ಹೊರ ರಾಜ್ಯಗಳಿಂದ ಬಂದವರಿಂದಲೇ ಕರ್ನಾಟಕದಲ್ಲಿ ಹೆಚ್ಚು ಅಪರಾಧ ಕೃತ್ಯಗಳು ನಡೆಯುತ್ತಿವೆ. ಹೊರಗಿನಿಂದ ಬಂದವರು ಇಲ್ಲಿನ ಸಂಸ್ಕೃತಿ ತಿಳಿದುಕೊಳ್ಳಲ್ಲ. ಇಲ್ಲಿನ ಜನರ ಭಾವನೆ ಅರ್ಥ ಮಾಡಿಕೊಳ್ಳದೆ ಈ ರೀತಿ ವರ್ತಿಸುತ್ತಾರೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದರು.
ಹುಬ್ಬಳ್ಳಿಯಲ್ಲಿ ಬಿಹಾರ ಮೂಲದ ರಿತೇಶ್ ಕುಮಾರ್ ಎಂಬಾತ ಬಾಲಕಿಯನ್ನು ಹತ್ಯೆ ಮಾಡಿ ನಂತರ ಪೊಲೀಸರ ಗುಂಡಿಗೆ ಬಲಿಯಾದ ವಿಚಾರವಾಗಿ ಸೋಮವಾರ ಪ್ರತಿಕ್ರಿಯಿಸಿದರು.
“ಹೊರ ರಾಜ್ಯಗಳಿಂದ ಬಂದವರಿಂದಲೇ ಹೆಚ್ಚು ಅಪರಾಧ ಪ್ರಕರಣ ದಾಖಲಾಗಿದ್ದು ನೋಡುತ್ತಿದ್ದೇವೆ. ಹೆಚ್ಚು ಕಡೆಗಳಲ್ಲಿ ಕಟ್ಟಡ ಕಾರ್ಮಿಕರಿಂದಲೇ ಅಪರಾಧ ಕೃತ್ಯಗಳು ನಡೆಯುತ್ತಿವೆ. ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ಸಭೆ ನಡೆಸುತ್ತೇವೆ. ಕಾರ್ಮಿಕ ಇಲಾಖೆ ಜೊತೆ ನಾವು ಜಂಟಿಯಾಗಿ ಸಭೆ ನಡೆಸುತ್ತೇವೆ” ಎಂದು ಪರಮೇಶ್ವರ್ ತಿಳಿಸಿದರು.
ಪೊಲೀಸರ ಗುಂಡೇಟಿಗೆ ಬಲಿ
ಐದು ವರ್ಷದ ಬಾಲಕಿಯ ಜೀವ ತೆಗೆದಿದ್ದ ಬಿಹಾರ ಮೂಲದ ಯುವಕ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ.
ಬಿಹಾರ ಮೂಲದ ಆರೋಪಿ ರಿತೇಶ್ ಕುಮಾರ್ ಪೊಲೀಸರ ಗುಂಡೇಟಿಗೆ ಬಲಿಯಾದ ಆರೋಪಿ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆಯಲೆಂದು ಹೋಗಿದ್ದರು. ಈ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ತಪ್ಪಿಸಿಕೊಳ್ಳಲು ಮುಂದಾಗಿದ್ದನು. ಆಗ ಹುಬ್ಬಳ್ಳಿ ಪೊಲೀಸರು ಆತ್ಮರಕ್ಷಣೆಗಾಗಿ ಫೈರಿಂಗ್ ಮಾಡಿದ್ದರು. ಮಹಿಳಾ ಪಿಎಸ್‌ಐ ಗುಂಡೇಟು ನೀಡಿದ್ದರು. ಗುಂಡು ತಾಗಿ ತೀವ್ರವಾಗಿ ಗಾಯಗೊಂಡಿದ್ದ ಆರೋಪಿಯನ್ನ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದರೂ ಚಿಕಿತ್ಸೆ ಫಲಿಸದಿದ್ದರಿಂದ ಜೀವ ಹೋಗಿದೆ.
ವಿಚಾರಣೆ ಮಾಡುವಾಗ ಆರೋಪಿಯು ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದನು. ಈ ವೇಳೆ ಆತನ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಕಮಿಷನರ್ ಶಶಿಕುಮಾರ್ ಅವರು ಕಿಮ್ಸ್ ಆಸ್ಪತ್ರೆಗೆ ಹೋಗಿ ಗಾಯಗೊಂಡಿರುವ ಮಹಿಳಾ ಪಿಎಸ್‌ಐ ಅನ್ನಪೂರ್ಣ ಹಾಗೂ ಸಿಬ್ಬಂದಿ ಆರೋಗ್ಯ ಹೇಗಿದೆ ಎಂದು ನೋಡಿಕೊಂಡು ಬಂದಿದ್ದಾರೆ.
ಆರೋಪಿ ಹುಬ್ಬಳ್ಳಿಯ ತಾರಿಹಾಳ ಬಳಿ ವಾಸವಿದ್ದನು ಎನ್ನುವ ಮಾಹಿತಿ ಆಧರಿಸಿ ಬಂಧಿಸಲೆಂದು ಪೊಲೀಸರು ಹೋಗಿದ್ದರು. ಆಗ ಸಿಬ್ಬಂದಿ ಮೇಲೆ ದಾಳಿ ಮಾಡಿದ್ದನು. ಗಾಳಿಯಲ್ಲಿ ಗುಂಡು ಹಾರಿಸಲಾಗಿತ್ತು. ಆದರೆ ಆರೋಪಿ ಓಡಿ ಹೋಗಲು ಪ್ರಯತ್ನಿಸಿದಾಗ ಫೈರಿಂಗ್ ಮಾಡಲಾಗಿದ್ದು, ಆರೋಪಿ ಬೆನ್ನಿಗೆ ಗುಂಡು ಹೊಕ್ಕಿದೆ. ಆದ್ರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಜೀವ ಹೋಗಿದೆ.
