“ಹಲವು ತಿಂಗಳಿನಿಂದ ಎಸ್ಐಆರ್ ಕುರಿತು ರಾಜ್ಯಾದ್ಯಂತ ಜಾಗೃತಿ ಮೂಡಿಸುತ್ತಿದ್ದೇವೆ. ಲೋಪದೋಷಗಳ ಬಗ್ಗೆ ಚುನಾವಣಾ ಆಯೋಗಕ್ಕೆ ಹಲವು ಬಾರಿ ಭೇಟಿ ನೀಡಿ ನೂರಾರು ಅರ್ಜಿಗಳನ್ನು ಸಲ್ಲಿಸಿದ್ದರೂ ಈವರೆಗೆ ಒಂದೇ ಒಂದು ಉತ್ತರ ಬಂದಿಲ್ಲ. ಇದು ಚುನಾವಣಾ ಆಯೋಗವಲ್ಲ, ಇದು ಲೂಟಿಕೋರರ ಆಯೋಗ,” ಎಂದು ಜಮಾತ್ ಎ ಇಸ್ಲಾಮಿ ಹಿಂದ್ – ಕರ್ನಾಟಕದ ರಾಜ್ಯ ಕಾರ್ಯದರ್ಶಿ ಯೂಸುಫ್ ಕನ್ನಿ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಚುನಾವಣಾ ಆಯೋಗಕ್ಕೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಜಮಾತ್ ಎ ಇಸ್ಲಾಮಿ ಹಿಂದ್ ನಾಯಕರು, ರಾಜ್ಯದಲ್ಲಿ ಮತದಾರರ ಪಟ್ಟಿಯಿಂದ ಬೃಹತ್ ಪ್ರಮಾಣದಲ್ಲಿ ಹೆಸರುಗಳನ್ನು ತೆಗೆದುಹಾಕಲಾಗುತ್ತಿರುವ ಪ್ರಕ್ರಿಯೆಯನ್ನು ಕಟುವಾಗಿ ಖಂಡಿಸಿದರು.
ಇದನ್ನೂ ಓದಿ: ಮಸೀದಿ ದರ್ಶನ ಕಾರ್ಯಕ್ರಮದ ಮೂಲಕ ಧರ್ಮ ಸೌಹಾರ್ದ ಸಂದೇಶ
“ರಾಜ್ಯದ ಚುನಾವಣಾ ಆಯೋಗವು 5.56 ಲಕ್ಷ ಮತದಾರರಿದ್ದಾರೆ ಎಂದು ಹೇಳಿದೆ. ಆದರೆ, ಎಸ್ಐಆರ್ ಪ್ರಕ್ರಿಯೆಯಲ್ಲಿ 1.8 ಲಕ್ಷ ಜನರ ಹೆಸರನ್ನು ತೆಗೆದುಹಾಕಲಾಗುತ್ತಿದೆ ಎಂದು ತಿಳಿಸುತ್ತಿದ್ದಾರೆ. ಎಎಸ್ಡಿಡಿಒ ಹೆಸರಿನಲ್ಲಿ ಹೆಸರಿನಲ್ಲಿ ಡಿಲೀಟ್ ಮಾಡಲಾಗಿದೆ. ಯಾರೂ ಶಿಫ್ಟ್ ಆಗಬಾರದೇ? ಯಾರೂ ಗೈರುಹಾಜರಾಗಬಾರದೇ (Absent)? ಈ ‘ಅದರ್ಸ್’ (Others) ಎಂದರೆ ಯಾರು? ನಾವು ಈ ಕುರಿತು ಹಲವಾರು ಪ್ರಶ್ನೆಗಳನ್ನು ಕೇಳಿದರೂ ಆಯೋಗ ಯಾವುದಕ್ಕೂ ಉತ್ತರ ನೀಡುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿದ್ದಾರೆ.
“ಬಾಂಗ್ಲಾದೇಶದಿಂದ ನಮ್ಮ ದೇಶಕ್ಕೆ ನುಸುಳುಕೋರರು ಬರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಅವರ ಬಳಿ ಈವರೆಗೆ ನುಸುಳುಕೋರರ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ. ದೇಶಾದ್ಯಂತ ಸುಮಾರು 8 ಕೋಟಿ ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ. ಇವರೆಲ್ಲಾ ಯಾರು ಎಂಬ ಸ್ಪಷ್ಟನೆ ಆಯೋಗದ ಬಳಿಯಿಲ್ಲ” ಎಂದು ದೂರಿದ್ದಾರೆ.
“ಹೆಸರು ಬಿಟ್ಟುಹೋದವರಿಗೆ ‘ಫಾರ್ಮ್ 6 ನೀಡಿ ಮತ್ತೆ ಸೇರಿಕೊಳ್ಳಿ’ ಎಂದು ಆಯೋಗ ಹೇಳುತ್ತಿದೆ. ನಾವೇಕೆ ಫಾರ್ಮ್ 6 ಕೊಡಬೇಕು? ನಾವು ಹೊಸ ಮತದಾರರಲ್ಲ, ಈಗಾಗಲೇ ಹಲವು ಬಾರಿ ಮತ ಚಲಾಯಿಸಿದ್ದೇವೆ. ನಾವು ನೀಡಬೇಕಾಗಿರುವುದು ಫಾರ್ಮ್ 8” ಎಂದು ಹೇಳಿದ್ದಾರೆ.
ಆಯೋಗದ ಈ ಅಕ್ರಮ ಮತ್ತು ಬೇಜವಾಬ್ದಾರಿ ನಡವಳಿಕೆಯನ್ನು ಪ್ರಶ್ನಿಸಲು ಚುನಾವಣಾ ಆಯೋಗಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ ಎಂದು ಕನ್ನಿ ತಿಳಿಸಿದರು. “ನಮ್ಮನ್ನು ಬಂಧಿಸಿದರೂ, ಹೊಡೆದರೂ ನಾವು ಹಿಂಜರಿಯುವುದಿಲ್ಲ. ಚುನಾವಣಾ ಆಯೋಗದಿಂದ ಯಾವುದೇ ಅಧಿಕಾರಿಗಳು ಇಲ್ಲಿಗೆ ಬರುವುದಿಲ್ಲ ಎಂಬುದು ನಮಗೆ ತಿಳಿದಿದೆ. ಆದ್ದರಿಂದ ನಾವೇ ಆಯೋಗದ ಬಳಿಗೆ ಹೋಗುತ್ತಿದ್ದೇವೆ,” ಎಂದು ಸ್ಪಷ್ಟಪಡಿಸಿದರು.



