ಇದು ಸರ್ಕಾರದ ಮಂತ್ರಿಗಳು, ಶಾಸಕರು, ಅಧಿಕಾರಿಗಳು, ಕಸಾಪ ಪದಾಧಿಕಾರಿಗಳು ತಿಂಗಳ ಕಾಲ ಶ್ರಮವಹಿಸಿ ನಡೆಸುತ್ತಿರುವ ರಾಜ್ಯದ ಅತಿದೊಡ್ಡ ಕನ್ನಡದ ಸಮಾವೇಶ. ಇಲ್ಲಿಗೆ ಬರುವ ಅತಿಥಿಗಳು ಮಾತ್ರವಲ್ಲ ಜನಸಾಮಾನ್ಯರೂ ಶೌಚಕ್ಕೆ ಪರದಾಡುವಂತಾಗಬಾರದು. ಅದರಲ್ಲೂ ಸಾವಿರಾರು ಮಂದಿ ಓಡಾಡುವ ಜಾಗದಲ್ಲಿ ಬಯಲು ಶೌಚ ಅಕ್ಷಮ್ಯ.
ಮಂಡ್ಯದಲ್ಲಿ ಡಿಸೆಂಬರ್ 20ರಿಂದ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ನೂರಾರು ಅತಿಥಿಗಳು, ಸಾವಿರಾರು ಕನ್ನಡಾಭಿಮಾನಿಗಳು ಬಂದಿದ್ದಾರೆ. ಪುಸ್ತಕ ಪ್ರದರ್ಶನ, ವಾಣಿಜ್ಯ ಮಳಿಗೆಗಳು ಜನರಿಂದ ತುಂಬಿ ತುಳುಕುತ್ತಿವೆ. ಊಟೋಪಚಾರವೂ ಸಾಂಗವಾಗಿ ನಡೆಯುತ್ತಿದೆ. ಸಂಜೆಯಾದರೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮಂಡ್ಯದ ಸುತ್ತಮುತ್ತಲಿನ ಜನ ಸಾಗರೋಪಾದಿಯಲ್ಲಿ ಬರುತ್ತಿದ್ದಾರೆ. ಬೀದಿ ವ್ಯಾಪಾರಿಗಳು, ತಿಂಡಿ ತಿನಿಸು, ಜ್ಯೂಸ್ ಅಂಗಡಿಗಳು ಸಮ್ಮೇಳನದ ಮುಖ್ಯದ್ವಾರದಿಂದಲೇ ಸ್ವಾಗತಿಸುತ್ತಿವೆ.
ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಅಕ್ಷರ ಜಾತ್ರೆ, ನುಡಿಹಬ್ಬ, ನುಡಿಜಾತ್ರೆ, ಕನ್ನಡದ ಜಾತ್ರೆ ಎಂದು ಕರೆಯುವುದು ಸಾಮಾನ್ಯ. ಆದರೆ ಮಂಡ್ಯದಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನವನ್ನು ಜಾತ್ರೆ ಎಂದಷ್ಟೇ ಕರೆಯುವುದು ಅನಿವಾರ್ಯವಾಗಿದೆ. ಯಾಕೆಂದರೆ ಮಂಡ್ಯದ ಸಮ್ಮೇಳನದ ಆವರಣದಲ್ಲಿ ಅಕ್ಷರಶಃ ಜಾತ್ರೆಯ ವಾತಾವರಣ ನಿರ್ಮಾಣವಾಗಿದೆ. ಆದರೆ, ಐವತ್ತು ಕೋಟಿ ವೆಚ್ಚದಲ್ಲಿ ಸರ್ಕಾರದ ಅನುದಾನದಲ್ಲಿ ನಡೆಸಲಾಗುತ್ತಿರುವ ಸಾಹಿತ್ಯ ಸಮ್ಮೇಳನದ ಆವರಣದಲ್ಲಿ ಬಯಲು ಶೌಚಾಲಯ ತೆರೆದು ಜಿಲ್ಲಾಡಳಿತ ಬೇಜವಾಬ್ದಾರಿತನ ತೋರಿದೆ.
