“ಬಾಕಿ ಬಿಲ್ ಬಿಡುಗಡೆ ಮಾಡದಿದ್ದರೆ ಆತ್ಮಹತ್ಯೆಯ ದಾರಿ ಹಿಡಿಯಬೇಕಾಗುತ್ತದೆ. ಅದಕ್ಕೆ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ, ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ಹಾಗೂ ಅಧಿಕಾರಿಗಳೇ ಹೊಣೆ” ಎಂದು ಕರ್ನಾಟಕ ರಾಜ್ಯ ವಿದ್ಯುನ್ಮಾನ ನಿಗಮ ನಿಯಮಿತದ (ಕಿಯೋನಿಕ್ಸ್) ವೆಂಡರ್‌ಗಳು ರಾಷ್ಟ್ರಪತಿಯವರಿಗೆ ಪತ್ರ ಬರೆದಿದ್ದಾರೆ.
ಬಾಕಿ ಬಿಲ್ ಬಿಡುಗಡೆಗೆ ಆಗ್ರಹಿಸಿ ಎಂಟು ಸಚಿವರಿಗೆ ರಾಜ್ಯ ಗುತ್ತಿಗೆದಾರರ ಸಂಘ ಪತ್ರ ಬರೆದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿರುವುದು ರಾಜ್ಯದ ಗಮನ ಸೆಳೆದಿದೆ.
“ಕಿಯೋನಿಕ್ಸ್‌ನಲ್ಲಿ ಕೆಲಸ ಮಾಡುತ್ತಿರುವ ಸುಮಾರು 450 ರಿಂದ 500 ವೆಂಡರ್‌ಗಳ ಬಾಕಿ ಬಿಲ್‌ಗಳನ್ನು ಬಿಡುಗಡೆ ಮಾಡುವಲ್ಲಿ ವಿಳಂಬ ಮತ್ತು ಆಡಳಿತ ಮಂಡಳಿಯಿಂದ ಅರ್ಹತಾ ಮಾನದಂಡಗಳಲ್ಲಿನ ಬದಲಾವಣೆಗಳಿಂದಾಗಿ ತೀವ್ರ ಸಂಕಷ್ಟದಲ್ಲಿದ್ದಾರೆ” ಎಂದು ಕಿಯೋನಿಕ್ಸ್ ವೆಂಡರ್ಸ್ ಕ್ಷೇಮಾಭಿವೃದ್ಧಿ ಸಂಘವು ಪ್ರಧಾನಿ ಮೋದಿ ಅವರಿಗೂ ಪತ್ರ ಬರೆದಿದೆ.
ಕೆಲವು ದೊಡ್ಡ ಕಂಪನಿಗಳಿಗೆ ಸಹಾಯ ಮಾಡಲು ಅರ್ಹತಾ ಮಾನದಂಡಗಳನ್ನು ಬದಲಾಯಿಸಲಾಗಿದೆ ಎಂದು ಆರೋಪಿಸಿ, ಬಾಕಿ ಬಿಲ್ ಬಿಡುಗಡೆ ಮಾಡಲು ಮತ್ತು ಕಿರುಕುಳಕ್ಕೆ ಅಂತ್ಯಹಾಡಲು ಪ್ರಧಾನಿಗಳು ಮಧ್ಯಪ್ರವೇಶಿಸಬೇಕು ಎಂದು ಪ್ರಧಾನಿಗೆ ಬರೆದ ಪತ್ರದಲ್ಲಿ ಸಂಘ ಆಗ್ರಹಿಸಿದೆ. ಅಷ್ಟೇ ಅಲ್ಲದೇ ಕೇಂದ್ರ ಐಟಿ/ಬಿಟಿ ಸಚಿವರು ಹಾಗೂ ಕರ್ನಾಟಕ ರಾಜ್ಯಪಾಲರಿಗೂ ಪತ್ರ ರವಾಣಿಸಿದೆ.
“ಸಂಕಷ್ಟದಲ್ಲಿರುವ ವೆಂಡರ್‌ಗಳು ಯಾರಾದರೂ ತಮ್ಮ ಪ್ರಾಣ ಕಳೆದುಕೊಂಡರೆ ಅದಕ್ಕೆ ಐಟಿ, ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ಮತ್ತು ನಿಗಮದ ಹಿರಿಯ ಅಧಿಕಾರಿಗಳು ಹೊಣೆಗಾರರಾಗಿರುತ್ತಾರೆ” ಎಂದು ಸಂಘ ಹೇಳಿದೆ.
