ಮೆಟ್ರೋ ದರ ಏರಿಸಿ ಕೇಂದ್ರಕ್ಕೆ ಅದರ ಹಣೆಪಟ್ಟಿ ಕಟ್ಟಲು ಹೊರಟಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜನರೇ ಎದಿರೇಟು ಕೊಟ್ಟಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರತಿಕ್ರಿಯಿಸಿದ್ದಾರೆ.
ಬಿಎಂಆರ್ ಸಿಎಲ್ ಮೆಟ್ರೋ ದರ ಪರಿಷ್ಕರಣೆ ಮಾಡಿದ ಬಳಿಕ ಕೇಂದ್ರ ಸರ್ಕಾರದತ್ತ ಬೆರಳು ತೋರಿ ಆರೋಪ ಹೊರಿಸಿದ್ದ ಸಿಎಂ ಈಗ ಜನರ ವಿರೋಧ ತಾರಕಕ್ಕೇರುತ್ತಲೇ ಮಣಿದು ಬೆಲೆ ಇಳಿಸಲು ಕ್ರಮ ಕೈಗೊಂಡಿದ್ದಾರೆ ಎಂದು ಜೋಶಿ ಹೇಳಿದ್ದಾರೆ.
ಸಿಎಂ ಯೂಟರ್ನ್
“ಬೆಂಗಳೂರಿನಲ್ಲಿ ಜನ ಮೆಟ್ರೋ ರೈಲು ಸಂಚಾರ ತಿರಸ್ಕರಿಸುತ್ತಿದ್ದಂತೆ ಸಿಎಂ ಯೂಟರ್ನ್ ಹೊಡೆದಿದ್ದಾರೆ. ಈಗ ಟಿಕೆಟ್ ದರ ಕಡಿಮೆ ಮಾಡುವಂತೆ ಬಿಎಂಆರ್ ಸಿಎಲ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ” ಎಂದು ಸಚಿವ ಜೋಶಿ ಟೀಕಿಸಿದ್ದಾರೆ.
ರಾಜ್ಯದಲ್ಲಿ ಜನ ಸಹಿಸದೇ ಇರುವುದನ್ನು ತಾನೇನೇ ಮಾಡಿದರೂ ಅದನ್ನು ಕೇಂದ್ರ ಸರ್ಕಾರದ ಹಣೆಗೆ ಕಟ್ಟಲು ನೋಡುತ್ತದೆ ರಾಜ್ಯ ಕಾಂಗ್ರೆಸ್ ಸರ್ಕಾರ ಎಂದು ಆರೋಪಿಸಿದ್ದಾರೆ.
ಅಗತ್ಯತೆಗಳ ಬೆಲೆ ಏರಿಕೆ ಕೈ ಬಿಡಲಿ
“ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಳ್ಳು ಹೇಳುವುದನ್ನು ಬಿಟ್ಟು ಜನಾಭಿಪ್ರಾಯಕ್ಕೆ ಗೌರವ ನೀಡಲಿ. ಇನ್ನಾದರೂ ಜನರ ಅಗತ್ಯತೆಗಳ ಬೆಲೆ ಏರಿಕೆ ನೀತಿಯನ್ನು ಕೈಬಿಡಲಿ” ಎಂದು ಪ್ರಲ್ಹಾದ್ ಜೋಶಿ ಸಾಮಾಜಿಕ ಜಾಲತಾಣ X ಖಾತೆಯಲ್ಲಿ ಬರೆದುಕೊಂಡಿದ್ದಾರೆ.