ಭ್ರಷ್ಟಾಚಾರ, ಸ್ವಜನಪಕ್ಷಪಾತ, ಹಟಮಾರಿತನ, ಬೇಜವಾಬ್ದಾರಿ ಧೋರಣೆ, ಅಸಮರ್ಪಕ ಕಾರ್ಯನಿರ್ವಹಣೆಯ ಕಾರಣಕ್ಕೆ ಪದೇ ಪದೇ ಸುದ್ದಿಯಾಗುತ್ತಲೇ ಇರುವ ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ), ಈಗ ಮತ್ತೆ ಸುದ್ದಿಯಲ್ಲಿದೆ. ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಭರ್ತಿಗಾಗಿ ಕೆಪಿಎಸ್‌ಸಿ ನಡೆಸಿದ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಯ ಕನ್ನಡಾನುವಾದ ಅತ್ಯಂತ ಕಳಪೆ ಮಟ್ಟದಿಂದ ಕೂಡಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮರು ಪರೀಕ್ಷೆ ನಡೆಸುವಂತೆ ಕೆಪಿಎಸ್‌ಸಿಗೆ ಸೂಚಿಸಿದ್ದಾರೆ.
ಕೆಎಎಸ್ ಅಧಿಕಾರಿಯಾಗಬೇಕೆಂಬ ರಾಜ್ಯದ ಯುವಜನರ ಕನಸುಗಳೊಂದಿಗೆ ಕೆಪಿಎಸ್‌ಸಿ ಆಟವಾಡುತ್ತಿದೆ. ಪ್ರಶ್ನೆ ಪತ್ರಿಕೆಗಳನ್ನು ಸರಿಯಾದ ರೀತಿಯಲ್ಲಿ, ನುರಿತ ಅನುವಾದಕರಿಂದ ಅನುವಾದ ಮಾಡಿಸದೆ, ಗೂಗಲ್ ಟ್ರಾನ್ಸ್‌ಲೇಟ್ ಬಳಸಿ, ಅನುವಾದ ಮಾಡಿ, ಪ್ರಶ್ನೆ ಪತ್ರಿಕೆ ಸಿದ್ದಗೊಳಿಸಿದೆ ಎಂದು ಆರೋಪಿಸಲಾಗುತ್ತಿದೆ. ಆಗಸ್ಟ್ 27ರಂದು ಪರೀಕ್ಷೆ ನಡೆದ ಬಳಿಕ, ಕನ್ನಡದಲ್ಲಿ ಪರೀಕ್ಷೆ ಬರೆದ ಹಲವಾರು ಅಭ್ಯರ್ಥಿಗಳು ಮರು ಪರೀಕ್ಷೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಕಳಪೆ ಅನುವಾದವುಳ್ಳ ಪ್ರಶ್ನೆ ಪತ್ರಿಕೆಯ ಪ್ರತಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಪ್ರತಿಭಟನಾನಿರತ ಅಭ್ಯರ್ಥಿಗಳನ್ನು ಬೆಂಬಲಿಸಿ ಹಲವಾರು ಸಂಘಟನೆಗಳು ಕೂಡ ಬೀದಿಗಿಳಿದಿದ್ದವು.
