ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿಚಾರ್ಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಹೈಕೋರ್ಟ್ ಏಕಸದಸ್ಯ ಪೀಠದಿಂದ ಸರ್ಕಾರ ಮತ್ತು ಗೃಹ ಇಲಾಖೆಗೆ ನೋಟಿಸ್ ಜಾರಿ ಮಾಡಿ ಸ್ಪಷ್ಟನೆ ಕೇಳಿದೆ.
ಲಾಠಿಚಾರ್ಜ್ ವಿರುದ್ಧ ಜಯಮೃತ್ಯುಂಜಯ ಶ್ರೀ, ಪಂಚಮಸಾಲಿ ವಕೀಲರ ಪರಿಷತ್ ಸೇರಿದಂತೆ ಧಾರವಾಡ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಪೀಠ ಇದೀಗ ನೋಟಿಸ್ ಜಾರಿ ಮಾಡಿದೆ.
ರಿಟ್ ಅರ್ಜಿ ಸಲ್ಲಿಕೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಬಸವ ಜಯಮೃತ್ಯುಂಜಯ ಸ್ವಾಮೀಜಿ, “ಲಾಠಿಚಾರ್ಜ್ ಬಳಿಕ 12 ಜನರ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ. ಎಫ್ಐಆರ್ ರದ್ದುಪಡಿಸಬೇಕೆಂದು ನಾವು ಸರ್ಕಾರಕ್ಕೆ ಕೇಳಿದ್ದೆವು. ಲಾಠಿಚಾರ್ಜ್ ಸಂಬಂಧ ಸಿಎಂ ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದೆವು. ಆದರೆ ಯಾವುದಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಂದಿಸಿಲ್ಲ. ಹೀಗಾಗಿ ಕೋರ್ಟ್ ಮೊರೆ ಹೋಗಿದ್ದೇವೆ” ಎಂದು ತಿಳಿಸಿದ್ದಾರೆ.
“ನಮ್ಮ ಪರವಾಗಿ ಪ್ರಭುಲಿಂಗ ನಾವದಗಿ, ಪೂಜಾ ವಾದ ಮಂಡಿಸಿದ್ದಾರೆ. ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶ ಆಗಿದೆ. ಹಲ್ಲೆ ಆಗಿದ್ದಕ್ಕೆ ಪಂಚಮಸಾಲಿ ಸಮಾಜದವರು ಧೃತಿಗೆಡುವುದು ಬೇಡ. ಡಿ.23ರಂದು ಹಲ್ಲೆಗೊಳಗಾದವರ ಮನೆಗಳಿಗೆ ಭೇಟಿ ನೀಡುತ್ತೇವೆ” ಎಂದು ಹೇಳಿದರು.
“ಹೋರಾಟದ ವೇಳೆ 144 ಸೆಕ್ಷನ್ ಜಾರಿ ಆಗಿರಲಿಲ್ಲ. ನೇರವಾಗಿ ಲಾಠಿಚಾರ್ಜ್ ಮಾಡಿದ್ದಾರೆ. ಇದನ್ನೆಲ್ಲ ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದೇವೆ. ಲಾಠಿಚಾರ್ಜ್ ಬಳಿಕ ಪುನಃ ಸತ್ಯಾಗ್ರಹವಿತ್ತು. ಸ್ವಾಮೀಜಿ ಡಿ. 19ರವರೆಗೆ ಹೋರಾಟದಲ್ಲಿದ್ದರು. ಹೀಗಾಗಿ ಶುಕ್ರವಾರ ರಿಟ್ ಅರ್ಜಿ ಸಲ್ಲಿಸಿದ್ದೇವೆ” ನ್ಯಾಯವಾದಿ ಪೂಜಾ ಸವದತ್ತಿ ತಿಳಿಸಿದ್ದಾರೆ.