ಬೆಂಗಳೂರು, ರಾಯಚೂರು, ಬೆಳಗಾವಿ, ಬಾಗಲಕೋಟೆ ಸೇರಿದಂತೆ ಕರ್ನಾಟಕದ ಹಲವೆಡೆ ಶುಕ್ರವಾರ ಬೆಳ್ಳಂಬೆಳಗ್ಗೆಯೇ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ಆರಂಭಿಸಿದ್ದಾರೆ.
ಬೆಂಗಳೂರಿನಲ್ಲಿ ಕೂಡ ಬಿಬಿಎಂಪಿ ಎಇಇ ಮಾಧವ ರಾವ್ ಮನೆ ಮೇಲೆ ದಾಳಿ ನಡೆದಿದೆ. ಎಂಜಿನಿಯರಿಂಗ್ ವಿಭಾಗದ ಎಇಇ ಮಾಧವರಾವ್ ಮನೆಗೆ ತಲುಪಿರುವ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಬೆಳಗಾವಿಯಲ್ಲಿ ಇಬ್ಬರು ಅಧಿಕಾರಿಗಳ ಮನೆ ಮೇಲೆ ಲೋಕಾ ದಾಳಿ ನಡೆದಿದೆ. ಬೆಳಗಾವಿ ನಗರದ ಅನಗೋಳದಲ್ಲಿರುವ, ಬೆಳಗಾವಿ ಪ್ರಭಾರಿ ಸಬ್ ರಿಜಿಸ್ಟರ್ ಸಚಿನ್ ಮಂಡೇದ್ ಮನೆ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಮನೆ, ಕಚೇರಿ ಸೇರಿ 3 ಕಡೆಗಳಲ್ಲಿ ದಾಳಿ ನಡೆಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಹಾ ಕುಂಭಮೇಳವೆಂಬ ಸನಾತನ ಗರ್ವ, ಕಾಲ್ತುಳಿತದ ಪರ್ವ
ಹಾರೂಗೇರಿ ಪಶು ವೈದ್ಯಕೀಯ ಇನ್ಸ್ಪೆಕ್ಟರ್ ಸಂಜಯ್ ಮನೆ ಮೇಲೂ ದಾಳಿ ನಡೆದಿದೆ. ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ನಿವಾಸದ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು, ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಬಾಗಲಕೋಟೆ: ಪಿಡಿಒ ಮನೆ ಮೇಲೆ ಲೋಕಾ ದಾಳಿ
ಗ್ರಾಮ ಪಂಚಾಯತ್ ಪಿಡಿಒ ಎಸ್.ಪಿ.ಹಿರೇಮಠ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಬಾಗಲಕೋಟೆಯ ವಿದ್ಯಾಗಿರಿಯ 22ನೇ ಕ್ರಾಸ್ನಲ್ಲಿರುವ ಮನೆ ಮೇಲೆ ಬಾಗಲಕೋಟೆ ಲೋಕಾಯುಕ್ತ ಡಿವೈಎಸ್ಪಿ ಸಿದ್ದೇಶ್ ನೇತೃತ್ವದಲ್ಲಿ ದಾಳಿ ನಡೆದಿದೆ. ಲೋಕಾಯುಕ್ತರು ಏಕಕಾಲಕ್ಕೆ ಮೂರು ಕಡೆ ದಾಳಿ ನಡೆಸಿದ್ದಾರೆ. ಹಿರೇಮಠ ಅವರ ನರಗುಂದದ ನಿವಾಸದ ಮೇಲೂ ದಾಳಿ ನಡೆದಿದೆ.
ಹೂಲಗೇರಿ ಪಿಡಿಒ ಎಸ್.ಪಿ.ಹಿರೇಮಠ ಐಷಾರಾಮಿ ಮನೆ ಹೊಂದಿದ್ದು, ಇವರ ಮನೆಯಲ್ಲಿ ಪತ್ತೆಯಾಗಿರುವ ನಗದು ನೋಟುಗಳನ್ನು ಎಣಿಸಲು ಲೋಕಾ ಅಧಿಕಾರಿಗಳು ಮನೆಯೊಳಗೆ ಹಣ ಎಣಿಸುವ ಯಂತ್ರ ತೆಗೆದುಕೊಂಡು ಹೋಗಿದ್ದಾರೆ.
ಮತ್ತೊಂದೆಡೆ, ಜಿ.ಪಂ. ಲೆಕ್ಕಪತ್ರ ಸಹಾಯಕ ಅಧಿಕಾರಿ ನರಸಿಂಗ್ ರಾವ್ ಅವರ ರಾಯಚೂರು ನಗರದ ಜವಾರ್ ಕಾಲೋನಿಯಲ್ಲಿನ ಮನೆ ಮೇಲೆ ಲೋಕಾ ದಾಳಿ ನಡೆದಿದೆ. ಸದ್ಯ ಅಧಿಕಾರಿಗಳಿಂದ ದಾಖಲೆಗಳ ಪರಿಶೀಲನೆ ಮುಂದುವರಿದಿದೆ.
