ಫೈನಾನ್ಸ್ ಕಂಪನಿಗಳು ಸಾಲಗಾರರಿಗೆ ಪೊಲೀಸರ ರಕ್ಷಣೆ ಪಡೆದೇ ತೊಂದರೆ ಕೊಡುತ್ತಿವೆ ಎಂಬ ಮಾಹಿತಿ ಇದೆ. ಆದರೆ, ನಾನು ಪೊಲೀಸರ ಮೇಲೆ ಆರೋಪ ಮಾಡುವುದಿಲ್ಲ. ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿರುವುದರಿಂದಲೇ ಇದೆಲ್ಲವೂ ಆಗುತ್ತಿದೆ. ಜನರಿಗೆ ಕಿರುಕುಳ ನೀಡುವ ಪ್ರಕರಣಗಳು ನಡೆಯುತ್ತಿವೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ದೂರಿದರು.
ನವದೆಹಲಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ನೋಂದಾಯಿತ ಮೈಕ್ರೊ ಫೈನಾನ್ಸ್ ಕಂಪನಿಗಳು ಮಾತ್ರವೇ ಆರ್ಬಿಐ ಮಾರ್ಗಸೂಚಿಗೆ ಒಳಪಡುತ್ತವೆ ಎಂಬುದನ್ನು ರಾಜ್ಯ ಸರ್ಕಾರ ಗಮನಿಸಬೇಕು. ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಮುಖ್ಯಮಂತ್ರಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ನಿಯಮಗಳನ್ನು ಜಾರಿಗೆ ತರಬೇಕು’ ಎಂದು ಒತ್ತಾಯಿಸಿದರು.
‘ರಾಜ್ಯದಲ್ಲಿ ಏನೇ ನಡೆದರೂ ಅದಕ್ಕೆಲ್ಲಾ ಹಿಂದಿನ ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ಮೇಲೆ ಹಾಕುವ ಕೆಲಸವನ್ನು ಕಾಂಗ್ರೆಸ್ನವರು ಮಾಡುತ್ತಲೇ ಬಂದಿದ್ದಾರೆ. ಮಳೆ ಹೆಚ್ಚಾದರೂ, ಕಡಿಮೆಯಾದರೂ ಕೇಂದ್ರ ಹಾಗೂ ರಾಜ್ಯ ಬಿಜೆಪಿಯೇ ಕಾರಣ ಎನ್ನುತ್ತಾರೆ. ಇಂತಹ ಬಾಲಿಶ ಹೇಳಿಕೆಗಳನ್ನು ಕೊಡುವುದನ್ನು ಬಿಡಬೇಕು. ಅವರಿಗೆ ಜನರು ಅಧಿಕಾರ ಕೊಟ್ಟಿದ್ದಾರೆ, ಒಳ್ಳೆಯ ಕೆಲಸಗಳನ್ನು ಮಾಡಲಿ. ಅದನ್ನು ಬಿಟ್ಟು ಈ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ಕಾಂಗ್ರೆಸ್ ನಾಯಕರು ಕುರ್ಚಿ ಜಗಳದಲ್ಲಿ ನಿರತರಾಗಿದ್ದಾರೆ’
ಎಂದು ಟೀಕಿಸಿದರು.
