ಲೋಕಸಭಾ ಚುನಾವಣೆ ರಾಜ್ಯದ ಎಲ್ಲ ಕ್ಷೇತ್ರಗಳಿಗೂ ಪ್ರಮುಖ ಮೂರು ಪಕ್ಷಗಳು ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ ಭಾರೀ ತಯಾರಿ ನಡೆಸುತ್ತಿವೆ. ಮೋದಿ ಹೆಸರಲ್ಲಿನಲ್ಲೇ ಕಳೆದ ಚುನಾವಣೆ ಗೆದ್ದಿದ್ದ ರಾಜ್ಯದ ಬಿಜೆಪಿಗರು, ಈಗಲೂ ಮೋದಿ ಹೆಸರನ್ನೇ ಮುಂದಿಟ್ಟುಕೊಂಡು ಚುನಾವಣೆಗೆ ಹೋಗುತ್ತಿದೆ. ಹಾಗಾಗಿಯೇ, ರಾಜ್ಯದಲ್ಲಿ 40 ದಿನಗಳ ಕಾಲ ‘ಧನ್ಯವಾದ ಮೋದಿ’ ಅಭಿಯಾನ ಆರಂಭಿಸಿದೆ.
ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ರಾಜ್ಯ ಸಂಚಾಲಕ ವಿ ಸುನೀಲ್ ಕುಮಾರ್, “ಕಳೆದ 10 ವರ್ಷಗಳ ಮೋದಿ ಆಡಳಿತದಲ್ಲಿ ಬಿಜೆಪಿ ಸರ್ಕಾರದ ಕೊಡುಗೆಗಳ ಬಗ್ಗೆ ರಾಜ್ಯದ ಜನರಿಗೆ ತಿಳಿಸಲು ಮುಂದಾಗಿದ್ದೇವೆ. ಅದಕ್ಕಾಗಿ, 40 ದಿನಗಳ ಕಾಲ ‘ಧನ್ಯವಾದ ಮೋದಿ’ ಅಭಿಯಾನ ನಡೆಸುತ್ತಿದ್ದೇವೆ” ಎಂದು ಹೇಳಿದ್ದಾರೆ.
“ಮೋದಿ ಅವರು ಯಾವುದೇ ತಾರತಮ್ಯ ಇಲ್ಲದ ಆಡಳಿತ ನೀಡಿದ್ದಾರೆ. ಕರ್ನಾಟಕಕ್ಕೆ ಕೇಂದ್ರ ಸರ್ಕಾರದ ಕೊಡುಗೆಗಳನ್ನು ಗುರುತಿಸಿ, ವಿಡಿಯೋ ಮೂಲಕ ಅಭಿಯಾನದಲ್ಲಿ ಜನರಿಗೆ ಪರಿಚಯಿಸಲಾಗುತ್ತದೆ” ಎಂದು ಹೇಳಿದ್ದಾರೆ.
“ಯುವಕರು, ಮಹಿಳೆಯರು, ರೈತರು ಮತ್ತು ಬಡವರ ವರ್ಗಗಳ ಕಲ್ಯಾಣಕ್ಕಾಗಿ ದುಡಿಯುತ್ತೇವೆಂದು ಮೋದಿ ಹೇಳಿದ್ದಾರೆ. ಈ ಕ್ಷೇತ್ರಗಳಿಗಾಗಿ ಬೇರೆ-ಬೇರೆ ಕಾರ್ಯಕ್ರಮಗಳನ್ನು ಕೇಂದ್ರ ಸರ್ಕಾರ ನೀಡುತ್ತಿದೆ” ಎಂದಿದ್ದಾರೆ.