ಭಾರತೀಯ ಹವಾಮಾನ ಇಲಾಖೆ(IMD) 2026ರಲ್ಲಿ ಮುಂಗಾರು ಮಳೆಯು ಸಾಮಾನ್ಯಕ್ಕಿಂತ ಕಡಿಮೆ ಇರಲಿದೆ ಎಂದು ಮುನ್ಸೂಚನೆ ನೀಡಿದ್ದು, ರಾಜ್ಯದ ನೀರಿನ ಸುರಕ್ಷತೆಯ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದೆ. ಇದನ್ನು ಗಮನಿಸಿದರೆ 2025 ರಲ್ಲಿ ಹೆಚ್ಚುವರಿ ಮಳೆಯಾದ ನಂತರ, ಕರ್ನಾಟಕವು ಈಗ ಸಂಭಾವ್ಯ ಬರಗಾಲದತ್ತ ಸಾಗುತ್ತಿರುವಂತೆ ಕಾಣುತ್ತಿದೆ.
IMDಯ ಇತ್ತೀಚಿನ ದೀರ್ಘಾವಧಿಯ ಮುನ್ಸೂಚನೆ, ತಿಂಗಳುಗಳ ಕಾಲ ನಿರಂತರ ಉಷ್ಣತೆ ಮತ್ತು ವೇಗವಾಗಿ ಖಾಲಿಯಾಗುತ್ತಿರುವ ಜಲಾಶಯಗಳನ್ನು ನೋಡಿದರೆ, ಜೂನ್-ಸೆಪ್ಟೆಂಬರ್ ಅವಧಿಗೆ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು ಮತ್ತು ಮುಂಗಾರು ಮಳೆಯು ಈ ಋತುಮಾನದ ಸರಾಸರಿಗಿಂತ ಕಡಿಮೆಯಾಗುವ ಸಾಧ್ಯತೆಯಿದೆ ಎಂಬುದನ್ನು ಸೂಚಿಸುತ್ತಿದೆ.
IMD ಮುನ್ಸೂಚನೆಯ ಪ್ರಕಾರ, “ಮುಂಗಾರಿನಲ್ಲಿ ದೀರ್ಘಾವಧಿಯ ಸರಾಸರಿ(LPA) ಮಳೆಯ ಸುಮಾರು ಶೇ.92ರಷ್ಟು ಮಳೆಯಾಗುವ ನಿರೀಕ್ಷೆಯಿದೆ. ಇದು ‘ಸಾಮಾನ್ಯಕ್ಕಿಂತ ಕಡಿಮೆ’ ಪ್ರಮಾಣದ ಮಳೆಯಾಗುವುದರಿಂದ ಕರ್ನಾಟಕದ ಮುನ್ಸೂಚನೆಯು ಹೆಚ್ಚು ಕಳವಳಕಾರಿಯಾಗಿದೆ.
“ರಾಜ್ಯದಲ್ಲಿ ಮುಂಗಾರು ಮಳೆ ಕಡಿಮೆಯಾಗುವು ಸಾಧ್ಯತೆಯಿದೆ. ಜತೆಗೆ ರಾಜ್ಯಾದ್ಯಂತ ತೀವ್ರವಾದ ತಾಪಮಾನದ ರೂಪದಲ್ಲಿ ಸ್ಪಷ್ಟ ಎಚ್ಚರಿಕೆಯ ಘಟನೆಗಳು ಕಂಡುಬರುತ್ತವೆ. ಮುಂಗಾರು ಮಳೆ ಕಡಿಮೆಯಾದರೆ ಬೆಂಗಳೂರು ಸೇರಿದಂತೆ ರಾಜ್ಯದ ಇತರ ಜಿಲ್ಲೆಗಳಲ್ಲಿ ನೀರಿನ ಬಿಕ್ಕಟ್ಟು ಉಲ್ಬಣಗೊಳ್ಳಬಹುದು” ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ.
“ಕಾವೇರಿ ನದಿ ನೀರು ಮತ್ತು ಮುಂಗಾರು ಮಳೆಯಿಂದ ಮರುಪೂರಣಗೊಳ್ಳುವ ಅಂತರ್ಜಲದ ಸಂಯೋಜನೆಯನ್ನು ಹೆಚ್ಚು ಅವಲಂಬಿಸಿರುವ ಬೆಂಗಳೂರು ನಗರಕ್ಕೆ 2024-25ರ ಬೇಸಿಗೆಯ ಸನ್ನಿವೇಶ ಪುನರಾವರ್ತನೆಯಾಗಬಹುದು. ಇದು ನೀರಾವರಿ ಮತ್ತು ವಿದ್ಯುತ್ ಉತ್ಪಾದನೆಯನ್ನು ಬೆಂಬಲಿಸುವ ಪ್ರಮುಖ ಜಲಾಶಯಗಳಿಗೆ ಒಳಹರಿವಿನ ಮೇಲೂ ಪರಿಣಾಮ ಬೀರುತ್ತದೆ” ಎಂದು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ವಿಜ್ಞಾನಿ ವಿವರಿಸಿದ್ದಾರೆ.