“ಸುಮಾರು 350-400 ಕೋಟಿ ರೂಪಾಯಿ ಬಿಲ್ ಬಾಕಿ ಉಳಿದಿದ್ದು, ವೆಂಡರ್ಸ್ ಅವಲಂಬಿಸಿರುವ ಸುಮಾರು 6,000 ಕುಟುಂಬಗಳು ಸಂಕಷ್ಟ ಎದುರಿಸುತ್ತಿವೆ. ಕಮಿಷನ್‌ಗೆ ಬೇಡಿಕೆ ಇಟ್ಟಿದ್ದ ಅಧಿಕಾರಿಯ ವಿರುದ್ಧ ಪ್ರತಿಭಟಿಸಿದ್ದ ಮಾರಾಟಗಾರರಿಗೆ ಕಿರುಕುಳ ನೀಡಲಾಗುತ್ತಿದೆ. ಕೆಲವು ನಿಯಮ ಉಲ್ಲಂಘನೆಗಳ ತನಿಖೆಯ ಹೆಸರಿನಲ್ಲಿ ಬಿಲ್‌ಗಳನ್ನು ತಡೆಹಿಡಿಯಲಾಗುತ್ತಿದೆ” ಎಂದು ಸಂಘದ ಅಧ್ಯಕ್ಷ ವಸಂತ್ ಕೆ ಬಂಗೇರ ಆರೋಪಿಸಿದ್ದಾರೆ.
“ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ಸ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್‌ನಲ್ಲಿ ಸುಮಾರು 500 ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ” ಎಂದು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ 2023 ನವೆಂಬರ್ 9ರಂದು ಆರೋಪಿಸಿದ್ದರು. ಆದರೆ, ಗುರುತರ ಆರೋಪ ಹೊತ್ತಿರುವ ಬಿಜೆಪಿಯೇ “ಬಾಕಿ ಇರುವ ಬಿಲ್‌ಗಳನ್ನು ತೆರವುಗೊಳಿಸಲು ತಕ್ಷಣ ಕ್ರಮ ತೆಗೆದುಕೊಳ್ಳುವಂತೆ” ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಹಾ ಕುಂಭಮೇಳ ಯಾರಿಗಾಗಿ, ಯಾತಕ್ಕಾಗಿ?
ವರ್ಷದ ಹಿಂದೆಯೇ ಅಕ್ರಮ ಬಯಲು ಮಾಡಿದ್ದ ಪ್ರಿಯಾಂಕ್ ಖರ್ಗೆ
ಸಚಿವ ಪ್ರಿಯಾಂಕ್ ಖರ್ಗೆ ಕಳೆದ ವರ್ಷವೇ ಕಿಯೋನಿಕ್ಸ್ ಅಕ್ರಮದ ಬಗ್ಗೆ ರಾಜ್ಯದ ಗಮನ ಸೆಳೆದಿದ್ದರು. “ವಿಧಾನಸಭೆ ಚುನಾವಣೆ ಸಮಯದಲ್ಲಿ ನಮ್ಮ ಪಕ್ಷ ಆರೋಪಿಸಿದಂತೆ ಅಂದಿನ ಬಿಜೆಪಿ ಸರ್ಕಾರ 40% ಕಮಿಷನ್ ಮಾತ್ರ ಪಡೆದಿಲ್ಲ. ಶೇ.400 ಕ್ಕಿಂತ ಹೆಚ್ಚು ಕಮಿಷನ್ ಪಡೆದಿದೆ” ಎಂದು ನೇರವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು.
“ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ, ತಾವು ಸಚಿವರಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಕಿಯೋನಿಕ್ಸ್‌ನಲ್ಲಿ ಒಂದೇ ಒಂದು ಆದೇಶ ಹೊರಡಿಸಿಲ್ಲ ಅಥವಾ ಸಂಸ್ಥೆ ಮೂಲಕ ಯಾವುದೇ ಖರೀದಿ ನಡೆದಿಲ್ಲ. 2019ರಿಂದ 2023ರವರೆಗೆ ನಡೆದಿರುವ 500 ಕೋಟಿ ರೂಪಾಯಿ ಅಕ್ರಮವನ್ನು ಲೆಕ್ಕಪರಿಶೋಧನಾ ವರದಿ ಎತ್ತಿ ತೋರಿಸುತ್ತಿದೆ. ಹಿಂದಿನ ಬಿಜೆಪಿ ಸರ್ಕಾರವು ಕೇವಲ 40% ಕಮಿಷನ್ ಸರ್ಕಾರ ಆಗಿರಲಿಲ್ಲ. 400% ಕಮಿಷನ್ ಸರ್ಕಾರ ಆಗಿತ್ತು. ಇದನ್ನು ನಾನು ಹೇಳುತ್ತಿಲ್ಲ. ಆಡಿಟ್ ರಿಪೋರ್ಟ್ ಹೇಳುತ್ತಿದೆ” ಎಂದು ಖರ್ಗೆ ವರ್ಷದ ಹಿಂದೆಯೇ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.
