87ನೇ ಕನ್ನಡ ಸಾಹಿತ್ಯ ಸಮ್ಮೇಳನದ ವೆಚ್ಚದ 2.50 ಕೋಟಿ ರೂ. ಲೆಕ್ಕ ನೀಡದೆ, ಕಸಾಪ ಬೈಲಾ ತಿದ್ದುಪಡಿ ಮೂಲಕ ಮಹೇಶ್ ಜೋಶಿ ಸರ್ವಾಧಿಕಾರಿಯಾಗಲು ಹೊರಟ್ಟಿದ್ದು, ಅವರನ್ನು ಕೂಡಲೇ ಕಸಾಪ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿ, ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ, ಕಸಾಪ ಪದಾಧಿಕಾರಿಗಳು, ಆಜೀವ ಸದಸ್ಯರು ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳ ಮುಖಂಡರು ಜೋಶಿ ವಿರುದ್ದ ಮಂಡ್ಯದಲ್ಲಿ ರಸ್ತೆಗಿಳಿದು ಪ್ರತಿಭಟನೆ ನಡೆಸಿದರು.
ಮಂಡ್ಯದ ರೈತ ಸಭಾಂಗಣದ ಆವರಣದಲ್ಲಿರುವ ಕುವೆಂಪು ಅವರ ಪ್ರತಿಮೆಯಿಂದ ಪ್ರತಿಭಟನಾ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಸಂಜಯ ವೃತ್ತದಲ್ಲಿ ರಸ್ತೆ ತಡೆ ನಡೆಸಿ, ಜೋಶಿ ವಿರುದ್ದ ಘೋಷಣೆಗಳನ್ನು ಕೂಗಿದರು.
ಮಹೇಶ ಜೋಶಿ ಆರ್ಥಿಕ ಅಶಿಸ್ತು ಮತ್ತು ಸರ್ವಾಧಿಕಾರಿ ಧೋರಣೆ ವಿರುದ್ಧ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಪ್ರತಿಭಟನಾ ಜಾಗೃತಿ ಸಮಾವೇಶ ಹಮ್ಮಿಕೊಳ್ಳಾಗಿತ್ತು, ಅದಕ್ಕೂ ಮುನ್ನ ಕನ್ನಡ ಪರ ಮನಸ್ಸುಗಳು ಜೋಶಿ ವಿರುದ್ದ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
‘ಡಾ.ಮಹೇಶ್‌ಜೋಶಿ ಅಮಾನತು ಮಾಡಿ – ಕಸಾಪ ಉಳಿಸಿ’ ಘೋಷಣೆಯಡಿ ನಡೆಯುವ ಜಾಗೃತಿ ಸಮಾವೇಶದಲ್ಲಿ ನಾಡಿನ ಕಸಾಪ ಅಜೀವ ಸದಸ್ಯರು, ಪ್ರಗತಿಪರ ಸಂಘಟನೆಯ ಮುಖಂಡರು ಹಾಗೂ ಕೆಲವು ಜನಪ್ರತಿನಿಧಿಗಳು ಪಕ್ಷಾತೀತವಾಗಿ ವಿವಿಧ ಜಿಲ್ಲೆಗಳಿಂದ ಭಾಗವಹಿಸಿದ್ದಾರೆ.
ಜೋಶಿ ವಿರುದ್ದ ಗಂಭೀರ ಆರೋಪಗಳು ಕೇಳಿ ಬಂದಿದ್ದು, ಸರ್ಕಾರ ಇಂತಹ ಸಂದರ್ಭದಲ್ಲಿ ಕೂಡಲೇ ಮಧ್ಯಪ್ರವೇಶಿಸಿ ಕಳಂಕಿತ ಅಧ್ಯಕ್ಷನನ್ನು ಅಮಾನತಿನಲ್ಲಿಟ್ಟು, ಆಡಳಿತಾಧಿಕಾರಿ ನೇಮಕ ಮಾಡಬೇಕು ಎಂದು ಆಗ್ರಹಿಸಿದರು.

