ಮುಡಾ ಪ್ರಕರಣದಲ್ಲಿ ತನ್ನ ವಿರುದ್ಧ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ.
ಅರ್ಜಿ ವಿಲೇವಾರಿಯಾಗುವವರೆಗೆ ಮಧ್ಯಂತರ ಆದೇಶ ಮುಂದುವರಿಯಲಿದೆ ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ತಿಳಿಸಿದೆ. ಸಿಎಂ ಅರ್ಜಿ ವಿಚಾರಣೆ ಮುಗಿಯುವವರೆಗೂ ವಿಚಾರಣೆ ಮುಂದೂಡುವಂತೆ ಜನಪ್ರತಿನಿಧಿಗಳ ಕೋರ್ಟ್‌ಗೆ ಸೂಚಿಸಿ ಈ ಹಿಂದೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿತ್ತು.
ವಿಚಾರಣೆ ವೇಳೆ ಸಿಎಂ ಪರ ವಾದ ಮಂಡಿಸಿದ ವಕೀಲ ಅಭಿಷೇಕ್ ಮನು ಸಿಂಘ್ವಿ, “ಅಭಿಯೋಜನಾ ಮಂಜೂರಾತಿಯನ್ನು ಏಕೆ ಕೊಡಲಾಗಿದೆ ಎಂಬ ಅಂಶವೇ ರಾಜ್ಯಪಾಲರ ಆದೇಶದಲ್ಲಿ ಇಲ್ಲ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಸಿಎಂ ಸ್ಥಾನ ಖಾಲಿ ಇಲ್ಲ, ನಾನೇ ಮುಖ್ಯಮಂತ್ರಿಯಾಗಿ ಮುಂದುವರಿಯುವೆ: ಸಿದ್ದರಾಮಯ್ಯ ಸ್ಪಷ್ಟನೆ
ಸಿಎಂ ಪರವಾಗಿಯೇ ವಾದ ಮಂಡಿಸಿದ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್, “ಅಬ್ರಹಾಂ ಅವರ ಜೊತೆ ರಾಜ್ಯಪಾಲರು ಚರ್ಚಿಸಿದ್ದಾರೆ. ಆದರೆ, ಸ್ನೇಹಮಯಿ ಕೃಷ್ಣ ಅನುಮತಿ ಕೋರಿದರೂ ಅವರ ಜೊತೆಗಿನ ಚರ್ಚೆಯ ಕುರಿತ ಯಾವುದೇ ದಾಖಲೆ ಇಲ್ಲ. ಮತ್ತೊಬ್ಬ ದೂರುದಾರ ಪ್ರದೀಪ್ ಕುಮಾರ್ ವಿಚಾರದಲ್ಲೂ ಅದೇ ನಿಲುವನ್ನು ರಾಜ್ಯಪಾಲರು ಅನುಸರಿಸಿದ್ದಾರೆ” ಎಂದು ರವಿವರ್ಮ ಹೇಳಿದ್ದಾರೆ.
ಸ್ನೇಹಮಯಿ ಕೃಷ್ಣ ಪರ ವಕೀಲೆ ಲಕ್ಷ್ಮೀ ಅಯ್ಯಂಗಾರ್, ಅಬ್ರಹಾಂ ಪರ ವಕೀಲ ರಂಗನಾಥ ರೆಡ್ಡಿ, ಸಿಎಂ ಪರ ವಕೀಲರಾದ ಅಭಿಷೇಕ್ ಮನು ಸಿಂಘ್ವಿ, ಪ್ರೊ. ರವಿವರ್ಮ ಕುಮಾರ್ ವಾದ ಮಂಡಿಸಿದರು.