‘ಪೊಲೀಸರಿಗೆ ಅಧಿಕಾರ ಕೊಟ್ಟು ಅದರಲ್ಲಿ ಭ್ರಷ್ಟಾಚಾರ ಆಗಬಾರದು. ಸಮಿತಿ ರಚಿಸಿದರೆ ಅದಕ್ಕೆ ಪ್ರಾಮಾಣಿಕ ಅಧಿಕಾರಿಗಳನ್ನು ನೇಮಿಸಿ ಮೇಲ್ವಿಚಾರಣೆ ಮಾಡಬೇಕು. ಸಾಲಕ್ಕೆ ಇಂತಿಷ್ಟೆ ಬಡ್ಡಿ ವಿಧಿಸಬೇಕು ಎಂಬುದು ಆರ್ಬಿಐ ಮಾರ್ಗಸೂಚಿಯಲ್ಲಿದೆ. ಆದರೆ, ನೋಂದಾಯಿಸದ ಫೈನಾನ್ಸ್ ಕಂಪನಿಗಳು ಸಾಕಷ್ಟಿವೆ. ಅವುಗಳನ್ನು ರಾಜ್ಯ ಸರ್ಕಾರ ಕಟ್ಟುನಿಟ್ಟಾಗಿ ನಿಯಂತ್ರಿಸಬೇಕು’ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಚೋದನಕಾರಿ ಭಾಷಣ – ಆಯುಧ ಹಂಚಿಕೆ ಕಾನೂನು ಉಲ್ಲಂಘನೆಯಲ್ಲವೇ?
‘ಮುಡಾ ಪ್ರಕರಣದಲ್ಲಿ ಏನಾದರೂ ಮಾಡಿ ತಪ್ಪಿಸಿಕೊಳ್ಳಬೇಕೆಂದು ಸಿದ್ದರಾಮಯ್ಯ ಪ್ರಯತ್ನಿಸುತ್ತಿದ್ದಾರೆ. ರಾಜ್ಯಪಾಲರ ಆದೇಶದ ವಿರುದ್ಧವಾಗಿ ಹೈಕೋರ್ಟ್ಗೆ ಹೋದರು. ಆದರೆ, ರಾಜ್ಯಪಾಲರ ನಡೆಯನ್ನು ಹೈಕೋರ್ಟ್ ತಪ್ಪು ಎನ್ನಲಿಲ್ಲ. ಆದರೂ ಸಿದ್ದರಾಮಯ್ಯ ಅನೈತಿಕವಾಗಿ ಅಧಿಕಾರದಲ್ಲಿ ಮುಂದುವರಿದಿದ್ದಾರೆ’ ಎಂದು ಆರೋಪಿಸಿದರು.

ಈ ಮೈಕ್ರೋ ಫೈನಾನ್ಸ್ ಮತ್ತು ಧರ್ಮಸ್ಥಳ ವಾರದ ಬಡ್ಡಿ ಗ್ರುಪ್ ಗಳು ನಿನ್ನೆ ಹುಟ್ಟಿಲ್ಲ,, ಹಲವು ವರ್ಷಗಳಿಂದ ನಡೆದಿವೆ, ಎರಡು ವರ್ಷಗಳ ಹಿಂದೆ ಈ ಮಂತ್ರಿಯ ಪಕ್ಷದ ಅಧಿಕಾರ ಇದ್ದಾಗ ಧರ್ಮಸ್ಥಳದ ವಾರದ ಬಡ್ಡಿಯ ಪ್ರಕರಣದಲ್ಲಿ ಆತ್ಮಹತ್ಯೆ ಸಹ ಆಗಿತ್ತು,, ಪ್ರತಿಯೊಂದು ವಿಷಯವನ್ನು ರಾಜಕೀಕರಣಗೊಳಿಸಿ ಕಾರಿಕೊಳ್ಳದೆ ಒಬ್ಬ ಕೇಂದ್ರ ಸಚಿವನಾಗಿ ಇಂಥಾ ಗಂಭೀರ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಜವಾಬ್ದಾರಿ ತೋರಿಸಬೇಕು,, ಎಷ್ಟೊಂದು ಕಳ್ಳೋದ್ಯಮಿಗಳು ಲಕ್ಷಾಂತರ ಕೋಟಿ ಸಾಲ ತೀರಿಸದೇ ದೇಶಬಿಟ್ಟು ಓಡಿ ಹೋದರು ಅವರನ್ನು ನಿಮ್ಮ ಅಧಿಕಾರವೇ ಕಳಿಸಿತೆಂದು ಹೇಳಬಹುದಾ