ನಬಾರ್ಡ್‌ ಸಾಲ ಮೊತ್ತ ಕಡಿತ; ಕೃಷಿ ವ್ಯವಸ್ಥೆಯನ್ನೇ ಸರ್ವನಾಶ ಮಾಡುತ್ತಿರುವ ಕೇಂದ್ರ ಸರ್ಕಾರ: ರೈತ ಸಂಘ ಆಕ್ರೋಶ

Date:

Advertisements

ಕೇಂದ್ರ ಸರ್ಕಾರದ ನೀತಿಗಳಿಂದಾಗಿ ನಬಾರ್ಡ್ ಸಾಲ ಮೊತ್ತವನ್ನು ಕಡಿಮೆ ಮಾಡಲಾಗಿದೆ. ಇದು ಖಂಡನೀಯ. ರಾಜ್ಯ ಸರ್ಕಾರವು ರೈತರಿಗೆ ನೀಡುವ ಶೂನ್ಯ ಬಡ್ಡಿ ದರದಲ್ಲಿ ನೀಡುವ ಕೃಷಿ ಸಾಲವನ್ನು ಯಾವುದೇ ಕಾರಣಕ್ಕೂ ಕಡಿಮೆ ಮಾಡದೇ ಮುಂದುವರಿಸಬೇಕು” ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹಿಸಿದ್ದಾರೆ.

ರೈತರಿಗೆ ನೀಡುವ ಸಾಲ ಕಡಿತ ಮಾಡಿರುವ ನಾಬಾರ್ಡ್ ನೀತಿ ವಿರೋಧಿಸಿ, ಮೈಕ್ರೋ ಫೈನಾನ್ಸ್ ಹಾವಳಿ ಕಿರುಕುಳ ತಡೆಗಟ್ಟಲು ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರೈತರು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ವೇಳೆ ಮಾತನಾಡಿದ ಬಡಗಲಪುರ ನಾಗೇಂದ್ರ, “ನಬಾರ್ಡ್‌ ರೈತರಿಗೆ ನೀಡುತ್ತಿದ್ದ ಸಾಲದ ಮೊತ್ತ ಕಡಿಮೆ ಮಾಡಲಾಗಿದೆ. ಕೇಂದ್ರ ಸರ್ಕಾರವು ಈ ಸಾಲಿನಲ್ಲಿ ಕರ್ನಾಟಕಕ್ಕೆ ನೀಡುತ್ತಿದ್ದ ಸಾಲವನ್ನು 58% ತಗ್ಗಿಸಿದೆ. ಈ ಮೂಲಕ, ಇಡೀ ಕೃಷಿ ವ್ಯವಸ್ಥೆಯನ್ನೇ ನಾಶ ಮಾಡಿ ಕೃಷಿ ಕ್ಷೇತ್ರವನ್ನು ಸಂಪೂರ್ಣ ಕಾರ್ಪೊರೇಟ್‌ ಕಂಪನಿಗಳ ವಶಕ್ಕೆ ನೀಡಲು ಮೋದಿ ಸರ್ಕಾರ ಹುನ್ನಾರ ನಡೆಸಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಸಹಕಾರಿ ಸಂಸ್ಥೆಗಳು ದೇಶದ ಬೆನ್ನೆಲುಬಾಗಿವೆ. ಗ್ರಾಮೀಣ ಪ್ರದೇಶದ ಆರ್ಥಿಕತೆಯನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ಹಾಲಿನ ಡೈರಿಗಳು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು, ಡಿಸಿಸಿ ಬ್ಯಾಂಕ್‌ಗಳ ಸಹಕಾರವೂ ಮಹತ್ವದ್ದಾಗಿದೆ. ಆದರೆ, ಕೇಂದ್ರ ಸರ್ಕಾರ ಕೃಷಿ ಕ್ಷೇತ್ರಕ್ಕೆ ನೀಡಲಾಗುವ ಎಲ್ಲ ಸೌಲಭ್ಯಗಳನ್ನೂ ಕಸಿದುಕೊಳ್ಳುತ್ತಿದೆ” ಎಂದು ಆರೋಪಿಸಿದರು.

