ಇಂದು ಯುಜಿ ಸಿಇಟಿ- 2025 ಫಲಿತಾಂಶ ಪ್ರಕಟಗೊಂಡಿದೆ. ಉನ್ನತ ಶಿಕ್ಷಣ ಸಚಿವ ಡಾ. ಎಂ. ಸಿ. ಸುಧಾಕರ್ ಫಲಿತಾಂಶ ಪ್ರಕಟಿಸಿದ್ದಾರೆ. ಮಧ್ಯಾಹ್ನ 2 ಗಂಟೆಗೆ ವೆಬ್‌ಸೈಟ್‌ನಲ್ಲಿ ಸಿಇಟಿ(CET) ಫಲಿತಾಂಶ ಪ್ರಕಟಿಸಲಾಗುತ್ತದೆ.
3.30 ಲಕ್ಷ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದು ಆ ಪೈಕಿ 3,11,000 ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ಹಾಜರಾಗಿದ್ದರು ಎಂದು ಸಚಿವ ಸುಧಾಕರ್ ಅವರು ಮಾಹಿತಿ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸಿಇಟಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮತ್ತಷ್ಟು ಸುಲಭ
ಬೆಂಗಳೂರಿನ ಮಾರತಹಳ್ಳಿ ಚೈತ್ಯನ್ಯ ಸಿಬಿಎಸ್ಇ ಶಾಲೆಯ ಭವೇಶ್ ಜಯಂತಿ ಸಿಇಟಿ ಎಂಜಿನಿಯರಿಂಗ್ ವಿಭಾಗದಲ್ಲಿ ಮೊದಲ ರ‍್ಯಾಂಕ್ ಪಡೆದಿದ್ದಾರೆ. ಉತ್ತರಹಳ್ಳಿಯ ಕನಕಪುರ ರಸ್ತೆಯಲ್ಲಿರುವ ಚೈತನ್ಯ ಟೆಕ್ನೋ ಸ್ಕೂಲ್‌ನ ವಿದ್ಯಾರ್ಥಿ ಸಾತ್ವಿಕ್ ಬಿರಾದರ್ ಎರಡನೇ ರ‍್ಯಾಂಕ್, ದಿನೇಶ್ ಗೋಮತಿ ಶಂಕರ್ ಅರುಣಾಚಲಂ 3ನೇ ರ‍್ಯಾಂಕ್ ಗಳಿಸಿದ್ದಾರೆ.
ಇನ್ನು ಕೃಷಿ ವಿಭಾಗದಲ್ಲಿ ಅಕ್ಷಯ್ ಎಂ ಪ್ರಥಮ ರ‍್ಯಾಂಕ್, ಸಾಯಿಶ್ ಶರವಣ ಪಂಡಿತ್ ಎರಡನೇ ರ‍್ಯಾಂಕ್ ಹಾಗೂ ಸುಚಿತ್.ಪಿ. ಪ್ರಸಾದ್ ಮೂರನೇ ರ‍್ಯಾಂಕ್ ಗಳಿಸಿದ್ದಾರೆ.
ಶುಶ್ರೂಷೆ(nursing) ವಿಭಾಗದಲ್ಲಿ ಯಲಹಂಕ ನಾರಾಯಣ ಇ-ಟೆಕ್ನೋ ಕಾಲೇಜಿನ ಹರೀಶ್ ರಾಜ್ ಪ್ರಥಮ ಸ್ಥಾನ, ಹೆಚ್ಎಸ್ಆರ್ ಲೇಔಟ್ನ ನ್ಯಾಷನಲ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿ ಆತ್ರೇಯ ದ್ವಿತೀಯ ಸ್ಥಾನ, ಮಂಗಳೂರಿನ ವಳಚ್ಚಿಲ್ನ ಎಕ್ಸ್ಪರ್ಟ್ ಕಾಲೇಜಿನ ಶಾಪಲ್ ಶೆಟ್ಟಿ ಮೂರನೇ ಸ್ಥಾನ ಪಡೆದಿದ್ದಾರೆ.
ಇದನ್ನು ಓದಿದ್ದೀರಾ? ಸಿಇಟಿ ಫಲಿತಾಂಶ ಪ್ರಕಟ : ಮೇಲುಗೈ ಸಾಧಿಸಿದ ಬಾಲಕಿಯರು
ಡಿ ಪಾರ್ಮ್‌ನಲ್ಲಿ ಆತ್ರೆಯಾ ವೆಂಕಟಚಲಂ ಪ್ರಥಮ, ಭವೇಶ್ ಜಯಂತಿ ದ್ವಿತೀಯ, ಹರೀಶ್ ರಾಜ್ ತೃತೀಯ ರ‍್ಯಾಂಕ್ ಗಳಿಸಿದ್ದಾರೆ. ವೆಟರ್ನರಿ ಪ್ರಾಕ್ಟಿಕಲ್‌ನಲ್ಲಿ ರಕ್ಷಿತಾ.ವಿ.ಪಿ ಪ್ರಥಮ, ನಂದನ್ ದ್ವಿತೀಯ, ಭುವನೇಶ್ವರಿ ತೃತೀಯ ಸ್ಥಾನವನ್ನು ಪಡೆದಿದ್ದಾರೆ.
ಏಪ್ರಿಲ್ 16, 17ರಂದು ಇಂಜಿನಿಯರಿಂಗ್, ಕೃಷಿ, ಪಶು ವೈದ್ಯಕೀಯ ವಿಜ್ಞಾನ ವಿಭಾಗ ಸೇರಿದಂತೆ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕಾಗಿ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆದಿದೆ.
ಫಲಿತಾಂಶ ಪ್ರಕಟಿಸುವುದು ಹೇಗೆ?
cetonline.karnataka.gov.in ಅಥವಾ kea.kar.nic.inನಲ್ಲಿ ಮಧ್ಯಾಹ್ನ 2 ಗಂಟೆಯ ನಂತರ ಫಲಿತಾಂಶವನ್ನು ನೋಡಬಹುದಾಗಿದೆ.
ಅಭ್ಯರ್ಥಿಗಳು ತಮ್ಮ ಅರ್ಜಿ ಸಂಖ್ಯೆ ಮತ್ತು ಅವರ ಹೆಸರಿನ ಮೊದಲ ನಾಲ್ಕು ಅಕ್ಷರಗಳನ್ನು ನಮೂದಿಸುವ ಮೂಲಕ ವೆಬ್‌ಸೈಟ್‌ನಲ್ಲಿ ತಮ್ಮ ಫಲಿತಾಂಶಗಳನ್ನು ಪರಿಶೀಲಿಸಬಹುದು.
