ಕರ್ನಾಟಕದ ಪಾರಂಪರಿಕ ತಾಣಗಳ ಅಭಿವೃದ್ಧಿಗೆ ಅನಿವಾಸಿ ಭಾರತೀಯರ ನೆರವು ಪಡೆಯಲು ರಾಜ್ಯ ಸರ್ಕಾರ ಮುಂದಾಗಿದ್ದು, ಅಭಿವೃದ್ದಿಗಾಗಿ ರಾಜ್ಯಾದ್ಯಂತ ಹೊಸದಾಗಿ 500 ಪಾರಂಪರಿಕ ಕಟ್ಟಡಗಳನ್ನು ಗುರುತಿಸಿಸಲಾಗಿದೆ. ಅವುಗಳನ್ನು ಉಳಿಸಿ ಸಂರಕ್ಷಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಪ್ರವಾಸೋದ್ಯಮ ಮತ್ತು ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟಿಲ್ ಹೇಳಿದ್ದಾರೆ.
ಮೈಸೂರು ದಸರಾ ಅಂಗವಾಗಿ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ವತಿಯಿಂದ ಮೈಸೂರಿನ ಪುರಭವನ ಎದುರು ಪಾರಂಪರಿಕ ಉಡುಗೆಯಲ್ಲಿ ನೂತನ ದಂಪತಿಗಳಿಗಾಗಿ ಶುಕ್ರವಾರ ಆಯೋಜಿಸಿದ್ದ ಪಾರಂಪರಿಕ ಟಾಂಗಾ ಸವಾರಿಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ರಾಜ್ಯದಲ್ಲಿ ಒಟ್ಟು 25 ಸಾವಿರ ಪಾರಂಪರಿಕ ಕಟ್ಟಡಗಳು ಹಾಗೂ ಸ್ಮಾರಕಗಳಿವೆ. ಇವುಗಳಲ್ಲಿ 500 ರಿಂದ 600 ಪಾರಂಪರಿಕ ಕಟ್ಟಡಗಳನ್ನು ಸರ್ಕಾರ ಗುರುತಿಸಿದೆ. ಇನ್ನೂ ಎಲ್ಲ ಪಾರಂಪರಿಕ ಕಟ್ಟಡಗಳಾಗಲಿ, ಸ್ಮಾರಕಗಳನ್ನಾಗಲಿ ಸರ್ಕಾರವೊಂದೇ ಸಂರಕ್ಷಣೆ ಮಾಡಲು ಆಗುವುದಿಲ್ಲ. ಅದಕ್ಕೆ ಜನಸಾಮಾನ್ಯರ ಅಭಿಮಾನ ಹಾಗೂ ಸಹಕಾರ ಬೇಕಾಗುತ್ತದೆ” ಎಂದು ಅಭಿಪ್ರಾಯಪಟ್ಟರು.
“ಅಮೆರಿಕಾದ ಅನಿವಾಸಿ ಭಾರತಿಯರೊಡನೆ ಆನ್‌ಲೈನ್ ಮೂಲಕ (ಜೂಮ್ ಮೀಟಿಂಗ್) ಪಾರಂಪರಿಕ ಕಟ್ಟಡಗಳ ದತ್ತು ತೆಗೆದುಕೊಳ್ಳುವ ಸಂಬಂಧ ಚರ್ಚಿಸಿದ್ದೇನೆ. ಇದರಿಂದಾಗಿ ಸುಮಾರು 20 ಅನಿವಾಸಿ ಭಾರತೀಯರು ಪಾರಂಪರಿಕ ಕಟ್ಟಡಗಳನ್ನು ದತ್ತು ತೆಗೆದುಕೊಂಡು ಸಂರಕ್ಷಿಸುವ ಭರವಸೆ ನೀಡಿದ್ದಾರೆ” ಎಂದು ತಿಳಿಸಿದರು.