ಅಭ್ಯರ್ಥಿಗಳ ಹೋರಾಟದ ಪರವಾಗಿ ಮರು ಪರೀಕ್ಷೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ. ”ಕೆಪಿಎಸ್‌ಸಿ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ಪರೀಕ್ಷೆಯಲ್ಲಿ ಕನ್ನಡಕ್ಕೆ ಅನುವಾದ ಮಾಡಲ್ಪಟ್ಟ ಪ್ರಶ್ನೆಗಳು ಅಸಮರ್ಪಕವಾಗಿದ್ದವೆಂಬ ವಿಚಾರ ನನ್ನ ಗಮನಕ್ಕೆ ಬಂದ ತಕ್ಷಣ, ಪರೀಕ್ಷಾರ್ಥಿಗಳಿಗೆ ಅನ್ಯಾಯವಾಗಬಾರದೆಂಬ ಉದ್ದೇಶದಿಂದ ಮುಂದಿನ ಎರಡು ತಿಂಗಳುಗಳ ಒಳಗೆ ಮರುಪರೀಕ್ಷೆ ಮಾಡುವಂತೆ ಕೆಪಿಎಸ್‌ಸಿಗೆ ಸೂಚನೆ ನೀಡಿದ್ದೇನೆ. ಕರ್ತವ್ಯ ಲೋಪವೆಸಗಿದ ಅಧಿಕಾರಿಗಳನ್ನು ಸೇವೆಯನ್ನು ಅಮಾನತು ಮಾಡಲಾಗಿದೆ. ಮುಂಬರುವ ಪರೀಕ್ಷೆಗಳನ್ನು ಅತ್ಯಂತ ಜವಾಬ್ದಾರಿಯುತವಾಗಿ, ಸಮರ್ಪಕವಾಗಿ ನಡೆಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ನಾವು ನೇಮಕಾತಿ ಪ್ರಕ್ರಿಯೆಗಳ ಸಮಗ್ರತೆ ಮತ್ತು ನಂಬಿಕಾರ್ಹತೆಯನ್ನು ಎತ್ತಿಹಿಡಿದು, ಪರೀಕ್ಷಾರ್ಥಿಗಳ ಹಿತರಕ್ಷಿಸಲು ಬದ್ಧರಾಗಿದ್ದೇವೆ” ಎಂದು ಹೇಳಿದ್ದಾರೆ.
ಅಂದಹಾಗೆ, ಕಳೆದ ಮಂಗಳವಾರ ಕೆಪಿಎಸ್‌ಸಿ ಪರೀಕ್ಷೆ ನಡೆದಿದೆ. ಕನ್ನಡದ 52 ಪ್ರಶ್ನೆಗಳಲ್ಲಿ ಹಲವಾರು ತಪ್ಪುಗಳು ಕಂಡುಬಂದಿವೆ. ‘State Assembly’ ಎಂಬ ಪದವನ್ನು ವಿಧಾನಸಭೆ ಎಂದು ಅನುವಾದಿಸದೆ, ರಾಜ್ಯಸಭೆಯೆಂದು ಕೆಪಿಎಸ್‌ಸಿ ತರ್ಜುಮೆ ಮಾಡಿದೆ.
‘ಮಿಷನ್ ಲೈಫ್’ ಎಂಬ ಪರಿಸರ ಸಂಬಂಧಿ ಕಾರ್ಯಕ್ರಮಕ್ಕೆ ಸಂಬಂಧಿಸಿದ ‘Pavillion’ ಎಂಬ ಪದವನ್ನು, ‘ವೇದಿಕೆ’ ಬರೆಯುವ ಬದಲು ‘ಮನರಂಜನಾ ಭವನ’ ಎಂದು ನಮೂದಿಸಿದೆ. ಇನ್ನೊಂದು ಪ್ರಶ್ನೆಯಲ್ಲಿ ‘fiscal responsibility, fiscal deficit’ ಎಂಬುದಕ್ಕೆ ಹಣಕಾಸು ಹೊಣೆಗಾರಿಕೆ ಅಥವಾ ಹಣಕಾಸು ಕೊರತೆ ಎಂದು ಕೊಡುವ ಬದಲಾಗಿ ಆರ್ಥಿಕ ಹೊಣೆಗಾರಿಕೆ, ಆರ್ಥಿಕ ಕೊರತೆ ಎಂದು ತಪ್ಪಾಗಿ ಉಲ್ಲೇಖಿಸಲಾಗಿದೆ. ಬಾಗಲಕೋಟೆಯ ಕಲಾದಗಿ ಪ್ರದೇಶವನ್ನು’ಕಾಲಡ್ಗಿ’ ಎಂದೂ, ಶಿವಮೊಗ್ಗದ ‘ಸೋಗಾನೆ’ ಊರಿನ ಹೆಸರನ್ನು ‘ಸೋಗಣೆ’ ಎಂದು ಬರೆಯಲಾಗಿದೆ. ಅಲ್ಲದೆ, ಬೆಂಗಳೂರಿನ ಪೂಜೇನಹಳ್ಳಿಯನ್ನು ಪೂಜನಹಳ್ಳಿ ಎಂದು ಬರೆಯಲಾಗಿದೆ.