ಪುಸ್ತಕ ಮಳಿಗೆಗಳ ಹಿಂಭಾಗ ಶೌಚಾಲಯ ಎಂಬ ಬೋರ್ಡ್ ನೇತು ಹಾಕಲಾಗಿದೆ. ಅತ್ತ ನೋಡಿದ್ರೆ ಕಬ್ಬಿನ ಗದ್ದೆ. ಅಲ್ಲಿ ಯಾವುದೇ ಶೌಚಾಲಯ ಕಟ್ಟಡ, ಕೃತಕ ವ್ಯವಸ್ಥೆಯೂ ಇಲ್ಲ. ಗದ್ದೆಯ ಏರಿಯ ಮೇಲೆ ನಿಂತು ಪುರುಷರು ಮೂತ್ರ ಮಾಡುತ್ತಿದ್ದಾರೆ. ಅಲ್ಲಿಯೇ ಸ್ವಲ್ಪ ಮುಂದೆ ಹೋದರೆ ಕಬ್ಬಿಣದ ಕೃತಕ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಹೊರಗೆ ಸಿಂಟೆಂಕ್ಸ್ ಟ್ಯಾಂಕ್ ಇಟ್ಟಿದ್ದಾರೆ. ಶೌಚಾಲಯದ ಒಳಗೆ ನಲ್ಲಿ ನೀರಿನ ವ್ಯವಸ್ಥೆ ಮಾಡಿಲ್ಲ, ಬಕೆಟ್ನಲ್ಲಿ ನೀರೆತ್ತಿಕೊಂಡು ಹೋಗಿ ಬಳಸಬೇಕು. ಅಲ್ಲಿ ಪುರುಷರು, ಮಹಿಳೆಯರು ಎಂಬ ಭೇದಭಾವ ಇಲ್ಲ, ಎಲ್ಲರೂ ಬಳಸುತ್ತಿದ್ದರು. ಮಹಿಳೆಯರು ಅಸಹ್ಯಪಡುತ್ತಲೇ ಅನಿವಾರ್ಯವಾಗಿ ಶೌಚಕಾರ್ಯ ಮುಗಿಸುತ್ತಿದ್ದರು.

ಜಾತ್ರೆಯಲ್ಲಿ ಶೌಚಾಲಯ ವ್ಯವಸ್ಥೆ ನಿರೀಕ್ಷೆ ಮಾಡಲು ಆಗಲ್ಲ. ಹಾಗಾಗಿ ಜಿಲ್ಲಾಡಳಿತ ಇದನ್ನು ಊರಿನ ಜಾತ್ರೆ ಎಂದು ಭಾವಿಸಿದಂತಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸಾವಿರಾರು ಮಂದಿ ಬರುತ್ತಾರೆ. ಇಡೀ ದಿನ ಸಮ್ಮೇಳನದ ಪೆಂಡಾಲ್ನಲ್ಲಿ ಮಹಿಳೆಯರು ಕೂತಿರುತ್ತಾರೆ. ಹಿರಿಯ ಸಾಹಿತಿಗಳು, ಆರೋಗ್ಯ ಸಮಸ್ಯೆ ಇರುತ್ತದೆ. ಆದರೆ, ಶೌಚಕ್ಕೆ ಹೋಗಬೇಕಾದರೆ ಪರದಾಡಬೇಕಾಗಿದೆ. ಇದು ಸರ್ಕಾರದ ಮಂತ್ರಿಗಳು, ಶಾಸಕರು, ಅಧಿಕಾರಿಗಳು, ಕಸಾಪ ಪದಾಧಿಕಾರಿಗಳು ತಿಂಗಳ ಕಾಲ ಶ್ರಮವಹಿಸಿ ನಡೆಸುತ್ತಿರುವ ರಾಜ್ಯದ ಅತಿದೊಡ್ಡ ಕನ್ನಡದ ಸಮಾವೇಶ. ಇಲ್ಲಿಗೆ ಬರುವ ಅತಿಥಿಗಳು ಮಾತ್ರವಲ್ಲ ಜನಸಾಮಾನ್ಯರೂ ಶೌಚಕ್ಕೆ ಪರದಾಡುವಂತಾಗಬಾರದು. ಅದರಲ್ಲೂ ಸಾವಿರಾರು ಮಂದಿ ಓಡಾಡುವ ಜಾಗದಲ್ಲಿ ಬಯಲು ಶೌಚ ಅಕ್ಷಮ್ಯ. ಸಮ್ಮೇಳನದ ಆಯೋಜಕರು ವೇದಿಕೆ ಕಾರ್ಯಕ್ರಮ, ಊಟ, ವಸತಿಯಷ್ಟೇ ಶೌಚಾಲಯ ವ್ಯವಸ್ಥೆಯೂ ಮುಖ್ಯ ಎಂದು ಭಾವಿಸದಿರುವುದು ಈ ಸಮ್ಮೇಳನ ಬಹುದೊಡ್ಡ ಲೋಪ. ಮುಖ್ಯವಾಗಿ ಸಾಮಾನ್ಯರನ್ನು ಕೇವಲ ʼಜನರುʼ ಎಂದಷ್ಟೇ ಪ್ರಭುತ್ವ ಭಾವಿಸಿದಂತಿದೆ. ಹಾಗಾಗಿ ಅವರಿಗೂ ಮೂಲಭೂತ ಸೌಕರ್ಯ ಕೊಡಬೇಕು ಎಂಬ ಕನಿಷ್ಠ ಪ್ರಜ್ಞೆ ಇಲ್ಲ. ಸಾಮಾನ್ಯ ಜನರ ಹೈಜಿನ್ ಮುಖ್ಯ ಎಂಬುದನ್ನು ಸಮಾಜ ಮನಗಾಣಬೇಕಿದೆ.
ಇದನ್ನೂ ಓದಿ ಸಾಹಿತ್ಯ ಸಮ್ಮೇಳನ | ಗಾಂಧಿ ನಾಯಕತ್ವ, ಅಂಬೇಡ್ಕರ್ ವಿದ್ವತ್ತು ದೇಶದ ಸಾಹಿತ್ಯದ ಮೇಲೆ ಪ್ರಭಾವ ಬೀರಿದೆ: ಬಿ ಎಲ್ ಶಂಕರ್
ಶನಿವಾರ ಸಂಜೆ ಐದೂವರೆಗೆ ಸುರಿದ ಮಳೆಯಿಂದಾಗಿ ಇಡೀ ಪ್ರದೇಶ ಕೆಸರುಗದ್ದೆಯಾಗಿತ್ತು. ಒಳಹೋಗಲು, ಹೊರಬರಲು ಒಂದೇ ದ್ವಾರವಿದ್ದ ಕಾರಣ ಜನಜಂಗುಳಿಯಿಂದಾಗಿ ರಾತ್ರಿ ಹನ್ನೊಂದರವರೆಗೂ ಎರಡೂ ಕಡೆ ಹೋಗಲಾಗದೇ ಜನ ಪರದಾಡಿದರು. ಹಲವರು ಕೆಸರಿನಲ್ಲಿ ಬಿದ್ದರು. ಕೆಲವರ ಚಪ್ಪಲಿ ಕಿತ್ತುಹೋಗಿ ಬರಿಗಾಲಿನಲ್ಲಿ ನಡೆದರು. ರಸ್ತೆಯುದ್ದಕ್ಕೂ ವಾಹನ ಸವಾರರು ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಲೆಂದು ಬರುತ್ತಿದ್ದ ಜನರೇ ತುಂಬಿದ್ದರು. ಸಮ್ಮೇಳನದ ಆವರಣದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಿದ್ದರೂ ಒಂದೇ ದ್ವಾರ ಮಾಡಿರುವುದರಿಂದ ಅದ್ವಾನಕ್ಕೆ ಕಾರಣವಾಗಿತ್ತು.

ಹೇಮಾ ವೆಂಕಟ್
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.