ಸಂಪುಟದರ್ಜೆ ಸ್ಥಾನಮಾನ ವಾಪಸ್ ಪಡೆಯಲು ಆಗ್ರಹ
ಮಂಡ್ಯ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಶನಿವಾರ ನಡೆದ ಜಾಗೃತಿ ಸಮಾವೇಶದಲ್ಲಿ ಹಿರಿಯ ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಮಾತನಾಡಿ, ಸರ್ಕಾರ ಮಹೇಶ್ ಜೋಶಿಗೆ ನೀಡಿರುವ ಸಚಿವ ಸ್ಥಾನಮಾನವನ್ನು ವಾಪಸ್ ಪಡೆದರೆ ಆತನಿಗಿರುವ ಅರ್ಧ ದುರಹಂಕಾರ ಕಡಿಮೆಯಾಗುತ್ತದೆ. ದುರಹಂಕಾರದಿಂದಾಗಿ ತಾನು ಏನು ಮಾತನಾಡುತ್ತಿದ್ದೇನೆ ಎಂಬ ಪರಿಜ್ಞಾನವೂ ಜೋಶಿಗೆ ಇಲ್ಲವಾಗಿದೆ. ಎಲ್ಲ ಜಿಲ್ಲೆಯ ಕಸಾಪ ಅಧ್ಯಕ್ಷರು ತನ್ನ ಪರ ಇರಬೇಕು. ಇಲ್ಲಾ ವಜಾ ಮಾಡುತ್ತೇನೆ ಎಂದು ಹೆದರಿಸಿ ಇಟ್ಟುಕೊಂಡಿದ್ದಾನೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಕಟ್ಟಿರುವ ಕನ್ನಡ ಸಾಹಿತ್ಯ ಪರಿಷತ್ತನ್ನು ಹಾಳು ಮಾಡುತ್ತಿದ್ದು, ಸಾಹಿತ್ಯ ಸಮ್ಮೇಳನ ಮುಗಿದು 5 ತಿಂಗಳಾದರೂ ಲೆಕ್ಕ ಕೊಟ್ಟಿಲ್ಲ, ಲೆಕ್ಕ ಕೊಡದ ಈತ ಒಂದು ಕ್ಷಣವು ಅಧ್ಯಕ್ಷ ಸ್ಥಾನದಲ್ಲಿರಲು ಅರ್ಹತೆ ಹಾಗೂ ಯಾವುದೇ ಘನತೆ ಇಲ್ಲ. ಈತನನ್ನು ಕನ್ನಡ ಸಾಹಿತ್ಯ ಪರಿಷತ್ ಸದಸ್ಯರು ಗೆಲ್ಲಿಸಿದ್ದು ದುರಂತ. ನ್ಯಾಯಾಲಯದಿಂದ ಶಿಕ್ಷೆಗೊಳಗಾಗಿರುವ ಈತ ಮಾನ-ಮರ್ಯಾದೆ ಇದ್ದಿದ್ದರೆ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಬೇಕಿತ್ತು. ಆದರೆ, ಈತನಿಗೆ ಅಧಿಕಾರದ ಮದ ಹೇರಿದೆ. ವಿರುದ್ಧವಾಗಿ ಮಾತನಾಡಿದವರಿಗೆಲ್ಲ ನ್ಯಾಯಾಲಯದಿಂದ ನೋಟಿಸ್ ನೀಡುತ್ತಿದ್ದು, ಆ ಹಣ ಸಾಹಿತ್ಯ ಪರಿಷತ್‌ನದ್ದು. ಹೀಗೆ ಪ್ರತಿಯೊಂದಕ್ಕೂ ಪರಿಷತ್ ಹಣವನ್ನು ಖರ್ಚು ಮಾಡುತ್ತಿದ್ದು, ಭಿಕಾರಿ ಮಾಡಲು ಹೊರಟಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜೋಶಿ ಸರ್ವಾಧಿಕಾರಿ
ಸಾಹಿತಿ ಹಿ.ಶಿ. ರಾಮಚಂದ್ರೇಗೌಡ ಮಾತನಾಡಿ ಜಾತ್ಯತೀತ ಪರಿಕಲ್ಪನೆಯಲ್ಲಿ ಬೆಳೆದು ಬಂದಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದವರಿಗೆ ಸಹನೆ ಮತ್ತು ಮರೆಯುವಂತಹ ಪ್ರವೃತ್ತಿ ಹೊಂದಿರಬೇಕು. ಎಲ್ಲರನ್ನೂ ವಿಶ್ವಾಸದಿಂದ ಕೊಂಡೊಯ್ಯುವಂತಹ ಪರಿಪಾಠ ಬೆಳೆಸಿಕೊಳ್ಳಬೇಕು. ಆದರೆ ಮಹೇಶ್ ಜೋಶಿ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಬೇಸರ ವ್ಯಕ್ತಪಡಿಸಿದರು.
ಸಮ್ಮೇಳನಗಳನ್ನು ಅದ್ಧೂರಿಯಾಗಿ ಮಾಡುವ ಅಗತ್ಯವಿಲ್ಲ. ಇದರಿಂದ ಬೇರೆ ಕಾರ‍್ಯಕ್ರಮಗಳನ್ನು ಹತ್ತಿಕ್ಕುವಂತಾಗುತ್ತದೆ. ಮೂಲವಾಗಿ ಘಟಕಾಂಶಗಳನ್ನು ಬೆಳೆಸಲು ಸಾಧ್ಯವಾಗುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಸದಾ ಒಂದಿಲ್ಲೊಂದು ಸಾಹಿತ್ಯದ ಚಟುವಟಿಕೆಯಲ್ಲಿ ತೊಡಗಿದ್ದ ರಾಷ್ಟ್ರಕವಿ ಕುವೆಂಪು ಅವರ ಜಿಲ್ಲೆ ಶಿವಮೊಗ್ಗದ ಅಧ್ಯಕ್ಷರನ್ನು ಅಮಾನತ್ತು ಮಾಡಿರುವುದು ಬೇಸರ ಮೂಡಿಸಿದೆ ಎಂದು ಹೇಳಿದರು.
