆಪ್ಲೇಸ್ ಚುಚ್ಚುಮದ್ದನ್ನು ಜುಲೈ 2024 ರಲ್ಲಿ ಪ್ರಾರಂಭಿಸಿದಾಗಿನಿಂದ ಚಿಕಿತ್ಸೆ ಪಡೆದ ರೋಗಿಗಳು: 245
- ಎಲ್ಲ ರೋಗಿಗಳಿಗೆ ಚಿಕಿತ್ಸೆ ನೀಡಿದ ನಂತರ ಆರು ತಿಂಗಳವರೆಗೆ ರೋಗಿಗಳ ಬಗ್ಗೆ ಪರಿವೀಕ್ಷಣೆ
