ಪೆಟ್ರೋಲ್, ಡೀಸೆಲ್ ದರ ಇಳಿಕೆ ಮಾಡುವಂತೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಮೂರು ದಿನದಿಂದ ನಡೆಸುತ್ತಿದ್ದ ಲಾರಿ ಮಾಲೀಕರ ಸಂಘ ತನ್ನ ಮುಷ್ಕರವನ್ನು ವಾಪಸ್ ಪಡೆದಿದೆ.
ಏಪ್ರಿಲ್ 14ರ ರಾತ್ರಿಯಿಂದ ಲಾರಿ ಸಂಚಾರ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಲಾರಿ ಮಾಲೀಕರ ಸಂಘ ಕರೆ ನೀಡಿತ್ತು. “ಸಾರಿಗೆ ಸಚಿವರು, ಮುಖ್ಯಮಂತ್ರಿಯವರು ಎರಡು ಬಾರಿ ಮಾತುಕತೆ ನಡೆಸಿದ್ದರೂ ನಮ್ಮ ಬೇಡಿಕೆ ಈಡೇರಿಲ್ಲ. ಡೀಸೆಲ್ ದರ ಇಳಿಸುವವರೆಗೆ ಮುಷ್ಕರ ಕೈಬಿಡುವುದಿಲ್ಲ” ಎಂದು ರಾಜ್ಯ ಲಾರಿ ಮಾಲೀಕರ ಹಾಗೂ ಏಜೆಂಟರ ಸಂಘದ ಅಧ್ಯಕ್ಷ ಜಿ.ಆರ್. ಷಣ್ಮುಖಪ್ಪ ಸ್ಪಷ್ಟಪಡಿಸಿದ್ದರು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ಆರಂಭಿಸಿದ್ದ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘದ ಪದಾಧಿಕಾರಿಗಳೊಂದಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಏ.15ರಂದುಎರಡು ಸುತ್ತಿನ ಸಂಧಾನ ಸಭೆ ನಡೆಸಿದ್ದರು. ಆಗಲೂ ಸಭೆ ಸಫಲವಾಗಿರಲಿಲ್ಲ.
ಗುರುವಾರ ಸಚಿವ ರಾಮಲಿಂಗಾರೆಡ್ಡಿ ನಡೆಸಿದ ಮೂರನೇ ಸಂಧಾನ ಸಭೆ ಯಶಸ್ವಿಯಾಗಿದೆ. ಹೀಗಾಗಿ ಲಾರಿ ಮುಷ್ಕರ ವಾಪಾಸ್ಸು ಪಡೆಯುವಂತಹ ನಿರ್ಧಾರವನ್ನು ಲಾರಿ ಮಾಲೀಕರ ಸಂಘ ತೆಗೆದುಕೊಂಡಿದೆ. “ನಮ್ಮ ಎಲ್ಲ ಬೇಡಿಕೆ ಈಡೇರಿಸುವ ಭರವಸೆಯನ್ನು ಸಚಿವ ರಾಮಲಿಂಗಾರೆಡ್ಡಿ ನೀಡಿದ್ದಾರೆ. ಈ ಕ್ಷಣದಿಂದಲೇ ಲಾರಿ ಮುಷ್ಕರ ವಾಪಸ್ ಪಡೆಯುತ್ತೇವೆ” ಎಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷರು ತಿಳಿಸಿದ್ದಾರೆ.