“ಪಾರಂಪರಿಕ ಕಟ್ಟಡಗಳು, ಸ್ಮಾರಕಗಳು ನಿಮ್ಮ ಊರಿನಲ್ಲಿಯೇ ಇದ್ದರೆ ಅಂತಹ ಸ್ಮಾರಕವನ್ನೂ ರಕ್ಷಿಸುವ ಹಕ್ಕು ನಿಮಗಿರುತ್ತದೆ ಹಾಗೂ ದತ್ತು ತೆಗೆದುಕೊಂಡು ರಕ್ಷಿಸಬಹುದಾಗಿದೆ. ಇಂತಹ ಕಟ್ಟಡಗಳನ್ನು ರಕ್ಷಿಸಲು ಜನರನ್ನು ಉತ್ತೇಜಿಸಲು ರಾಜ್ಯ ಸರ್ಕಾರವು “ನಮ್ಮ ಸ್ಮಾರಕಗಳ ದತ್ತು ಕಾರ್ಯಕ್ರಮ”ವನ್ನು ಹಮ್ಮಿಕೊಂಡಿದ್ದು, ಯಶಸ್ವಿಯಾಗಿ ಸಾಗುತ್ತಿದೆ” ಎಂದರು.
ವಿಜಯನಗರ ಸಾಮ್ರಾಜ್ಯ ಆಚರಿಸಿಕೊಂಡು ಬಂದಿದ್ದ ದಸರಾ ಪದ್ದತಿಯನ್ನು ಮೈಸೂರಿನ ಮಹಾರಾಜರು ಮುಂದುವರೆಸಿಕೊಂಡು ಬರುವ ಮೂಲಕ ಇಡೀ ಜಗತ್ತು ಮೈಸೂರಿನತ್ತ ನೋಡುವಂತೆ ಮಾಡಿದ್ದಾರೆ. ಇದಕ್ಕೆ ಮೈಸೂರು ಮಹಾರಾಜರಿಗೆ ನಾಡಿನ ಬಗ್ಗೆ ಇದ್ದ ಅಭಿಮಾನವೇ ಕಾರಣ” ಎಂದು ಎಚ್ ಕೆ ಪಾಟಿಲ್ ಹೇಳಿದರು.
ಕನ್ನಡ ನಾಡಿಗೆ ಹಬ್ಬವಾಗಿರುವ ದಸರಾ ಮೈಸೂರಿಗಾಗಲಿ, ನಾಡಿಗಾಗಲಿ ಸೀಮಿತವಾಗಿಲ್ಲ. ವಿಶ್ವವಿಖ್ಯಾತವಾಗಿರುವ ದಸರಾ ಇಡೀ ವಿಶ್ವಕ್ಕೆ ಶ್ರೇಷ್ಠವಾಗಿದೆ. ರಾಜ್ಯದ ಮುಖ್ಯಂಮತ್ರಿ ಸಿದ್ದರಾಮಯ್ಯ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ ಎಚ್ ಸಿ ಮಹದೇವಪ್ಪ ಅವರು ದಸರಾ ಮಹೋತ್ಸವದ ಬಗ್ಗೆ ಅಪಾರ ಕಾಳಜಿ ವಹಿಸಿದ್ದು, ದಸರಾ ಯಶಸ್ವಿಯಾಗಲು ಶ್ರಮಿಸುತ್ತಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ಮೈಸೂರು ದಸರಾ | ಕವಿತೆಗೆ ಭಾಷೆಯ ಅಂತರವಿಲ್ಲ: ಡಾ. ಎಚ್.ಸಿ ಮಹದೇವಪ್ಪ
ಕಾರ್ಯಕ್ರಮಕ್ಕೆ ಆಗಮಿಸಿದ ಸಚಿವ ಎಚ್ ಕೆ ಪಾಟೀಲ್ ದಂಪತಿಗೆ ಮಹಾಪೌರಾಯುಕ್ತ ಶಿವಕುಮಾರ್, ಪಾರಂಪರಿಕ ಹಾಗೂ ಪುರಾತತ್ವ ಇಲಾಖೆಯ ಆಯುಕ್ತ ಎ. ದೇವರಾಜು, ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕ ಎಂ ಕೆ ಸವಿತಾ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ್‌ಗೌಡ ಅವರು ಬಾಗಿನ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಹಲವು ದಂಪತಿಗಳು ಟಾಂಗಾದಲ್ಲಿ ಸಂಚರಿಸಿ ಖುಷಿ ಪಟ್ಟರು. ಸಚಿವ ಎಚ್ ಕೆ ಪಾಟಿಲ್ ದಂಪತಿಗಳೂ ಕೂಡ ಪಾರಂಪರಿಕ ಟಾಂಗಾದಲ್ಲಿ ಕುಳಿತು ಬೆಳಗಿನ ಸಮಯದಲ್ಲಿ ಮೈಸೂರು ಸಂಭ್ರಮ ನೋಡಿ ಸಂತಸಗೊಂಡರು.