ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ಕೇವಲ ಮತದಾರರ ಪಟ್ಟಿ ಪರಿಷ್ಕರಣೆಯಲ್ಲ, ಇದರ ಹಿಂದೆ ದೇಶದ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಕುತಂತ್ರವಿದೆ ಎಂದು ಎಂದು ನಟ ಪ್ರಕಾಶ್ ರಾಜ್ ಆರೋಪಿಸಿದರು.
ಬೆಂಗಳೂರಿನಲ್ಲಿ ‘ಎಸ್ಐಆರ್ ವಿರೋಧಿ ಕರ್ನಾಟಕ’ ವೇದಿಕೆ ಆಯೋಜಿಸಿದ್ದ ‘ಚುನಾವಣಾ ಆಯೋಗ ಚಲೋ’ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. “ಎಸ್ಐಆರ್ ಅನ್ನು ರದ್ದುಗೊಳಿಸಿ ಈ ಹಿಂದಿನ ರೀತಿಯಲ್ಲೇ ಎಲ್ಲರನ್ನೂ ಒಳಗೊಳ್ಳುವ ರೀತಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಸಬೇಕು” ಎಂದು ಆಗ್ರಹಿಸಿದರು.
ಇದನ್ನೂ ಓದಿ: ಕಲಬುರಗಿ | ಬಿಜೆಪಿಗೆ ಸೋಲಿನ ಭೀತಿ ಶುರುವಾಗಿದೆ: ಪ್ರಕಾಶ್ ರಾಜ್
‘ಎಸ್ಐಆರ್ ಸಂಚು, ಮೋಸ; ಇದರ ಹಿಂದಿನ ಅಜೆಂಡಾ ದೇಶವನ್ನು ಹಾಳುಮಾಡುವುದು’ ಎಂದು ನೇರವಾಗಿ ಆರೋಪಿಸಿದ ಪ್ರಕಾಶ್ ರಾಜ್, “1950ರಲ್ಲಿ ನಡೆದ ಮತದಾರರ ಪರಿಷ್ಕರಣೆಯ ಉದ್ದೇಶ ಎಲ್ಲರನ್ನೂ ಒಳಗೊಳ್ಳುವುದಾಗಿತ್ತು. ಹಿಂದಿನ ಎಲ್ಲ ಪರಿಷ್ಕರಣೆಗಳು ದೇಶದ ಪ್ರಜೆಗಳಿಗೆ ಗೌರವ ನೀಡಿ ನಡೆದಿದ್ದವು. ಆದರೆ, ಈಗ ಅದೇ ಪ್ರಕ್ರಿಯೆ ಏಕೆ ಸಂಚಾಗಿ ಮಾರ್ಪಟ್ಟಿದೆ” ಎಂದು ಪ್ರಶ್ನಿಸಿದರು.
“ಮುಖ್ಯ ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲೇ ದೇಶದ ಪ್ರಜಾಪ್ರಭುತ್ವವನ್ನು ಕೊಲ್ಲುವ ಕೆಲಸ ಆರಂಭವಾಗಿದೆ. ಚುನಾವಣಾ ಆಯುಕ್ತರನ್ನು ಪ್ರಶ್ನಾತೀತರನ್ನಾಗಿ ಮಾಡಲಾಗಿದೆ” ಎಂದು ಟೀಕಿಸಿದರು.
“ಆರ್ಟಿಐ ಕಾರ್ಯಕರ್ತೆ ಅಂಜಲಿ ಭಾರದ್ವಾಜ್ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೇಳಿದಾಗ ಎಸ್ಐಆರ್ ಚುನಾವಣಾ ಆಯೋಗದ ನಿರ್ಧಾರವಲ್ಲ ಎಂಬುದು ಗೊತ್ತಾಗಿದೆ. ಹಾಗಾದರೆ ಇದು ಯಾರ ನಿರ್ಧಾರ? ಯಾರ ಸಂಚು” ಎಂದು ಪ್ರಶ್ನಿಸಿದರು.
ಎಸ್ಐಆರ್ಗೆ ಕಾಲಮಿತಿ ವಿಧಿಸಿರುವುದನ್ನೂ ಪ್ರಶ್ನಿಸಿದ ಅವರು, “ಇಷ್ಟು ಅರ್ಜೆಂಟ್ ಏಕೆ? ದೇಶದ ಪ್ರಜೆಗಳನ್ನು ಪರೀಕ್ಷೆಗೆ ಕೂರಿಸಲು ನೀವು ಯಾರು?” ಎಂದು ಚುನಾವಣಾ ಆಯೋಗವನ್ನು ತರಾಟೆಗೆ ತೆಗೆದುಕೊಂಡರು.