300 ಕೋಟಿ ಮೊತ್ತದ ಬಿಲ್‌ಗಳನ್ನು ಕ್ಲಿಯರ್ ಮಾಡಲು ಕಿಯೋನಿಕ್ಸ್‌ನ ಅಧಿಕಾರಿಯೊಬ್ಬರು 38 ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಬಿಜೆಪಿಯ ಕೆಲವು ಮುಖಂಡರು ಆರೋಪಿಸಿದ್ದರು. ಪ್ರಿಯಾಂಕ್ ಖರ್ಗೆ ಬಿಜೆಪಿಯ ಆರೋಪಕ್ಕೆ ತಿರುಗೇಟು ನೀಡಿ, “ಬಿಜೆಪಿಯವರೇ ತಿಂದು ತೇಗಿದ್ದಾರೆ. ಬಿಜೆಪಿಯವರದ್ದು ಸುಳ್ಳಿನ ಕಾರ್ಖಾನೆ. ಈ ಬಗ್ಗೆ ನಾವು ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದಲ್ಲಿ ತನಿಖೆ ಮಾಡಿಸುತ್ತೇವೆ. ತನಿಖೆಯಲ್ಲಿ ಯಾರದ್ದೇ ತಪ್ಪಿದ್ದರೂ ಕ್ರಮ ತೆಗೆದುಕೊಳ್ಳುತ್ತೇವೆ. ಕಾಂಗ್ರೆಸ್ ಸರ್ಕಾರ ಜಾರಿಗೆ ತರುತ್ತಿರುವ ಹೊಣೆಗಾರಿಕೆ ಮತ್ತು ಪಾರದರ್ಶಕತೆ ನಿಯಮಗಳಲ್ಲಿನ ಬದಲಾವಣೆಗಳು ಅನೇಕ ಮಾಜಿ ಸಚಿವರು ಮತ್ತು ಶಾಸಕರಿಗೆ ತೊಂದರೆ ಉಂಟುಮಾಡುತ್ತವೆ. ಇದಕ್ಕಾಗಿಯೇ ಅವರು ನಮ್ಮ ವಿರುದ್ಧ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ” ಎಂದು ಹಿಂದೆಯೇ ಸ್ಪಷ್ಟವಾಗಿ ಹೇಳಿದ್ದರು.
ಬಿಲ್ ಪಾವತಿ ಆಗುತ್ತಿಲ್ಲ ಎಂದು ಬಿಜೆಪಿ ಆರೋಪಿಸಿದೆ. ಎಷ್ಟು ಬಿಲ್ ಬಾಕಿ ಇದೆ ಎಂದು ಹೇಳುತ್ತಿಲ್ಲ. ಆರೋಪವನ್ನು ಬೆಂಬಲಿಸಲು ಅವರು ಯಾವುದೇ ಹೋಮ್ ವರ್ಕ್ ಮಾಡಿಲ್ಲ. ಕೇವಲ 16.27 ಕೋಟಿ ರೂ. ಬಿಲ್ ಬಾಕಿ ಇದೆ. ಮ್ಯಾನ್ಯುವಲ್ ಬಿಲ್ಲಿಂಗ್ ಆಗಿದೆ. ಅದನ್ನು ಪರಿಶೀಲಿಸುವುದಕ್ಕೆ ನಾವು ಪೆಂಡಿಂಗ್ ಇಟ್ಟಿದ್ದೇವೆ” ಎಂದು ಪ್ರಿಯಾಂಕ್ ಖರ್ಗೆ ಸ್ಪಷ್ಟನೆ ನೀಡಿದ್ದರು.