Advertisements
WhatsApp Image 2025 01 29 at 1.00.29 PM

“ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿಯಿಂದ ಜನರಿಗೆ ಸಮಸ್ಯೆ ಆಗುತ್ತಿದೆ. ಮೈಕ್ರೊ ಫೈನಾನ್ಸ್‌ ಕಿರುಕುಳದಿಂದ ಗ್ರಾಮೀಣ ಪ್ರದೇಶದ ಮಹಿಳೆಯರು, ಕಾರ್ಮಿಕರು ಸಂಕಷ್ಟಕ್ಕೀಡಾಗಿದ್ದಾರೆ. ಮೈಕ್ರೋ ಫೈನಾನ್ಸ್‌ ಸಂಸ್ಥೆಗಳು ಎಸಗುವ ದೌರ್ಜನ್ಯಕ್ಕೆ ಕಡಿವಾಣ ಹಾಕಬೇಕು” ಎಂದು ಆಗ್ರಹಿಸಿದರು.

“ಕಾಂಗ್ರೆಸ್‌ ಸರ್ಕಾರವು ತನ್ನ ಪ್ರಣಾಳಿಕೆಯಲ್ಲಿ ಹೇಳಿದ್ದಂತೆ ಭೂ-ಸುಧಾರಣೆ ಕಾಯ್ದೆ ತಿದ್ದುಪಡಿಯನ್ನು ವಾಪಸ್ ಪಡೆಯಬೇಕು. ಎ.ಪಿ.ಎಂ.ಸಿ ಕಾಯ್ದೆಯನ್ನು ರೈತಸ್ನೇಹಿಯಾಗಿ ಮತ್ತಷ್ಟು ಬಲಪಡಿಸಬೇಕು. ಜಾನುವಾರು ಹತ್ಯೆ ನಿಷೇಧ ಸಂರಕ್ಷಣಾ ಕಾಯ್ದೆಯನ್ನು ರೈತರ ಹಿತದೃಷ್ಟಿಯಿಂದ ವಾಪಸ್ ಪಡೆಯಬೇಕು. ಕೃಷಿ ಪಂಪ್‌ಸೆಟ್ ವಿದ್ಯುತ್ ಸಂಪರ್ಕ ಉಚಿತವಾಗಿರಬೇಕು. ಅಕ್ರಮ-ಸಕ್ರಮ ಹಾಗೂ ಹೊಸ ವಿದ್ಯುತ್ ಸಂಪರ್ಕಗಳಿಗೆ ರೈತರೇ ಪೂರ್ಣ ವೆಚ್ಚ ಭರಿಸುವ ನಿಯಮ ಜಾರಿಗೆ ಬಂದಿದೆ. ಇದನ್ನು ವಾಪಸ್ ಪಡೆದು ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ಸಂಪರ್ಕ ಕೊಡಬೇಕು” ಎಂದು ಒತ್ತಾಯಿಸಿದರು.

