ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗ ನಡೆಸಿರುವ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಕೋರಿ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ ಎ ನಾರಾಯಣ ಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಪತ್ರದ ಸಾರಾಂಶ ಹೀಗಿದೆ.
384 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ್ದ ಪರೀಕ್ಷೆಗಳಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯದ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ಸತತ ಚಳವಳಿ ಸಂಘಟಿಸುತ್ತ ಬಂದಿರುವುದು ತಮಗೆ ತಿಳಿದ ವಿಷಯ. ಈ ಕುರಿತು ವಿಧಾನಮಂಡಲದ ಉಭಯ ಸದನಗಳಲ್ಲಿ ಚರ್ಚೆಯೂ ನಡೆದಿದೆ. ಚರ್ಚೆಯ ನಂತರ ಉತ್ತರ ನೀಡುವ ಸಂದರ್ಭದಲ್ಲಿ ಈ ವಿಷಯ ನ್ಯಾಯಾಲಯದಲ್ಲಿ ಇರುವುದರಿಂದ ಮಧ್ಯಪ್ರವೇಶ ಮಾಡಲು ಸಾಧ್ಯವಿಲ್ಲ. ನ್ಯಾಯಾಲಯದ ತೀರ್ಪಿನ ನಂತರವೂ ವಿದ್ಯಾರ್ಥಿಗಳಿಗೆ ಅನ್ಯಾಯವಾಗುವ ಸನ್ನಿವೇಶ ನಿರ್ಮಾಣವಾದರೆ ಸರ್ವಪಕ್ಷ ಸಭೆ ಕರೆದು ಸೂಕ್ತ ತೀರ್ಮಾನ ಕೈಗೊಂಡು ನ್ಯಾಯ ಒದಗಿಸುವುದಾಗಿ ನೀವು ಭರವಸೆ ನೀಡಿದ್ದಿರಿ. ಈಗ ಅಂತಹ ಸಂದರ್ಭ, ಸನ್ನಿವೇಶ ನಿರ್ಮಾಣವಾಗಿದೆ.
ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ನೀಡಲಾದ ಪ್ರಶ್ನೆಪತ್ರಿಕೆಯಲ್ಲಿ ಸುಮಾರು 80 ಪ್ರಶ್ನೆಗಳು ದೋಷಪೂರಿತವಾಗಿದ್ದಲ್ಲದೆ, ಸುಮಾರು 30ಕ್ಕೂ ಹೆಚ್ಚು ಪ್ರಶ್ನೆಗಳಿಗೆ ಉತ್ತರ ನೀಡಲು ಸಾಧ್ಯವೇ ಇರಲಿಲ್ಲ. ಈ ಕುರಿತು ಕರ್ನಾಟಕ ಆಡಳಿತ ನ್ಯಾಯಮಂಡಳಿಗೆ ಹಲವು ವಿದ್ಯಾರ್ಥಿಗಳು ಮೊರೆ ಹೋಗಿದ್ದರು. ಇತ್ತೀಚಿಗಷ್ಟೇ ಕರ್ನಾಟಕ ಆಡಳಿತ ನ್ಯಾಯಮಂಡಳಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ತೀರ್ಪು ನೀಡಿ ಅರ್ಜಿಯನ್ನು ವಿಲೇವಾರಿ ಮಾಡಿತ್ತು. ವಿದ್ಯಾರ್ಥಿಗಳು ಎತ್ತಿತೋರಿಸುತ್ತಿರುವ ದೋಷಪೂರಿತ ಪ್ರಶ್ನೆಗಳನ್ನು ಮತ್ತೊಮ್ಮೆ ತಜ್ಞರ ಸಮಿತಿ ಮುಂದೆ ಇಟ್ಟು ಸೂಕ್ತ ನಿರ್ಧಾರ ಕೈಗೊಳ್ಳಿ ಎಂದು ಕೆಪಿಎಸ್ಸಿಗೆ ಕೆಎಟಿ ಆದೇಶ ನೀಡಿತ್ತು. ಇದು ಕಣ್ಣೊರೆಸುವ ತೀರ್ಪು ಮಾತ್ರವಲ್ಲ, ವಿದ್ಯಾರ್ಥಿಗಳಿಗೆ ಮಾಡಿದ ಘೋರ ಅನ್ಯಾಯವಾಗಿತ್ತು. ಕಳ್ಳನ ಕೈಗೆ ಕೀಲಿ ಕೊಟ್ಟರೆ ಏನಾಗುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಕೆಎಟಿ ಆದೇಶ ನೀಡಿದ ಮೇಲೂ ಕೆಪಿಎಸ್ಸಿ ಮುಖ್ಯ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದು, ಬರುವ ಮೇ.3ರಿಂದ ಪರೀಕ್ಷೆಗಳು ನಡೆಯಲಿವೆ.
