ಕಲ್ಯಾಣ ಕರ್ನಾಟಕ ಭಾಗಕ್ಕೆ ಆರ್ಟಿಕಲ್ 371 ಜೆ ಜಾರಿಗೆ ತರುವ ಮೂಲಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಧರ್ಮಸಿಂಗ್ ಅವರು ಆರ್ಥಿಕ ಸಬಲೀಕರಣಕ್ಕೆ ಶ್ರಮಿಸಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಹಯೋಗದಲ್ಲಿ ಜೇವರ್ಗಿಯಲ್ಲಿ ಶನಿವಾರ ನಡೆದ “ಕಲ್ಯಾಣ ಪಥ” ಯೋಜನೆಯ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಕಳೆದ ಲೋಕಸಭಾ ಚುನಾವಣೆಯಲ್ಲಿ ಎಲ್ಲ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಮಲ್ಲಿಕಾರ್ಜುನ ಖರ್ಗೆ ಅವರ ಮಡಿಲಿಗೆ ಹಾಕಿದ್ದೀರಿ ನಿಮಗೆ ಧನ್ಯವಾದಗಳು. ನಿಮ್ಮ ಋಣವನ್ನು ನಾವು ತೀರಿಸುತ್ತೇವೆ ಎಂದ ಡಿಸಿಎಂ, ವಿಧಾನಸೌಧ ನೋಡಿದ ತಕ್ಷಣ ಕೆಂಗಲ್ ಹನುಮಂತಯ್ಯನವರನ್ನು ನೆನಪಿಸಿಕೊಂಡಂತೆ ಕಲಬುರಗಿ ಯ ಇ ಎಸ್ ಐ ಆಸ್ಪತ್ರೆ ನೋಡಿದ ಕೂಡಲೇ ಖರ್ಗೆ ಅವರು ನೆನಪಾಗುತ್ತಾರೆ” ಎಂದರು.
“ಕಲ್ಯಾಣದ ಗ್ರಾಮೀಣ ರಸ್ತೆಗಳ ಅಭಿವೃದ್ದಿಗೆ 1,000 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಈ ಯೋಜನೆ ಪ್ರಾರಂಭವಾಗಲಿದೆ. ದೇವರು ವರ ಅಥವಾ ಶಾಪ ಕೊಡಲ್ಲ ಅವಕಾಶ ನೀಡುತ್ತಾನೆ. ಕಾಂಗ್ರೆಸ್ ಪಕ್ಷಕ್ಕೆ ಭಗವಂತ ನೀಡಿದ ಅವಕಾಶವನ್ನು ಬಳಸಿಕೊಂಡು ಸರ್ಕಾರ ಎಲ್ಲ ವರ್ಗದ ಜನ ಹಿತ ಕಾಪಾಡುತ್ತಿದೆ. ಇದು ಕಾಂಗ್ರೆಸ್ ಸರ್ಕಾರದ ಬದ್ದತೆಯಾಗಿದೆ” ಎಂದು ಹೇಳಿದರು.
“ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ರಾಷ್ಟ್ರಕ್ಕೆ ನೀಡಿದ ಕೊಡುಗೆಗಳನ್ನು ನೆನಪಿಸಿಕೊಂಡ ಶಿವಕುಮಾರ, ಅವರನ್ನು ಸ್ಮರಿಸಿಕೊಳ್ಳಬೇಕಿದೆ. ಖರ್ಗೆ ಸಾಹೇಬರ ಕೊಡುಗೆಯನ್ನು ಕೂಡಾ ನಾವು ಸ್ಮರಿಸಿಕೊಳ್ಳಬೇಕಿದೆ. ಜೇವರ್ಗಿ ಕ್ಷೇತ್ರದ ಮಲ್ಲಾಬಾದ್ ಏತನೀರಾವರಿ ಯೋಜನೆಯ ಜಾರಿಗಾಗಿ ಶಾಸಕ ಅಜಯ್ ಸಿಂಗ್ ಹಾಗೂ ಎಂಪಿ ರಾಧಾಕೃಷ್ಣ ದೊಡ್ಡಮನಿ ಒತ್ತಾಯಿಸಿದ್ದರು. ಆದಷ್ಟು ಬೇಗ ಯೋಜನೆಗೆ ನಾನೇ ಶಂಕುಸ್ಥಾಪನೆ ನೆರವೇರಿಸಲಿದ್ದೇನೆ” ಎಂದರು.
ಸಚಿವ ಪ್ರಿಯಾಂಕ್ ಖರ್ಗೆ ಅವರ ಅಭಿವೃದ್ದಿಪರ ಚಿಂತನೆಯನ್ನು ಕೊಂಡಾಡಿದ ಡಿಸಿಎಂ ಕಲ್ಯಾಣಪಥ ಹಾಗೂ ಪ್ರಗತಿ ಪಥ ಯೋಜನೆಯ ಮೂಲಕ ರಸ್ತೆಗಳ ಅಭಿವೃದ್ದಿಗೆ ನಿಂತಿರುವುದು ಅಭಿವೃದ್ದಿಯ ವಿಷಯದಲ್ಲಿ ಅವರ ಬದ್ಧತೆ ತೋರಿಸುತ್ತಿದೆ ಎಂದರು.
ಭಾಷಣಕ್ಕೂ ಮುನ್ನ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರಿಗೆ ಶುಭಾಶಯ ತಿಳಿಸಿ, “ಕಾಂಗ್ರೆಸ್ ಸರ್ಕಾರ ಮಹಿಳೆಯರ ಅನುಕೂಲಕ್ಕಾಗಿಯೇ ಶಕ್ತಿ, ಗೃಹಲಕ್ಷ್ಮೀ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ” ಎಂದರು.
ವೇದಿಕೆಯ ಮೇಲೆ ಸಚಿವರಾದ ಪ್ರಿಯಾಂಕ್ ಖರ್ಗೆ, ಶರಣಬಸಪ್ಪ ದರ್ಶನಾಪುರ, ಶರಣಪ್ರಕಾಶ್ ಪಾಟೀಲ್, ರಹೀಮ್ ಖಾನ್, ಎಂಪಿ ರಾಧಾಕೃಷ್ಣ ದೊಡ್ಡಮನಿ, ಶಾಸಕರಾದ ಎಂ ವೈ ಪಾಟೀಲ, ಬಿ.ಆರ್.ಪಾಟೀಲ, ಅಜಯ್ ಸಿಂಗ್, ಚೆನ್ನಾರೆಡ್ಡಿ ಪಾಟೀಲ ತುನ್ನೂರು, ಅಲ್ಲಮಪ್ರಭು ಪಾಟೀಲ, ರಾಜಾ ವೇಣುಗೋಪಾಲ ನಾಯಕ, ಶರಣು ಸಲಗಾರ, ತಿಪ್ಪಣ್ಣಪ್ಪ ಕಮಕನೂರು, ಜಗದೇವ ಗುತ್ತೇದಾರ, ಎ. ವಸಂತ ಕುಮಾರ ಸೇರಿದಂತೆ ಹಲವರಿದ್ದರು.