ವಿಮೆಯೂ ಇಲ್ಲ, ಸಬ್ಸಿಡಿಯೂ ಇಲ್ಲಚಾಮರಸ ಮಾಲಿ ಪಾಟೀಲ್

“ಕೃಷಿ ಕೇತ್ರ ದೊಡ್ಡ ಸಂಕಷ್ಟದಲ್ಲಿದೆ. ಕೃಷಿ ಕ್ಷೇತ್ರದಲ್ಲಿದ್ದ ಕೂಲಿಕಾರರು ಹಳ್ಳಿ ಬಿಟ್ಟು ಪಣ್ಣಣಗಳತ್ತ ವಲಸೆ ಹೋಗುತ್ತಿದ್ದಾರೆ. ಇಂದಿರಾಗಾಂಧಿ ಅವರ ಸಮಯದಲ್ಲಿ ಸಮಗ್ರ ಅಭಿವೃದ್ಧಿ ದೃಷ್ಟಿ ಇಟ್ಟುಕೊಂಡು ರೈತರಿಗೆ ಸಾಲ ಸೌಲಭ್ಯ ಒದಗಿಸಲು ನಬಾರ್ಡ್ ಬ್ಯಾಂಕ್ ಆರಂಭ ಮಾಡಲಾಗಿತ್ತು. ಆದರೆ, ಈಗ ನಬಾರ್ಡ್ ನೀಡುವ ಮೊತ್ತವನ್ನು ಕಡಿತ ಮಾಡಲಾಗಿದೆ. ಸಾಲದ ಮಿತಿಯನ್ನೂ ಕಡಿಮೆ ಮಾಡಲಾಗಿದೆ. ಇದು ಕೃಷಿ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ” ಎಂದು ರೈತ ನಾಯಕ ಚಾಮರಸ ಮಾಲಿ ಪಾಟೀಲ್ ಹೇಳಿದ್ದಾರೆ.

“ರೈತರು ಬೆಳೆವ ಬೆಳೆಗಳಿಗೆ ಯೋಗ್ಯವಾದ, ನ್ಯಾಯವಾದ, ವೈಜ್ಞಾನಿಕವಾದ ಬೆಲೆ ಸಿಕ್ಕರೆ ರೈತರು ಸಬ್ಸಿಡಿಗಾಗಿ ಎದುರು ನೋಡುವ ಅಗತ್ಯವೇ ಇರುವುದಿಲ್ಲ. ಆದರೆ, ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಲ್ಲಿಯೂ ಕೂಡ ದೊಡ್ಡ ಮೋಸ ಇದೆ. ಕಳೆದ ವರ್ಷ 192 ತಾಲೂಕುಗಳಲ್ಲಿ ಭೀಕರ ಬರಗಾಲ ಇತ್ತು. ಆದರೂ, ಬೆಳೆ ವಿಮೆ ಮಾಡಿಸಿದ್ದ ರೈತರಿಗೆ ಪರಿಹಾರ ಸಿಗದಂತೆ ಈ ಕಾರ್ಪೋರೇಟ್ ಕಂಪನಿಗಳು ಮಾಡಿದವು. ರೈತರು ಕಟ್ಟಿದ್ದ ವಿಮೆಯ ಹಣವನ್ನು ವಿಮೆ ಕಂಪನಿಗಳು ರೈತರಿಗೆ ಕೊಡಲಿಲ್ಲ. ಆ ಹಣವೆಲ್ಲ ಎಲ್ಲಿ ಹೋಯಿತು? ಸಬ್ಸಿಡಿ ಎಲ್ಲ ರೈತರಿಗೆ ಸಿಗಬೇಕು. ಆದರೆ, ಅದು ಯಾರಿಗೂ ಸಿಗುತ್ತಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಬೆಳೆ ವಿಮೆ ಪರಿಹಾರ ಸಿಗದೇ ಇರುವುದು, ಸಬ್ಸಿಡಿ ದೊರೆಯದಿರುವುದು, ಬರ ಪರಿಹಾರ ನೀಡದಿರುವ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಬೆಳೆ ಪರಿಹಾರಕ್ಕಾಗಿ ಬಿಡುಗಡೆಯಾದ ಹಣವನ್ನು ಸರ್ಕಾರ ಸರಿಯಾಗಿ ರೈತರಿಗೆ ಹಂಚಿಕೆ ಮಾಡಿಲ್ಲ. ರೈತರಿಗೆ ಸಿಗಬೇಕಾದ ಸವಲತ್ತುಗಳನ್ನು ಒದಗಿಸಲು ಸರ್ಕಾರಗಳಿಗೆ ಇಚ್ಛಾಶಕ್ತಿಯಿಲ್ಲ. ನಬಾರ್ಡ್‌ಗೆ ಸರ್ಕಾರ ಮೋಸ ಮಾಡಿದೆ” ಎಂದು ಆರೋಪಿಸಿದರು.

