ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕರಾವಳಿಯಲ್ಲಿ ಏಪ್ರಿಲ್ 26ರಂದು ಲೋಕಸಭೆ ಚುನಾವಣೆ ನಡೆಯುತ್ತಿದ್ದು, ಒಂದು ದಿನಕ್ಕೂ ಮುನ್ನ (ಏಪ್ರಿಲ್ 25) ಕರಾವಳಿಗರು ಬೆಂಗಳೂರಿನಿಂದ ಮಂಗಳೂರಿಗೆ ತಲುಪಲು ಮತ್ತು ಸ್ಥಳೀಯವಾಗಿ ಪ್ರಯಾಣಿಸಲು ಬಸ್‌ಗಾಗಿ ಪರದಾಡಬೇಕಾಯಿತು.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಗುರುವಾರ ದಕ್ಷಿಣ ಕನ್ನಡದಾದ್ಯಂತ ಅದರಲ್ಲೂ ಗ್ರಾಮೀಣ ಭಾಗದ ಜನರು ಬಸ್‌ಗಳ ಕೊರತೆಯಿಂದ ತೊಂದರೆಗೆ ಒಳಗಾದರು.
ಇನ್ನು ಬೆಂಗಳೂರಿನಲ್ಲಿ ಕರಾವಳಿಯ ಹಲವಾರು ಮಂದಿ ಮತದಾನದ ತಮ್ಮ ಹಕ್ಕನ್ನು ಚಲಾಯಿಸಲು ಮಂಗಳೂರಿಗೆ ತಲುಪಲು ಒದ್ದಾಡುವಂತಾಗಿತ್ತು. ಒಂದೆಡೆ ಬಸ್‌ಗಳಲ್ಲಿ ಟಿಕೆಟ್ ದರವು 1600ರಿಂದ ಆರಂಭವಾಗಿ ಮೂರು ಸಾವಿರ ರೂಪಾಯಿವರೆಗೆ ಇದ್ದರೆ, ಬಸ್‌ನಲ್ಲಿ ಸೀಟುಗಳ ಕೊರತೆ ಕೂಡಾ ಕಾಣಿಸಿಕೊಂಡಿದೆ.
ಇದನ್ನು ಓದಿದ್ದೀರಾ? ಲೋಕಸಭಾ ಚುನಾವಣೆ | ಏ.26ರಂದು ಸರ್ಕಾರಿ ಮತ್ತು ಖಾಸಗಿ ಬಸ್‌ಗಳ ಸಂಚಾರ ವ್ಯತ್ಯಯ ಸಾಧ್ಯತೆ
ಏಪ್ರಿಲ್ 25ರ ಸಂಜೆಯಾಗುತ್ತಿದ್ದಂತೆ ಮಂಗಳೂರು, ಉಡುಪಿ, ಹಾಸನ ಭಾಗಗಳಲ್ಲಿ ಕೆಎಸ್‌ಆರ್‌ಟಿಸಿ ವಿಶೇಷ ಬಸ್‌ಗಳನ್ನು ಹೊರಡಿಸಲಾಗಿದ್ದು, ಪ್ರಯಾಣಿಕರಿಗೆ ಇದು ಕೊಂಚ ರಿಲೀಫ್ ನೀಡಿದೆ. ಆದರೂ ರಾಜ್ಯ ರಾಜಧಾನಿ ಬೆಂಗಳೂರಿನ ಮೆಜೆಸ್ಟಿಕ್ ನಿಲ್ದಾಣದಲ್ಲಿ ತಮ್ಮ ಬಸ್‌ಗಾಗಿ ನಿಗದಿ ಪಡಿಸಿದ ಸಮಯಕ್ಕಿಂತ ಎರಡು ತಾಸು ಹೆಚ್ಚು ಕಾಲ ಜನರು ಕಾಯಬೇಕಾದ ಸ್ಥಿತಿ ಉಂಟಾಗಿತ್ತು.
ಇನ್ನು ಕರಾವಳಿಯ ಉಜಿರೆಯ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳು, ವಯೋವೃದ್ಧರು ಸೇರಿದಂತೆ ಜನರು ಸ್ಥಳೀಯ ಬಸ್‌ಗಾಗಿ ಕಾಯುತ್ತಿರುವ ವಿಡಿಯೋ, ಆಡಿಯೋ ವೈರಲ್ ಆಗಿದೆ. “ನಾವು ಸಂಜೆ 4 ರಿಂದ ಒಂದು ಗಂಟೆಗೂ ಅಧಿಕ ಕಾಲ ಬಸ್ ನಿಲ್ದಾಣದಲ್ಲಿ ಕಾದೆವು. ಆದರೆ ಬಸ್ ಸಿಗಲಿಲ್ಲ” ಎಂದು ಜನರು ಹೇಳಿಕೊಂಡಿದ್ದಾರೆ.
ಇನ್ನು ಇತರೆ ರಾಜ್ಯಗಳಲ್ಲೂ ಚುನಾವಣೆ ವೇಳೆ ಇಂತಹ ಸಮಸ್ಯೆ ಉಂಟಾಗಿದೆ. ಪಶ್ಚಿಮ ರಾಜಸ್ಥಾನದ ಪಾಲಿ ಲೋಕಸಭಾ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಇಲ್ಲಿನ ಹಾಲಿ ಸಂಸದ ಬಿಜೆಪಿಯ ಪಿಪಿ ಚೌಧರಿ ಸಂಗೀತಾ ಬೇನಿವಾಲ್ ಅವರಿಗೆ ಈ ನೀರಿನ ಸಮಸ್ಯೆ ಚುನಾವಣೆ ಹೊಸ್ತಿಲಲ್ಲಿ ದೊಡ್ಡ ಸವಾಲಾಗಿದೆ.