“ಅಕೌಂಟೆಂಟ್ ಜನರಲ್ ಆಡಿಟ್ ತಂಡ ಕೆಲವು ಅಕ್ರಮ ಪತ್ತೆ ಹಚ್ಚಿದೆ. ಪರಿಕರಗಳ ಖರೀದಿಯಲ್ಲಿ ಅಕ್ರಮವೆಸಗಿದ್ದಾರೆ. ಮಾರ್ಕೆಟ್ ದರಕ್ಕಿಂತ ಹೆಚ್ಚು ಕೊಟ್ಟು ಖರೀದಿಸಿದ್ದಾರೆ. 1 ಲಕ್ಷ ಇರೋದಕ್ಕೆ 5 ಲಕ್ಷ ಕೊಟ್ಟ ಖರೀದಿಸಿದ್ದಾರೆ. ಶೇ. 38 ರಿಂದ ಶೇ. 1770 ವರೆಗೆ ಅಕ್ರಮವೆಸಗಿದ್ದಾರೆ. 3000 ಬೆಲೆ ಬಾಳುವುದನ್ನು 60 ರೂ. ಗೆ ಮಾರಿದ್ದಾರೆ. 30 ಸಾವಿರದ ಕಂಪ್ಯೂಟರ್ ಅನ್ನು 80 ಸಾವಿರ ರೂ. ಬೆಲೆ ಕೊಟ್ಟು ಖರೀದಿಸಿದ್ದಾರೆ. ಸಿಸಿಟಿವಿ 12 ಸಾವಿರ ಇರುವುದಕ್ಕೆ 60 ಸಾವಿರ ರೂ. ಕೊಟ್ಟಿದ್ದಾರೆ. ಕಂಪ್ಯೂಟರ್ 1.4 ಲಕ್ಷಕ್ಕೆ ಖರೀದಿಸಿದ್ದಾರೆ. ಇವೆಲ್ಲವೂ ಬಿಜೆಪಿ ಅವಧಿಯಲ್ಲಿ ಮಾಡಿರುವುದು” ಎಂಬುದು ಪ್ರಿಯಾಂಕ್ ಖರ್ಗೆ ಅವರ ಆರೋಪ.
ಪ್ರಿಯಾಂಕ್ ಖರ್ಗೆ ಅವರು ಕಿಯೋನಿಕ್ಸ್ ವಿಚಾರವಾಗಿ ಅಕ್ರಮಗಳನ್ನು ಬಯಲು ಮಾಡಿದ ಮೇಲೆ ಕಿಯೋನಿಕ್ಸ್ ವೆಂಡರ್ಸ್ ಕ್ಷೇಮಾಭಿವೃದ್ಧಿ ಸಂಘ ಸಚಿವರ ಮೇಲೆಯೇ ಉದ್ದೇಶಪೂರ್ವಕವಾಗಿ ಆರೋಪ ಮಾಡುತ್ತದೆ ಎನ್ನಲಾಗಿದೆ.
“2023ರಲ್ಲಿ ಸರ್ಕಾರ ಬದಲಾದ ನಂತರ ವೆಂಡರ್‌ಗಳಿಗೆ ಬಿಲ್ ತಡೆ ಹಿಡಿದು ಕಿರುಕುಳ ನೀಡಲಾಗುತ್ತಿದೆ. ಕಳೆದ ಮೂರ್ನಾಲ್ಕು ತಿಂಗಳಿಂದ ಸಚಿವರು, ಅಧಿಕಾರಿಗಳಿಗೆ ಮನವಿ ಮಾಡಿದರೂ ಸ್ಪಂದನೆ ಸಿಕ್ಕಿಲ್ಲ. ಕಿಯೋನಿಕ್ಸ್ ಹಿಂದಿನ ಸಿಇಒ ಸಂಗಪ್ಪ ಅವರು ಬಾಕಿ ಬಿಲ್ ಬಿಡುಗಡೆಗೆ ಶೇ.12ರಷ್ಟು ಕಮಿಷನ್ ಕೇಳಿದ್ದಾರೆ. ಈ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲ. ಬದಲಿಗೆ ನಮ್ಮ ಮೇಲೆಯೇ ದ್ವೇಷ ಸಾಧಿಸಲಾಗಿದೆ” ಕಿಯೋನಿಕ್ಸ್ ಸಂಘ ದೂರುತ್ತಿದೆ.
ಬ್ಲ್ಯಾಕ್ ಮೇಲ್ ನಡೆಯಲ್ಲ: ಖರ್ಗೆ ಎಚ್ಚರಿಕೆ
ಕಿಯೋನಿಕ್ಸ್ ವೆಂಡರ್ಸ್ ಕ್ಷೇಮಾಭಿವೃದ್ಧಿ ಸಂಘ ರಾಷ್ಟ್ರಪತಿಗೆ ಪತ್ರ ಬರೆದ ನಂತರ ಕಡ್ಡಿಮುರಿದಂತೆ ಮಾತನಾಡಿರುವ ಸಚಿವ ಪ್ರಿಯಾಂಕ್ ಖರ್ಗೆ, “ಕಿಯೋನಿಕ್ಸ್‌ನಲ್ಲಿ ನೂರಾರು ಕೋಟಿ ರೂ. ಮೊತ್ತದ ಅಕ್ರಮ ನಡೆದಿದೆ. ಆ ಬಗ್ಗೆ ವಿಚಾರಣೆ ನಡೆಯುತ್ತಿರುವುದರಿಂದ ಬಿಲ್ ವಿಳಂಬವಾಗುತ್ತಿದೆ. ಮಾನದಂಡ ಇಲ್ಲದೆ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ 300 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಪೂರೈಸಲಾಗಿದೆ ಎಂಬ ವರದಿ ಇದೆ. ಕಿಯೋನಿಕ್ಸ್ ವೆಂಡರ್‌ಗಳ ಬ್ಲ್ಯಾಕ್‌ಮೇಲ್ ನಡೆಯುವುದಿಲ್ಲ” ಎಂದು ಎಚ್ಚರಿಕೆ ನೀಡಿದ್ದಾರೆ.