‘sramana tradition’ ಎಂಬುದನ್ನು ಸ್ರಮಾನ ಪರಂಪರೆ ಎಂದು ಅನುವಾದಿಸಲಾಗಿದೆ. ಆದರೆ, ಅದರ ಸರಿಯಾದ ಅನುವಾದ ‘ಶ್ರಮಣ ಪರಂಪರೆ’. ಇನ್ನು, ‘Things in common’ ಎಂಬುದನ್ನು ಸಮಾನವಾಗಿರುವ ಅಂಶಗಳು ಎಂಬುದರ ಬದಲಾಗಿ ಸಾಮಾನ್ಯ ವಿಷಯಗಳು ಎಂದು ಅನುವಾದಿಸಲಾಗಿದೆ. ‘Cadmium’ಅನ್ನು ಕ್ಯಾಡ್ಮಿಯಂ ಎಂದು ಬರೆಯದೆ, ಕ್ಯಾಲ್ಸಿಯಂ ಎಂದು ಉಲ್ಲೇಖಿಸಲಾಗಿದೆ.
ಹೀಗೆ, ಕೆಪಿಎಸ್‌ಸಿ ಅಧಿಕಾರಿಗಳು ಪ್ರಶ್ನೆ ಪತ್ರಿಕೆಯಲ್ಲಿ ನಾನಾ ತಪ್ಪುಗಳನ್ನು ಮಾಡಿದ್ದು, ಕನ್ನಡದಲ್ಲಿ ಪರೀಕ್ಷೆ ಬರೆದ ಅಭ್ಯರ್ಥಿಗಳು ಪರೀಕ್ಷೆಯುದ್ದಕ್ಕೂ ಪ್ರಶ್ನೆಗಳು ಸರಿಯಾಗಿ ಅರ್ಥವಾಗದೆ, ಕಂಗಾಲಾಗಿದ್ದಾರೆ. ವರ್ಷಗಳಿಂದ ತಯಾರಿ ನಡೆಸಿ, ಕೆಪಿಎಸ್‌ಸಿಯ ಯಡವಟ್ಟಿನಿಂದ ಉತ್ತಮವಾಗಿ ಪರೀಕ್ಷೆ ಬರೆಯಲಾಗದೆ ಅಸಹಾಯಕರಾಗಿ ಪರೀಕ್ಷಾ ಕೊಠಡಿಗಳಿಂದ ಹೊರಬಂದಿದ್ದರು. ಬಳಿಕ, ಬೀದಿಗಿಳಿದು ಹೋರಾಟ ನಡೆಸಿದ್ದರು. ಪ್ರಶ್ನೆಗಳು ಅಭ್ಯರ್ಥಿಯ ವಿಷಯ ಜ್ಞಾನ ಪರೀಕ್ಷಿಸುವ ಬದಲು, ಅಭ್ಯರ್ಥಿಗಳ ಪ್ರಶ್ನೆಗಳ ಬಗ್ಗೆ ಫ್ಯಾಕ್ಟ್ ಚೆಕ್ ಮಾಡಬೇಕಾದ ಪರಿಸ್ಥಿತಿಯಲ್ಲಿದ್ದವು ಎಂದು ಕಿಡಿಕಾರಿದ್ದರು.