ರಾಜ್ಯದ ಎಲ್ಲ ಜಿಲ್ಲಾಧ್ಯಕ್ಷರು ಸಹ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೇ ಆಯ್ಕೆಯಾಗಿ ಬಂದವರು. ಎಲ್ಲರನ್ನೂ ಸಂಘಟಿಸಿ ಚಳವಳಿಯೊಳಗೆ ತರುವ ಪ್ರಯತ್ನ ಮಾಡಬೇಕು. ಮಂಡ್ಯದಲ್ಲಿ ಆರಂಭವಾದ ಚಳವಳಿ ಇಂಡಿಯಾಕ್ಕೆ ಮುಟ್ಟುವಂತಾಗಬೇಕು ಎಂದು ಹೇಳಿದರು.
ಆರ್‌ಎಸ್‌ಎಸ್‌ಗೆ ಹೋಗಿ ಬಂದು ಸಲಾಂ ಹೊಡೆಯುವ ಜೋಶಿ
ಹೋರಾಟಗಾರರಾದ ಕೆ ಎಸ್ ವಿಮಲಾ ಮಾತನಾಡಿ, ಕೂಡು ಸಂಸ್ಕೃತಿಯುಳ್ಳ ಸಾಹಿತ್ಯ ಪರಿಷತ್ತನ್ನು ಏಕ ಸಂಸ್ಕೃತಿಯನ್ನಾಗಿ ಮಾಡಲು ಹೊರಟಿರುವ ಮಹೇಶ್ ಜೋಶಿಯವರನ್ನು ಅನುಸರಿಸದೆ, ಅವರ ಗುಲಾಮಗಿರಿಯಿಂದ ಹೊರ ಬಂದು ತಮ್ಮದೇ ಆದ ಚಟುವಟಿಕೆಗಳನ್ನು ಕೊಡುವ ಮೂಲಕ ಸಾಹಿತ್ಯ ಪರಿಷತ್ತಿನ ಘನತೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕು ಎಂದು ಜಿಲ್ಲಾಧ್ಯಕ್ಷರಿಗೆ ಕರೆ ನೀಡಿದರು.
ನಿವೃತ್ತ ಜಿಲ್ಲಾಧಿಕಾರಿ ರುದ್ರಪ್ಪ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಕನ್ನಡದ ಮನಸ್ಸುಗಳಿಗೆ ಜಾಗೃತಿ ಮೂಡಿಸಬೇಕು. ಎಲ್ಲರನ್ನೂ ಒಗ್ಗೂಡಿಸಿ ಹಿಂದೆ ಅವರು ಕೆಲಸ ಮಾಡಿದ್ದ ಹುದ್ದೆಗಳಲ್ಲಿ ದುರ್ವತನೆಯಿಂದ ಕೆಲಸ ಮಾಡಿದ್ದರೋ ಅದನ್ನೂ ತೆಗೆದು ಸಾರ್ವಜನಿಕರಿಗೆ ತೋರಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಕಸಾಪ ಅಧ್ಯಕ್ಷರಾದವರು ರಾಜಕಾರಣಿಯಾಗಬೇಕಾ, ಸಾಹಿತಿಯಾಗಿರಬೇಕಾ ?
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಎಚ್ ಎಲ್ ಪುಷ್ಪ ಮಾತನಾಡಿ, ಸಂಘ ಸಂಸ್ಥೆಗಳು ಎಂದಾಗ ಅದಕ್ಕೊಂದು ಬೈಲಾ ಇರುತ್ತೆ, ಲೆಕ್ಕಪತ್ರ ಕೊಡಬೇಕಾಗುತ್ತದೆ ಎಂಬ ಕನಿಷ್ಠ ಜ್ಞಾನವೂ ಇಲ್ಲದ ಮಹೇಶ್ ಜೋಶಿ ಅವರಿಗೆ ಈ ಬಗ್ಗೆ ತಾತ್ಸಾರ ಮನೋಭಾವ ಏಕೆ? ಮಂಡ್ಯದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಜವಾಬ್ದಾರಿ ಹೊತ್ತುಕೊಂಡಿದ್ದ ಮಹಿಳೆಯನ್ನು ಕಾರ‍್ಯಕಾರಿ ಸಮಿತಿ ಸಭೆಯಿಂದ ಹೊರಗೆ ಕಳುಹಿಸುವಂತಹ ಪ್ರಮೇಯವಾದರೂ ಏನಿತ್ತು ಎಂದು ಪ್ರಶ್ನಿಸಿದರು.