ರೈತದ್ರೋಹಿ, ದಲಿತದ್ರೋಹಿ ಸರ್ಕಾರವನ್ನು ಕಿತ್ತೊಗೆಯಬೇಕಾಗಿದೆಮಾವಳ್ಳಿ ಶಂಕರ್

ದಸಂಸ ಅಧ್ಯಕ್ಷ ಮಾವಳ್ಳಿ ಶಂಕರ್ ಮಾತನಾಡಿ, ” ರಾಜ್ಯದಲ್ಲಿ ಕೆಂಪು, ನೀಲಿ, ಹಸಿರು ಬಾವುಟಗಳು ಒಂದಾದರೇ ವಿಧಾನಸೌಧದ ನಾಯಕತ್ವ ನಮ್ಮ ಬಳಿ ಬರುತ್ತಿದ್ದ ಕಾಲವಿತ್ತು. ಆದರೆ, ಇಂದು ಸರ್ಕಾರ ಮನಸೋ ಇಚ್ಚೇ ಆಡಳಿತ ನಡೆಸುತ್ತಿದೆ. ಕೇಂದ್ರ ಸರ್ಕಾರ ಕುಂಭಮೇಳದಲ್ಲಿ ಮುಳುಗಿ ಹೋಗಿದೆ. ಗಂಗೆಗೆ ಜಾತಿ ಧರ್ಮದ ಭೇಧವಿಲ್ಲ. ಬಣ್ಣ ಇಲ್ಲ. ಆದರೆ, ಸರ್ಕಾರ ಗಂಗೆಗೆ ಬಣ್ಣ ಬಳಿಯುವ ಕೆಲಸ ಮಾಡುತ್ತಿದೆ. ಈ ಸರ್ಕಾರ ಅದಾನಿ-ಅಂಬಾನಿಗಳಿಗೆ ಮನೆ ಹಾಕುತ್ತಿದೆ. ರಾಜ್ಯದಲ್ಲಿ ಸರ್ಕಾರ ಬದಲಾವಣೆ ಆದರೆ, ಸಮಸ್ಯೆ ಬಗೆಹರಿಯುತ್ತದೆ ಎಂದು ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಅದರೆ, ನಮ್ಮ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಯಡಿಯೂರಪ್ಪ ತಂದ ಕಾಯ್ದೆಗಳನ್ನು ಕಾಂಗ್ರೆಸ್ ಸರ್ಕಾರವೂ ಮುಂದುವರೆಸುತ್ತಿದೆ. ರೈತದ್ರೋಹಿ, ದಲಿತದ್ರೋಹಿ ಸರ್ಕಾರವನ್ನು ಕಿತ್ತೊಗೆಯಬೇಕಾಗಿದೆ” ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಬಿ.ಆರ್ ಪಾಟೀಲ್, “ರೈತರ ಹೋರಾಟದ ಬದುಕು ಇವತ್ತಿಗೆ ದುಸ್ತರವಾಗಿದೆ. ಈ ದೇಶದಲ್ಲಿ ಯಾವುದೇ ಮಂತ್ರಿ, ಶಾಸಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿಲ್ಲ. ಆದರೆ, ರೈತರು ಮಾತ್ರ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಎಂಎಸ್ಪಿ ಜಾರಿಗಾಗಿ ರೈತರು ದೆಹಲಿ ಗಡಿಯಲ್ಲಿ ಹೋರಾಟ ನಡೆಸಿದರು. ಹಲವು ರೈತರು ಜೀವ ತೆತ್ತರು. ಹೋರಾಟದಲ್ಲಿ ಸಾವನ್ನಪ್ಪಿದ ರೈತರ ಕುಟುಂಬಗಳಿಗೆ ಮೋದಿ ಸಾಂತ್ವನದ ಮಾತನ್ನಾಡಲಿಲ್ಲ. ಸಂವಿಧಾನದ ಆಶಯ ಸ್ವಾತಂತ್ರ್ಯ, ಸಮಾನತೆ, ನ್ಯಾಯ ಎಂದು ಹೇಳುತ್ತೇವೆ. ಆದರೆ, ಸಮಾನತೆ ಇನ್ನೂ ಬಂದಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ದೇಶದಲ್ಲಿ ಒಟ್ಟು ನಾಲ್ಕು ಕೋಟಿ ರೈತರಿಗೆ ಮಾತ್ರ ಸಾಲ ಸಿಕ್ಕಿದೆ. ಅನೇಕರಿಗೆ ಸಾಲ ಸೌಲಭ್ಯ ದೊರೆತಿಲ್ಲ. ಹೀಗಾಗಿಯೇ, ರೈತರು ತಕ್ಷಣಕ್ಕೆ ಕೃಷಿಗಾಗಿ ಹಣ ಬೇಕು ಎಂದಾಗ ಮೈಕ್ರೋಫೈನಾನ್ಸ್‌ನಿಂದ ಸಾಲ ಪಡೆಯುತ್ತಾರೆ. ಆದರೆ, ಈ ಮೈಕ್ರೋ ಫೈನಾನ್ಸ್‌ಗಳು ಜನರನ್ನು ಹೀರುತ್ತಿವೆ. ಮೈಕ್ರೋ ಪೈನಾನ್ಸ್ ಹಾವಳಿ ತಡೆಗಟ್ಟಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತದೆ” ಎಂದು ಒತ್ತಾಯಿಸಿದರು.

