ಶುಕ್ರವಾರ ಲೋಕಸಭೆಯಲ್ಲಿ ದಕ್ಷಿಣದ ರಾಜ್ಯಗಳು ವಿರೋಧಿಸುತ್ತಾ ಬಂದಿರುವ ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಸೋಲುಂಟಾಗಿದೆ. ಈ ಸೋಲನ್ನು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟ್ಯಾಲಿನ್ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಹಾಗೆಯೇ ಕ್ಷೇತ್ರ ಮರುವಿಂಗಡಣೆ ಮಸೂದೆ ಪ್ರತಿಯನ್ನು ಸುಟ್ಟು, “ಈ ಬೆಂಕಿ ಕೇಂದ್ರ ಸರ್ಕಾರದ ದುರಹಂಕಾರವನ್ನು ಸುಟ್ಟುಹಾಕಿದೆ. ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಗೆ ತೀವ್ರ ಹೊಡೆತ ನೀಡಿದೆ” ಎಂದು ಹೇಳಿದ್ದಾರೆ.
ದಿಂಡಿಗಲ್ನಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಜನರಿಗೆ ಸಿಹಿತಿಂಡಿಗಳನ್ನು ವಿತರಿಸಿದ ತಮಿಳುನಾಡು ಸಿಎಂ, “ತಮಿಳುನಾಡಿನ ಮುಖ್ಯಮಂತ್ರಿಯ ಜವಾಬ್ದಾರಿಯನ್ನು ನೀವು (ಜನರು) ನನಗೆ ನೀಡಿದ್ದರಿಂದ, ಸ್ಟ್ಯಾಲಿನ್ ಹೊತ್ತಿಸಿದ ಬೆಂಕಿ ದೆಹಲಿಯ ದುರಹಂಕಾರವನ್ನು ‘ಸುಟ್ಟುಹಾಕಿದೆ’. ನಮ್ಮ ಹೋರಾಟ ಯಶಸ್ವಿಯಾಗಿದೆ. ಕಪ್ಪು ಶರ್ಟ್ ಪಡೆ ಕೇಸರಿ ದಳವನ್ನು ಸೋಲಿಸಿದೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಕ್ಷೇತ್ರ ಮರುವಿಂಗಡಣೆಯ ಬಗ್ಗೆ ಎಚ್ಚರವಹಿಸುವುದು ಹೇಗೆ ?
ಪ್ರಸ್ತುತ ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆಯ ಪ್ರಚಾರವೂ ನಡೆಯುತ್ತಿದೆ. ಡಿಎಂಕೆ ನೇತೃತ್ವದ ಜಾತ್ಯತೀತ ಪ್ರಗತಿಪರ ಮೈತ್ರಿಕೂಟದ ಅಭ್ಯರ್ಥಿಗಳನ್ನು ಬೆಂಬಲಿಸಿ ಸ್ಟ್ಯಾಲಿನ್ ಪ್ರಚಾರ ನಡೆಸಿದರು. ಈ ವೇಳೆ ಮಾತನಾಡಿ, “ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿಗೆ ಚುನಾವಣಾ ಪೂರ್ವದಲ್ಲಿ ಭಾರಿ ಸೋಲುಂಟಾಗಿದೆ” ಎಂದರು.
“ಚುನಾವಣೆಯ ಸಮಯದಲ್ಲಿ ಕ್ಷೇತ್ರ ಮರುವಿಂಗಡನೆ ಮಸೂದೆಯನ್ನು ತಂದರೆ ನಾವು ಆಲಸ್ಯ ಹೊಂದುತ್ತೇವೆ, ಅದರ ಕಡೆ ಗಮನ ಕೊಡಲ್ಲ. ಚುನಾವಣೆಯತ್ತವೇ ನಮ್ಮ ಗಮನ ಇರುತ್ತದೆ ಎಂದು ಬಿಜೆಪಿಗರು ಭಾವಿಸಿದ್ದರು. ಆದರೆ ತಮಿಳುನಾಡು ಯಾವಾಗಲೂ ಜಾಗರೂಕವಾಗಿರುತ್ತದೆ. ತಮಿಳುನಾಡಿನಲ್ಲಿ ಇರುವುದು ಮುತ್ತುವೇಲ್ ಕರುಣಾನಿಧಿ ಸ್ಟ್ಯಾಲಿನ್. ಬಿಜೆಪಿಯ ಸೋಲು ತಮಿಳುನಾಡಿನಿಂದ ಪ್ರಾರಂಭವಾಗುತ್ತದೆ” ಎಂದು ಹೇಳಿದರು.
“ಇದು ಕೇಸರಿ ಪಕ್ಷಕ್ಕೆ ಮೊದಲ ಹೊಡೆತ. ಕನಿಷ್ಠ ಇಂದಿನಿಂದ, ತಮಿಳುನಾಡನ್ನು ಕೆರಳಿಸಬೇಡಿ. ನಮ್ಮನ್ನು ಕೆರಳಿಸಿದರೆ ಅದರ ಪ್ರತಿಕ್ರಿಯೆಯನ್ನು ನೀವು ಸಹಿಸಲು ಸಾಧ್ಯವಾಗುವುದಿಲ್ಲ. ಇದು ಬಹುಶಃ ಮೋದಿ ಅವರ 12 ವರ್ಷಗಳ ಆಡಳಿತದಲ್ಲಿ ಎದುರಿಸಿದ ಮೊದಲ ಸೋಲು. ಈ ಸೋಲು ಬರೀ ಟ್ರೇಲರ್. ನಾವು 200ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುತ್ತೇವೆ” ಎಂದರು. ಹಾಗೆಯೇ ಎಕ್ಸ್ ಪೋಸ್ಟ್ನಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತು ಇಂಡಿಯಾ ಒಕ್ಕೂಟದ ನಾಯಕರಿಗೆ ಧನ್ಯವಾದ ತಿಳಿಸಿದರು. ವಿರೋಧ ಪಕ್ಷವಾಗಿ ಒಗ್ಗಟ್ಟಿನ ಅಗತ್ಯವನ್ನು ಒತ್ತಿ ಹೇಳಿದರು.





