ಮಕ್ಕಳಲ್ಲಿ ಪೌಷ್ಠಿಕ ಆಹಾರ ವೃದ್ಧಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಶಾಲಾ ಮಕ್ಕಳಿಗೆ ಮೊಟ್ಟೆ ಮತ್ತು ಚಿಕ್ಕಿ ನೀಡುತ್ತಿದೆ. ಆದರೆ, ಮಂಡ್ಯ ತಾಲೂಕಿನ ಆಲಕೆರೆ ಗ್ರಾಮದಲ್ಲಿ ಧಾರ್ಮಿಕ ಆಚರಣೆ ನೆಪವೊಡ್ಡಿ ಮೊಟ್ಟೆ ವಿತರಣೆ ವಿರೋಧಿಸಿ ಪೋಷಕರು 84 ವಿದ್ಯಾರ್ಥಿಗಳ ವರ್ಗಾವಣೆ ಪತ್ರ ಪಡೆದು ಬೇರೆ ಶಾಲೆಗಳಿಗೆ ದಾಖಲಿಸಿದ್ದಾರೆ.
ಶಾಲೆಯ ಪಕ್ಕದಲ್ಲೇ ವೀರಭದ್ರೇಶ್ವರ ದೇವಾಲಯ ಇದೆ. ಹೀಗಾಗಿ ಶಾಲೆಯಲ್ಲಿ ಮೊಟ್ಟೆ ಬೇಯಿಸಬೇಡಿ ಎಂದು ಸವರ್ಣೀಯ ಸಮುದಾಯದ ಪೋಷಕರು ಆಗ್ರಹಿಸಿದ್ದರು. ದೇವಸ್ಥಾನ ಆವರಣದಲ್ಲಿ ಮೊಟ್ಟೆ ಬೇಯಿಸುವುದು ಧಾರ್ಮಿಕ ನಂಬಿಕೆ ಮಸಿಬಳಿದಂತೆ. ಹೀಗಾಗಿ ಮೊಟ್ಟೆಯನ್ನು ಇಲ್ಲಿ ಬೇಯಿಸಬೇಡಿ ಎಂದು ಎನ್ನುವ ಒತ್ತಾಯವೂ ಇತ್ತು ಎನ್ನಲಾಗಿದೆ.
ಅಧಿಕಾರಿಗಳು ನಿಯಮದಂತೆ ಶಾಲೆಯಲ್ಲಿ ಮೊಟ್ಟೆ ವಿತರಣೆ ಆರಂಭಿಸಿದ್ದರಿಂದ ಪೋಷಕರು ತಮ್ಮ ಮಕ್ಕಳನ್ನು ಈಗ ಅಕ್ಕಪಕ್ಕದ ಕೀಲಾರ, ಹನಕೆರೆ ಹಾಗೂ ಬೆಸರಗರಹಳ್ಳಿ ಸರ್ಕಾರಿ ಶಾಲೆಗೆ ದಾಖಲಿಸಿದ್ದಾರೆ. ಶಾಲೆಯಲ್ಲಿ ಮೊಟ್ಟೆ ವಿತರಣೆ ವಿಚಾರವಾಗಿ ಇಲ್ಲಿ ಹಿಂದಿನಿಂದಲೂ ಭಿನ್ನಾಭಿಪ್ರಾಯಗಳು ಮೂಡಿದ್ದು, 124 ವಿದ್ಯಾರ್ಥಿಗಳ ಪೈಕಿ 84 ವಿದ್ಯಾರ್ಥಿಗಳು ಸರ್ಕಾರಿ ಶಾಲೆ ಬಿಟ್ಟಿದ್ದಾರೆ.
ದೇವಸ್ಥಾನದ ಸುತ್ತಮುತ್ತ ಮಾಂಸಾಹಾರ ಮತ್ತು ಮೊಟ್ಟೆಯನ್ನು ನಿಷೇಧಿಸಲಾಗಿದೆ. ಆದ್ದರಿಂದ ಶಾಲೆಯಲ್ಲಿಯೂ ಮೊಟ್ಟೆ ವಿತರಿಸಬಾರದು ಎಂದು ಪೋಷಕರು ಆಗ್ರಹಿಸಿದ್ದರು. ಈ ಕಾರಣಕ್ಕೆ ಶಾಲೆಯಲ್ಲಿ ಮೊಟ್ಟೆ ವಿತರಣೆಯನ್ನು ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ ನಿಲ್ಲಿಸಿತ್ತು. ಮೊಟ್ಟೆ ಬದಲಿಗೆ ಬಾಳೆಹಣ್ಣು ಅಥವಾ ಮಿಠಾಯಿ ವಿತರಣೆ ಮಾಡಲಾಗುತ್ತಿತ್ತು. ಆದರೆ, ಇತ್ತೀಚೆಗೆ ಮತ್ತೆ ಮೊಟ್ಟೆ ವಿತರಣೆ ಮಾಡಲು ಮುಂದಾಗಿದ್ದರಿಂದ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು.
“ಮೊಟ್ಟೆ ತಿನ್ನುವುದನ್ನು ನಾವು ವಿರೋಧಿಸುವುದಿಲ್ಲ. ದೇವಾಲಯ ಇರುವುದರಿಂದ ಕೊಡಬಾರದು, ಮನೆಗೆ ಕೊಟ್ಟು ಕಳುಹಿಸಲಿ ಎಂದಿದ್ದೆವು. ಬೇಯಿಸಿ ಕೊಡಬೇಕು ಎಂದು ಕೆಲವರು ಪಟ್ಟು ಹಿಡಿದಿದ್ದರು. ಆಚಾರ ವಿಚಾರಕ್ಕೆ ಅಡೆತಡೆ ಆಗುತ್ತದೆ. ಹೀಗಾಗಿ ನಮ್ಮ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸಿದ್ದೇವೆ” ಎನ್ನುತ್ತಾರೆ ಎಸ್‌ಡಿಎಂಸಿ ಸದಸ್ಯ ಚಂದ್ರು ಆಲಕೆರೆ.