ಕೆಎಟಿ ನೀಡಿದ ಆದೇಶವನ್ನು ಪ್ರಶ್ನಿಸಿ ಅನೇಕ ವಿದ್ಯಾರ್ಥಿಗಳು ಕರ್ನಾಟಕದ ಉಚ್ಛ ನ್ಯಾಯಾಲಯದ ಮೊರೆ ಹೋದರು. ಕರ್ನಾಟಕ ರಕ್ಷಣಾ ವೇದಿಕೆಯೂ ಸಹ ಹಲವು ವಿದ್ಯಾರ್ಥಿಗಳಿಂದ ಒಂದು ರಿಟ್ ಪಿಟಿಷನ್ ಹಾಕಿಸಿತು. ಇವತ್ತು ಅಂದರೆ, ದಿನಾಂಕ 24-4-2025ರಂದು ಈ ಎಲ್ಲ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ಈ ಅರ್ಜಿಗಳನ್ನು ಸಲ್ಲಿಸಿದ ಎಲ್ಲ 32 ವಿದ್ಯಾರ್ಥಿಗಳಿಗೆ ಮುಖ್ಯ ಪರೀಕ್ಷೆ ಬರೆಯಲು ಅವಕಾಶ ಒದಗಿಸಿ ಆದೇಶ ನೀಡಿದೆ.
ಆದರೆ ದುರದೃಷ್ಟದ ವಿಷಯವೆಂದರೆ ಈ ವಿದ್ಯಾರ್ಥಿಗಳಿಗೆ ಸಿಕ್ಕಿರುವ ಅವಕಾಶ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದಿರುವ 70 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಿಕ್ಕಿಲ್ಲ. ಇದೊಂದು ರೀತಿಯ ವಿಲಕ್ಷಣ ಸನ್ನಿವೇಶ. ಪರೀಕ್ಷೆಯಲ್ಲಿ ಅನ್ಯಾಯವಾಗಿರುವ ಕಾರಣಕ್ಕಾಗಿಯೇ ಹೈಕೋರ್ಟ್ 32 ವಿದ್ಯಾರ್ಥಿಗಳಿಗೆ ಮುಖ್ಯ ಪರೀಕ್ಷೆಯಲ್ಲಿ ಬರೆಯುವ ಅವಕಾಶ ಒದಗಿಸಿದೆ. ಹಾಗಿದ್ದ ಮೇಲೆ ಉಳಿದ 70 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಏನು ಪಾಪ ಮಾಡಿದ್ದರು? ಈ ಎಲ್ಲ 70 ಸಾವಿರ ವಿದ್ಯಾರ್ಥಿಗಳು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವೇ? ಹೈಕೋರ್ಟ್ ಮುಂದೆ ಬರದ ವಿದ್ಯಾರ್ಥಿಗಳಿಗೆ ಮುಖ್ಯ ಪರೀಕ್ಷೆ ಬರೆಯುವ ಅವಕಾಶ ಇಲ್ಲವೆಂದರೆ ಅವರೇನು ಮಾಡಬೇಕು? ಕೊನೆಯ ಪಕ್ಷ ಈಗಲಾದರೂ ಹೈಕೋರ್ಟ್ ಬಾಗಿಲು ತಟ್ಟೋಣ ಎಂದರೆ ಅವರಿಗೆ ಕಾಲಾವಕಾಶವೂ ಇಲ್ಲ.
