ಮೈಸೂರು ಸ್ಯಾಂಡಲ್ ಸೋಪ್‌ಗಳನ್ನು ಉತ್ಪಾದಿಸುವ ಸರ್ಕಾರಿ ಸ್ವಾಮ್ಯದ ‘ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ’ವು (KSDL) 2024-25ನೇ ಸಾಲಿನಲ್ಲಿ 1,787 ಕೋಟಿ ರೂಪಾಯಿ ದಾಖಲೆ ವಹಿವಾಟು ನಡೆಸಿದೆ. ಅಲ್ಲದೆ, 416 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷದ ಲಾಭಕ್ಕಿಂತ 54 ಕೋಟಿ ರೂ. ಹೆಚ್ಚು ಲಾಭವಾಗಿದೆ ಎಂದು ಕೆಎಸ್‌ಡಿಎಲ್ ಹೇಳಿಕೊಂಡಿದೆ.
ಕೆಎಸ್‌ಡಿಎಲ್‌ನ ವಹಿವಾಟು ಮತ್ತು ಲಾಭದ ಬಗ್ಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಮತ್ತು ಕೆಎಸ್ ಡಿಎಲ್ ಅಧ್ಯಕ್ಷ ಅಪ್ಪಾಜಿ ಸಿ.ಎಸ್ ನಾಡಗೌಡ ಅವರು ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ. “2024-25ರ ಹಣಕಾಸು ವರ್ಷದಲ್ಲಿ ಬರೋಬ್ಬರಿ 43,144 ಟನ್‌ಗಳಷ್ಟು ಸಾಬೂನು ಮತ್ತು ಮಾರ್ಜಕಗಳನ್ನು ಮಾರಾಟ ಮಾಡಲಾಗಿದೆ” ಎಂದು ಹೇಳಿದ್ದಾರೆ.
“ಭಾರೀ ಪ್ರಮಾಣದ ಸಾಬೂನು ಮತ್ತು ಮಾರ್ಜಕಗಳ ಮಾರಾಟದಿಂದಾಗಿ ದಾಖಲೆಯ ಲಾಭ ಬಂದಿದೆ. ಲಾಭದಲ್ಲಿ ನಿಯಮಾನುಸಾರ 30% (123 ಕೋಟಿ ರೂ.) ಮೊತ್ತವನ್ನು ಸರ್ಕಾರಕ್ಕೆ ಹಸ್ತಾಂತರಿಸಲಾಗುತ್ತದೆ” ಎಂದು ತಿಳಿಸಿದ್ದಾರೆ.
“2023-24ರ ಆರ್ಥಿಕ ವರ್ಷದಲ್ಲಿ ಸಂಸ್ಥೆಯು 37,916 ಟನ್ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ 1,570 ಕೋಟಿ ರೂ. ವಹಿವಾಟು ನಡೆಸಿತ್ತು. ಆ ವರ್ಷ, 362 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. ಲಾಭದಲ್ಲಿ 108 ಕೋಟಿ ರೂ.ಗಳನ್ನು ಸರ್ಕಾರಕ್ಕೆ ಪಾವತಿ ಮಾಡಲಾಗಿತ್ತು” ಎಂದು ವಿವರಿಸಿದ್ದಾರೆ.
ಈ ವರದಿ ಓದಿದ್ದೀರಾ?: ಪ್ರಧಾನಿ ಮೋದಿ ನಿವೃತ್ತರಾಗುತ್ತಾರೆಯೇ? RSS ಕೇಂದ್ರ ಕಚೇರಿ ಭೇಟಿಯ ಉದ್ದೇಶವೇನು?
“ಕಳೆದ ವರ್ಷ ಲಾಭಂಶ ಕೊಡುವ ಸರ್ಕಾರಿ ಉದ್ದಿಮೆಗಳ ಪಟ್ಟಿಯಲ್ಲಿ ಕೆಎಸ್‌ಡಿಎಲ್ 21ನೇ ಸ್ಥಾನದಲ್ಲಿತ್ತು. ಈ ವರ್ಷ 3ನೇ ಸ್ಥಾನಕ್ಕೆ ಏರಿಕೆಯಾಗಿದೆ. 2024-25ರಲ್ಲಿ ಸಂಸ್ಥೆಯು ಉತ್ಪಾದನೆ, ಮಾರಾಟ ಮತ್ತು ಲಾಭ ಮೂರಲ್ಲಿಯೂ ಸಾರ್ವಕಾಲಿಕ ದಾಖಲೆ ಬರೆದಿದೆ” ಎಂದು ಹೇಳಿದ್ದಾರೆ.
“ಸಂಸ್ಥೆಯು ಮೈಸೋಪು, ಹ್ಯಾಂಡ್ ವಾಶ್, ಶವರ್ ಜೆಲ್, ಅಗರಬತ್ತಿ ಸೇರಿದಂತೆ 19 ಉತ್ಪನ್ನಗಳನ್ನು ತಯಾರಿಸುತ್ತಿದ್ದು, ಗ್ರಾಹಕರ ನಿರೀಕ್ಷೆಗಳನ್ನು ಪೂರೈಸುತ್ತಿದೆ. ಮಾರುಕಟ್ಟೆ ವಿಸ್ತರಣೆ ಮತ್ತು ಲಾಭಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇ-ಕಾಮರ್ಸ್ ಮತ್ತು ಆಧುನಿಕ ವ್ಯಾಪಾರ ಮಾದರಿಗಳನ್ನು ಸಂಸ್ಥೆಯು ಅಳವಡಿಸಿಕೊಳ್ಳುತ್ತಿದೆ” ಎಂದು ತಿಳಿಸಿದ್ದಾರೆ.