ವಿಶೇಷವಾಗಿ ಉತ್ತರ ಒಳನಾಡಿನ ಮಳೆಯಾಶ್ರಿತ ಪ್ರದೇಶಗಳಲ್ಲಿ, ಮುಂಗಾರು ಮಳೆಯ ಕೊರತೆಯನ್ನು ಕೃಷಿ ವಲಯವು ನೀಗಿಸುವ ನಿರೀಕ್ಷೆಯಿದೆ. ಮಳೆಯ ವಿಳಂಬ ಅಥವಾ ಕೊರತೆ ಉಂಟಾದರೆ ಭತ್ತ, ಜೋಳ, ದ್ವಿದಳ ಧಾನ್ಯಗಳು ಮತ್ತು ಎಣ್ಣೆಬೀಜಗಳಂತಹ ಪ್ರಮುಖ ಬೆಳೆಗಳ ಬಿತ್ತನೆ ಕಾರ್ಯಗಳ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ ರೈತರು ಬಿತ್ತನೆ ಮಾಡುವುದರಲ್ಲಿ ವಿಳಂಬ ಅಥವಾ ಕುಂಠಿತವಾಗಬಹುದು. ಇಲ್ಲವೇ ಕಡಿಮೆ ನೀರಿನ ತೀವ್ರ ಬೆಳೆಗಳಿಗೆ ಬದಲಾಯಿಸಬಹುದು. ಇದರಿಂದಾಗಿ ಇಳುವರಿ ಮತ್ತು ಆದಾಯದ ಮೇಲೆ ಪರಿಣಾಮ ಬೀರುತ್ತದೆ.
2026ರ ಮಾನ್ಸೂನ್ ಮುನ್ಸೂಚನೆ(ಜೂನ್-ಸೆಪ್ಟೆಂಬರ್): ದಕ್ಷಿಣ ಒಳನಾಡಿನಲ್ಲಿ ಉತ್ತಮ ಮಳೆಯಾಗಬಹುದೆಂದು ನಿರೀಕ್ಷಿಸಲಾಗಿದ್ದರೂ, ಇದು ಸೀಮಿತವಾಗಿರಬಹುದು. ಹಾಗಾಗಿ ರಾಜ್ಯಾದ್ಯಂತ ಒಟ್ಟಾರೆ ಮಳೆಯ ಕೊರತೆಯನ್ನು ಸರಿದೂಗಿಸಲು ಸಾಕಾಗುವುದಿಲ್ಲ ಎಂಬುದು ಐಎಂಡಿಯ ನೈಋತ್ಯ ಮಾನ್ಸೂನ್ ಹವಾಮಾನ ವಿಭಾಗಗಳ ಸಂಭವನೀಯತೆಯ ಮುನ್ಸೂಚನೆಯಾಗಿದೆ.
ಈ ಸುದ್ದಿ ಓದಿದ್ದೀರಾ? ಔರಾದ್ | ಗುಳೆ ತಪ್ಪಿಸಲು ಮನರೇಗಾ ಕಾಮಗಾರಿಗೆ ಒತ್ತು : ಶಿವಕುಮಾರ ಘಾಟೆ
1971-2020ರ(ಜೂನ್-ಸೆಪ್ಟೆಂಬರ್) ಹವಾಮಾನ ಸಾಮಾನ್ಯ ಮಳೆಯ ಪ್ರಮಾಣ ರಾಜ್ಯದ ಕರಾವಳಿಯಲ್ಲಿ ಸಾಮಾನ್ಯಕ್ಕಿಂತ ಕಡಿಮೆ 3094.0 ಮಿಮೀ, ಉತ್ತರ ಒಳನಾಡು ಪ್ರದೇಶದಲ್ಲಿ ಸಾಮಾನ್ಯಕ್ಕಿಂತ ಕಡಿಮೆ 480.8 ಮಿ.ಮೀ, ದಕ್ಷಿಣ ಒಳನಾಡು ಪ್ರದೇಶದಲ್ಲಿ ಸಾಮಾನ್ಯಕ್ಕಿಂತ ಕಡಿಮೆ 678.5 ಮಿ.ಮೀ ಮಳೆಯಾಗಿತ್ತು. ಇದೀಗ ಇದಕ್ಕೂ ಕಡಿಮೆಯಾಹಬಹುದೆಂಬ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.