ಆಗಿರುವ ಅನ್ಯಾಯ ಎಲ್ಲರಿಗೂ ಗೊತ್ತಿದೆ, ನ್ಯಾಯಾಲಯವೂ ಅದೇ ನಿಟ್ಟಿನಲ್ಲಿ ಅರ್ಜಿದಾರರಿಗೆ ಮುಖ್ಯ ಪರೀಕ್ಷೆ ಬರೆಯುವ ಅವಕಾಶ ನೀಡಿದೆ. ಹೀಗಿರುವಾಗ ಅನ್ಯಾಯವಾಗಿರುವ 70 ಸಾವಿರ ವಿದ್ಯಾರ್ಥಿಗಳನ್ನು ಮುಖ್ಯ ಪರೀಕ್ಷೆಯಿಂದ ಹೊರಗೆ ಇಡುವುದು ಅತ್ಯಂತ ಘೋರ ಅನ್ಯಾಯವಾಗುತ್ತದೆ. ಇದು ಸಲ್ಲದು. ನಿಮ್ಮಂಥ ಜನಪರ ಮುಖ್ಯಮಂತ್ರಿಯಾಗಿರುವಾಗ ಇಂಥ ಅನ್ಯಾಯಗಳು ನಡೆಯಕೂಡದು.
ದಯಮಾಡಿ ಈಗಲಾದರೂ ಈ ಬಡಪಾಯಿ ವಿದ್ಯಾರ್ಥಿಗಳ ಕಡೆ ನಿಮ್ಮ ಗಮನ ಹರಿಸಿ. ನೀವೇ ಹೇಳಿದ್ದ ಮಾತನ್ನು ಉಳಿಸಿಕೊಳ್ಳಿ. ಕೂಡಲೇ ಸರ್ವಪಕ್ಷ ಸಭೆ ಕರೆದು ಸೂಕ್ತ ತೀರ್ಮಾನ ತೆಗೆದುಕೊಳ್ಳಿ. ಅದಕ್ಕೂ ಮುನ್ನ ಮೇ.3ರಿಂದ ನಡೆಯಬೇಕಿರುವ ಮುಖ್ಯ ಪರೀಕ್ಷೆಯನ್ನು ಕೂಡಲೇ ಸ್ಥಗಿತಗೊಳಿಸಿ.
ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಮಾತ್ರ ಅನ್ಯಾಯವಾಗಿದೆ ಎಂದು ಭಾವಿಸಬೇಡಿ, ಕನ್ನಡಕ್ಕೆ ಅನ್ಯಾಯವಾಗಿದೆ, ಕನ್ನಡತನಕ್ಕೆ ಅನ್ಯಾಯವಾಗಿದೆ. ಕನ್ನಡ ಮಾಧ್ಯಮದಲ್ಲಿ ಓದುವ ಗ್ರಾಮೀಣ ಭಾಗದ ಮಕ್ಕಳು, ಶೋಷಿತ ಸಮುದಾಯಗಳ ಮಕ್ಕಳಿಗೆ ಅನ್ಯಾಯವಾಗಿದೆ. ನಿಮ್ಮ ಸುತ್ತ ಇರುವ ಹೊಟ್ಟೆ ತುಂಬಿದ ಅಧಿಕಾರಶಾಹಿಯ ಮಾತು ಕೇಳಬೇಡಿ. ಅವರಿಗೆ ಬಡವರ ಮಕ್ಕಳೆಂದರೆ ತಾತ್ಸಾರ. ಅಂಥವರು ಯಾವತ್ತಿಗೂ ಸಾಮಾನ್ಯ ಜನರ ನೋವಿಗೆ ಸ್ಪಂದಿಸಲಾರರು. ನೀವು ಜನರಿಂದ ಆಯ್ಕೆಯಾದವರು. ಜನರ ದುಃಖ ದುಮ್ಮಾನಗಳನ್ನು ನೀವು ಬಲ್ಲವರು. ಹೀಗಾಗಿ ಕೂಡಲೇ ಆಗಿರುವ ಅನ್ಯಾಯವನ್ನು ಸರಿಪಡಿಸಿ. ನೋಟಿಫಿಕೇಷನ್ ರದ್ದು ಮಾಡಿ ಹೊಸದಾಗಿ ನೋಟಿಫಿಕೇಷನ್ ಹೊರಡಿಸಿ ಎಂದು ಆಗ್ರಹಿಸುತ್ತೇನೆ.