“ಪಶ್ಚಿಮ ಬಂಗಾಳದಲ್ಲಿ ತರಾತುರಿಯಲ್ಲಿ ಎಸ್ಐಆರ್ ನಡೆಸಲಾಗಿದೆ. ಅಲ್ಲಿ ಸಾಮಾನ್ಯ ಜನರಷ್ಟೇ ಅಲ್ಲದೆ ಚುನಾವಣಾ ಅಧಿಕಾರಿಗಳ ಮತಗಳೂ ಪಟ್ಟಿಯಿಂದ ಹೊರಬಿದ್ದಿವೆ. ಅಲ್ಲಿನ 38 ಮಂದಿ ಮೇಲ್ಮನವಿ ಸಲ್ಲಿಸಿದ್ದು, ಅವರ ಅರ್ಜಿಗಳು ಇತ್ಯರ್ಥವಾಗಲು 20 ವರ್ಷ ಬೇಕಾಗಬಹುದು. ಮುಖ್ಯವಾಗಿ, ಈಗಾಗಲೇ ಟ್ರಿಬ್ಯೂನಲ್ ಇತ್ಯರ್ಥಪಡಿಸಿರುವ ಪ್ರಕರಣಗಳಲ್ಲೇ ಚುನಾವಣಾ ಆಯೋಗ ತಪ್ಪು ಮಾಡಿರುವುದು ಸಾಬೀತಾಗಿದೆ. ಹೀಗಿರುವಾಗ ಈ ಸಂಚನ್ನು ನಾವು ಏಕೆ ಒಪ್ಪಿಕೊಳ್ಳಬೇಕು” ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಧಾರವಾಡ | ಎಸ್ಐಆರ್ ಪ್ರಕ್ರಿಯೆ ʼಅವೈಜ್ಞಾನಿಕʼ ಮತ್ತು ʼಪ್ರಜಾಪ್ರಭುತ್ವ ವಿರೋಧಿʼಯಾಗಿ ನಡೆದಿದೆ: ಪ್ರಕಾಶ್ ರಾಜ್
“ಬೇರೆ ಕೆಲಸಗಳಿಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡುವ ಸರ್ಕಾರ, ಎಸ್ಐಆರ್ ಕುರಿತು ಜನರಿಗೆ ಸರಿಯಾದ ಮಾಹಿತಿ ನೀಡಲು ಏಕೆ ಕ್ರಮ ಕೈಗೊಂಡಿಲ್ಲ. ನಮಗೆ ಹೇಳದೆ ಜೂನ್ 16ರಂದು ಮತದಾರರ ಪಟ್ಟಿಯನ್ನು ಏಕೆ ಫ್ರೀಝ್ ಮಾಡಿದಿರಿ? ಒಂದೂವರೆ ತಿಂಗಳಲ್ಲಿ ಒಂದೂವರೆ ಕೋಟಿ ಜನರನ್ನು ಹೇಗೆ ಡಿಲೀಟ್ ಪಟ್ಟಿಗೆ ಹಾಕಿದಿರಿ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್ಒ) ಮನೆ ಮನೆಗೆ ತೆರಳಬೇಕಿತ್ತು. ಆದರೆ ಅವರು ನಿಜವಾಗಿಯೂ ಮನೆ ಮನೆಗೆ ತೆರಳಿ ಪರಿಶೀಲನೆ ನಡೆಸಿದ್ದಾರೆಯೇ? ರಾಜ್ಯದಲ್ಲಿ ಎಸ್ಐಆರ್ ಸರಿಯಾಗಿ ನಡೆದಿದೆಯೇ? ದೇಶದ ಪ್ರಜೆಗಳನ್ನು ಆತಂಕಕ್ಕೆ ದೂಡುವ ಅಧಿಕಾರ ನಿಮಗೆ ಯಾರು ಕೊಟ್ಟರು?” ಎಂದು ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ನಡೆಸಿದರು.
