ಒಟ್ಟು ವಾರ್ಷಿಕ ವಹಿವಾಟು 40 ಲಕ್ಷ ರೂಪಾಯಿ ಮೀರಿದರೆ ಜಿಎಸ್‌ಟಿ ನೋಂದಣಿ ಕಡ್ಡಾಯ ಎಂಬ ವರದಿಗಳ ನಡುವೆ ಜಿಎಸ್‌ಟಿ ವಿಧಿಸುವ ಆತಂಕಕ್ಕೆ ಒಳಗಾದ ವರ್ತಕರು ಯುಪಿಐನಂತಹ ಡಿಜಿಟಲ್ ಪಾವತಿಯನ್ನು ನಿಲ್ಲಿಸಿ ನಗದು ವಹಿವಾಟು ನಡೆಸುತ್ತಿದ್ದಾರೆ. ಈ ರೀತಿ ಮಾಡುವ ವರ್ತಕರಿಗೆ ವಾಣಿಜ್ಯ ತೆರಿಗೆ ಇಲಾಖೆಯು ಎಚ್ಚರಿಕೆ ನೀಡಿದೆ.
ನಗದು ವಹಿವಾಟು ಸೇರಿದಂತೆ ಯಾವುದೇ ಮಾದರಿಯ ವಹಿವಾಟಿಗೂ ಜಿಎಸ್‌ಟಿ ವಿಧಿಸಲಾಗುತ್ತದೆ. ಯುಪಿಐನಂತಹ ಡಿಜಿಟಲ್ ಪಾವತಿ ನಿಲ್ಲಿಸಿ ನಗದು ವಹಿವಾಟು ನಡೆಸುತ್ತಿರುವ ವರ್ತಕರ ಮೇಲೂ ಇಲಾಖೆ ಕಣ್ಣಿಟ್ಟಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನು ಓದಿದ್ದೀರಾ? 2,000 ರೂ.ಗೆ ಮೇಲ್ಪಟ್ಟ ಯುಪಿಐ ವಹಿವಾಟು ಮೇಲೆ ಜಿಎಸ್‌ಟಿ? ಕೇಂದ್ರ ಸರ್ಕಾರ ಸ್ಪಷ್ಟನೆ
ಜಿಎಸ್‌ಟಿ ಕಾಯ್ದೆ-2017ರ ಪ್ರಕರಣ 22ರ ನಿಯಮಗಳನ್ನು ಇಲಾಖೆಯು ಪ್ರಕಟಣೆಯಲ್ಲಿ ಉಲ್ಲೇಖಿಸಿದೆ. ಕಾಯ್ದೆ ಪ್ರಕಾರ ಸರಕುಗಳ ಪೂರೈಕೆದಾರರ ಒಟ್ಟು ವಾರ್ಷಿಕ ವಹಿವಾಟು 40 ಲಕ್ಷ ರೂಪಾಯಿ ಮತ್ತು ಸೇವೆಗಳ ಪೂರೈಕೆದಾರರ ವಾರ್ಷಿಕ ವಹಿವಾಟು 20 ಲಕ್ಷ ರೂಪಾಯಿ ಮೀರಿದರೆ ಜಿಎಸ್‌ಟಿ ನೋಂದಣಿ ಕಡ್ಡಾಯವಾಗಿದೆ.
ಈ ವಹಿವಾಟಿನಲ್ಲಿ ನಗದು, ಯುಪಿಐ, ಪಿಓಎಸ್ ಮೆಷಿನ್, ಬ್ಯಾಂಕ್ ಖಾತೆ ಸೇರಿದಂತೆ ಎಲ್ಲ ವಿಧಾನದ ವಹಿವಾಟು ಕೂಡ ಸೇರುತ್ತದೆ ಎಂದು ಇಲಾಖೆಯ ಹೆಚ್ಚುವರಿ ಆಯುಕ್ತರು ಹೇಳಿದ್ದಾರೆ.
ಇನ್ನು ವಾರ್ಷಿಕವಾಗಿ 1.5 ಕೋಟಿ ರೂಪಾಯಿಗಿಂತ ಕಡಿಮೆ ವಹಿವಾಟು ಇರುವ ವ್ಯಾಪಾರಿಗಳು ಜಿಎಸ್‌ಟಿ ಅಡಿ ನೋಂದಣಿ ಪಡೆದು ರಾಜಿ ತೆರಿಗೆ ಪದ್ಧತಿ ಆಯ್ಕೆ ಮಾಡಿಕೊಳ್ಳಬಹುದು. ಇದರಡಿ ಶೇ 0.5ರಷ್ಟು ಎಸ್‌ಜಿಎಸ್‌ಟಿ ಮತ್ತು ಶೇ 0.5ರಷ್ಟು ಸಿಜಿಎಸ್‌ಟಿ ಪಾವತಿಸಬೇಕಾಗುತ್ತದೆ. ಆದರೆ ನೋಂದಣಿ ಪಡೆಯದೆ ವಹಿವಾಟು ನಡೆಸಿದರೆ ರಾಜಿ ತೆರಿಗೆ ಪದ್ಧತಿ ಅನ್ವಯಿಸಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