“ಹಿಂದಿನ ಬಿಜೆಪಿ ಸರ್ಕಾರದವರು ಸಾಲ ಮಾಡಿ ತುಪ್ಪ ತಿಂದಿದ್ದಾರೆ. ಅವರು ಮಾಡಿದ ಸಾಲವನ್ನು ನಮ್ಮ ಸರ್ಕಾರ ತೀರಿಸುತ್ತಿದೆ. ಅಶ್ವತ್ಥ ನಾರಾಯಣ ಅವರು ಸಚಿವರಾಗಿದ್ದಾಗ ಕಿಯೋನಿಕ್ಸ್‌ನಲ್ಲಿ ನಡೆದಿರುವ ಅವ್ಯವಹಾರಗಳಿಗೆ ನಾನು ಜವಾಬ್ದಾರನೇ? ಯಾವುದೇ ಮಾನದಂಡ ಪಾಲಿಸದೆ ಖರೀದಿ ಬಿಲ್ಲಿಂಗ್ ಟೆಂಡರ್ ಮಾಡಲಾಗಿದೆ. ಅಂದಾಜು 500 ಕೋಟಿ ರೂ. ಅವ್ಯವಹಾರ ಕಂಡುಬಂದಿದೆ. ಆಡಿಟ್ ವರದಿಯಲ್ಲಿ 300 ಕೋಟಿ ರೂ.ಗೆ ಆಕ್ಷೇಪಣೆ ಇದೆ. ನಾಲ್ಕು ವರ್ಷದ ಆಡಿಟ್ ವರದಿ ಮಾಡಬೇಕಿದೆ. ಇದಕ್ಕೆ ಕಾಲಾವಕಾಶ ಬೇಕಿದ್ದು, ವರದಿ ಆಧಾರದಲ್ಲಿ ಬಿಲ್ ಪಾವತಿಸಲಾಗುತ್ತದೆ. ಈ ಮಧ್ಯೆ ವೆಂಡರ್‌ಗಳು ಬ್ಲ್ಯಾಕ್‌ಮೇಲ್ ಮಾಡುವುದು ಎಷ್ಟು ಸರಿ? ಕೆಲವರಿಗೆ ತೊಂದರೆಯಾದರೂ ನಿಯಮಾವಳಿ ಪಾಲನೆ ಪಾಲಿಸಲೇಬೇಕಿದೆ” ಎಂದು ತಿಳಿಸಿದ್ದಾರೆ.
ಸರಕಾರದ ಖಜಾನೆಗೆ ನೂರಾರು ಕೋಟಿ ನಷ್ಟ: ಶರತ್ ಬಚ್ಚೇಗೌಡ
“ಕಿಯೋನಿಕ್ಸ್ ಹಗರಣದಿಂದ ಸರಕಾರದ ಖಜಾನೆಗೆ ನೂರಾರು ಕೋಟಿ ನಷ್ಟವಾಗಿದೆ. ಮಹೇಶ್ವರ್‌ರಾವ್ ಕಮಿಟಿ ವರದಿ ಪಡೆದು ಶೀಘ್ರವೇ ಬಾಕಿ ಬಿಲ್ ಪಾವತಿಸುತ್ತೇವೆ. 2021, 2022, 2023ನೇ ಸಾಲಿನ ಮೂರು ವರ್ಷದ ಖರ್ಚು ವೆಚ್ಚಗಳ ಪರಿಶೀಲನೆ ನಡೆಯುತ್ತಿದೆ. ಹಗರಣದಲ್ಲಿ ಭಾಗಿಯಾದವರ ವಿರುದ್ಧ ಶಿಸ್ತು ಕ್ರಮ ಜರುಗಿಸುತ್ತೇವೆ” ಎಂದು ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ಹೇಳಿದ್ದಾರೆ.