ಇನ್ನು, ಪರೀಕ್ಷೆ ಬರೆದ ಅಭ್ಯರ್ಥಿಗಳು ತಾವು ಅನುಭವಿಸಿದ ವ್ಯಥೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಟ್ವೀಟ್ ಮಾಡಿದ್ದ ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕ ಜ್ಞಾನೇಂದ್ರ ಕುಮಾರ್ (IAS), ‘ನಾನು ಇವುಗಳನ್ನು (ಅಭ್ಯರ್ಥಿಗಳ ಪೋಸ್ಟ್) ಎಂಜಾಯ್ ಮಾಡುತ್ತಿದ್ದೇನೆ’ ಎಂದು ಬೇಜವಾಬ್ದಾರಿತನದ ಪೋಸ್ಟ್ ಹಾಕಿದ್ದರು. ಆಕ್ರೋಶ ವ್ಯಕ್ತವಾದ ಬಳಿಕ ‘ಡಿಲೀಟ್’ ಮಾಡಿದರು.
ಈ ವರದಿ ಓದಿದ್ದೀರಾ?: ಒಳಮೀಸಲಾತಿಯ ಚೆಂಡು ಉರುಳಿ ಬಂದಿದ್ದು ಎಲ್ಲಿಗೆ?
ಇಂತಹ ಅಧಿಕಾರಿಗಳ ಬೇಜವಾಬ್ದಾರಿ ನಡವಳಿಕೆ, ಕೆಪಿಎಸ್‌ಸಿಯಲ್ಲಿನ ಕರ್ಮಕಾಂಡದಿಂದ ಅಭ್ಯರ್ಥಿಗಳು ಮತ್ತೆ ಪರೀಕ್ಷೆ ಬರೆಯುವಂತಾಗಿದೆ. ತರ್ಜುಮೆಯ ಗುಣಮಟ್ಟ, ಆಂಗ್ಲ ಹಾಗೂ ಕನ್ನಡದಲ್ಲಿ ಪ್ರಶ್ನೆಗಳ ಸಾಮ್ಯತೆ, ವ್ಯಾಕರಣ, ಮುದ್ರಣದ ದೋಷ, ಅಸಂಬದ್ಧ ವಾಕ್ಯ ರಚನೆ, ವ್ಯಾಕರಣ ದೋಷಗಳಿಲ್ಲದಂತೆ ಪ್ರಶ್ನೆ ಪತ್ರಿಕೆಯನ್ನು ತಯಾರಿಸುವಂತೆ ಅಭ್ಯರ್ಥಿಗಳು ಆಗ್ರಹಿಸುತ್ತಿದ್ದಾರೆ.
ಅಭ್ಯರ್ಥಿಗಳು ಈಗ ಪರೀಕ್ಷೆಗಾಗಿ ಮತ್ತೆ ತಯಾರಿ ನಡೆಸಬೇಕಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಮತ್ತೆ ಪರೀಕ್ಷೆ ನಡೆಸಲು ಸರ್ಕಾರದ ಬೊಕ್ಕಸದಿಂದ ಕೋಟ್ಯಂತರ ರೂಪಾಯಿ ಹಣವನ್ನು ಮತ್ತೆ ವ್ಯಯ ಮಾಡಬೇಕಿದೆ. ಜವಾಬ್ದಾರಿಯುತ ಹುದ್ದೆಗಳಿಗೆ ಉತ್ತಮ ಅಧಿಕಾರಿಗಳನ್ನು ಆಯ್ಕೆ ಮಾಡಲು, ನೇಮಿಸಲು ಪರೀಕ್ಷೆ ನಡೆಸುವ ಕೆಪಿಎಸ್‌ಸಿಯೇ ಬೇಜವಾಬ್ದಾರಿತನದಿಂದ ವರ್ತಿಸುತ್ತಿರುವುದು ನಿಜಕ್ಕೂ ಶೋಚನೀಯ ಮತ್ತು ವಿಷಾದನೀಯ.