ASDDO ಕುರಿತು ಆಕ್ರೋಶ ವ್ಯಕ್ತಪಡಿಸಿದ ಪ್ತಕಾಶ್ ರಾಜ್, “ನೀವು ಸ್ಥಳಾಂತರ ಎಂದಿರುವ ಮತದಾರರು ಎಲ್ಲಿದ್ದಾರೆ? ಚಂದ್ರಲೋಕಕ್ಕೆ ಹೋಗಿದ್ದಾರಾ? ಸ್ಥಳಾಂತರಗೊಳ್ಳುವುದು ಈ ದೇಶದಲ್ಲಿ ಮಹಾಪಾಪವೇ? ಅದಕ್ಕಾಗಿ, ಅವರ ಮತದಾನದ ಹಕ್ಕನ್ನೇ ಕಿತ್ತುಕೊಳ್ಳುತ್ತೀರಾ? ಹಕ್ಕುಗಳಿಂದ ಹೊರದಬ್ಬುತ್ತೀರಾ? 16 ಲಕ್ಷ ಜನರು ಮೃತಪಟ್ಟಿದ್ದಾರೆ ಎಂದು ಹೇಳುವುದನ್ನು ಹೇಗೆ ನಂಬಬೇಕು? ಮತದಾರರ ಪಟ್ಟಿಯಲ್ಲಿ ‘Others’ ಎಂದರೆ ಯಾರುಅವರೇನು ಮನುಷ್ಯರಾ, ಕುರಿಗಳಾ, ಕಲ್ಲುಗಳಾ?” ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಪ್ರಕಾಶ್ ರಾಜ್, “ನುಸುಳುಕೋರರು ಬಂದಿದ್ದಾರೆ ಎನ್ನುತ್ತೀರಿ. ಅವರು ಯಾರು? ಒಬ್ಬ ನುಸುಳುಕೋರನನ್ನಾದರೂ ತೋರಿಸಿ. ಸುಪ್ರೀಂ ಕೋರ್ಟ್ ಪಟ್ಟಿ ಕೇಳಿದಾಗ ಏಕೆ ನೀಡಲಿಲ್ಲ ನುಸುಳುಕೋರರು ದೇಶಕ್ಕೆ ಬರುತ್ತಿದ್ದಾಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಡಲೆಕಾಯಿ ತಿನ್ನುತ್ತಿದ್ದರಾ” ಎಂದು ಟೀಕಿಸಿದರು.
“ಎಸ್ಐಆರ್ ಪ್ರಕ್ರಿಯೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾಮಾನ್ಯ ಜನರು ತೊಂದರೆ ಅನುಭವಿಸುತ್ತಿದ್ದಾರೆ. ತೊಂದರೆಗೆ ಒಳಗಾದವರಲ್ಲಿ ಹೂ ಮಾರುವವರು, ಸಣ್ಣ ಹೋಟೆಲ್ ನಡೆಸುವವರು, ಕಟ್ಟಡ ಕಾರ್ಮಿಕರು ಹಾಗೂ ದಿನಗೂಲಿ ಕಾರ್ಮಿಕರಿದ್ದಾರೆ. ಸರ್ಕಾರ ಉದ್ಯೋಗ ನೀಡದಿದ್ದರೂ ತಮ್ಮದೇ ಬದುಕು ಕಟ್ಟಿಕೊಂಡಿರುವ ಈ ಜನರು ಚುನಾವಣಾ ಆಯೋಗದ ತಪ್ಪಿಗೆ ದಾಖಲೆಗಳಿಗಾಗಿ ಕಚೇರಿಗಳಿಗೆ ಅಲೆದಾಡಬೇಕೇ? ಅಧಿಕಾರಿಗಳ ಮುಂದೆ ಕೈಕಟ್ಟಿ ನಿಲ್ಲಬೇಕೇ” ಎಂದು ಪ್ರಶ್ನಿಸಿದರು.
“ಇದುವರೆಗೆ ಮತ ಹಾಕಿರುವ ಇವರ ವೋಟರ್ ಐಡಿ ವ್ಯಾಲಿಡ್ ಅಲ್ಲ ಎಂದು ಹೇಳುತ್ತೀರಲ್ಲ, ನಾಚಿಕೆಯಾಗುವುದಿಲ್ಲವೇ?” ಎಂದು ಚುನಾವಣಾ ಆಯೋಗವನ್ನು ತರಾಟೆಗೆ ತೆಗೆದುಕೊಂಡರು.
“ನಿಮ್ಮ ಸಂಚು ನಮಗೆ ಗೊತ್ತಾಗಿದೆ. ಈ ಹುನ್ನಾರವನ್ನು ಒಪ್ಪಿಕೊಳ್ಳಲು ನಾವು ಸಿದ್ಧರಿಲ್ಲ. ನಾವು ಇದನ್ನು ವಿರೋಧಿಸುತ್ತೇವೆ. ಜನರು ನಿಮ್ಮ ಮುಂದೆ ಭಯದಿಂದ ನಿಲ್ಲುವುದನ್ನು ಒಪ್ಪುವುದಿಲ್ಲ. ಎಸ್ಐಆರ್ ರದ್ದಾಗಲೇಬೇಕು. ಏಕೆಂದರೆ ಇದು ಕುತಂತ್ರ. ಈ ಹಿಂದಿನಂತೆ ಪರಿಷ್ಕರಣೆ ಮಾಡಿ” ಎಂದು ಆಗ್ರಹಿಸಿದರು.