ಸಾಲ ಮನ್ನಾವೂ ಇಲ್ಲ, ಉತ್ತಮ ಬೆಲೆಯೂ ಸಿಗುತ್ತಿಲ್ಲ- ನೂರ್‌ ಶ್ರೀಧರ್

ಕರ್ನಾಟಕ ಜನಶಕ್ತಿಯ ಅಧ್ಯಕ್ಷ ನೂರ್ ಶ್ರೀಧರ್ ಮಾತನಾಡಿ, “ಎಚ್ ಎಸ್ ದೊರೆಸ್ವಾಮಿ ಅವರು ‘ರೈತರ ಸಾಲ ಮನ್ನಾ ಮಾಡಬೇಕು ಎಂಬುದನ್ನು ನಾನು ಒಪ್ಪುವುದಿಲ್ಲ. ಸಾಲ ಮನ್ನಾ ಮಾಡಿ ಬ್ಯಾಂಕ್‌ಗಳು ನಡೆಯುವುದು ಹೇಗೆ’ ಎನ್ನುತ್ತಿದ್ದರು. ಬದಲಾಗಿ, ರೈತರು ಬೆಳೆವ ಬೆಳೆಗಳಿಗೆ ಉತ್ತಮ, ವೈಜ್ಞಾನಿಕ ಬೆಲೆ ಕೊಡಬೇಕು. ರೈತರಿಗೆ ಕೃಷಿಯಲ್ಲಿ ಆದಾಯ-ಲಾಭ ಸಿಗುವಂತೆ ಮಾಡಬೇಕು ಎನ್ನುತ್ತಿದ್ದರು. ಆದರೆ, ಇಂದು ಸಾಲ ಮನ್ನಾವೂ ಇಲ್ಲ. ಉತ್ತಮ ಬೆಲೆಯೂ ಸಿಗುತ್ತಿಲ್ಲ. ಹೀಗಿರುವಾಗ ರೈತ ಸಾಲ ಮನ್ನಾಕ್ಕಾಗಿ ಒತ್ತಾಯಿಸುವುದು ಅನಿವಾರ್ಹವಾಗಿದೆ. ದೇಶಾದ್ಯಂತ ರೈತರ ಸಾಲ ಮನ್ನಾ ಮಾಡಿದರೆ, ಅದರ ಮೊತ್ತ 6 ಲಕ್ಷ ಕೋಟಿ ರೂ. ಮಾತ್ರ. ಆದರೆ, ಮೋದಿ ಸರ್ಕಾರ ಅದಾನಿ ಅಂಬಾನಿ ಸಾಲ ಮನ್ನಾ ಮಾಡಿರುವುದು ಇದಕ್ಕಿಂತ ಹೆಚ್ಚು. ಮೋದಿ ಅವರಿಗೆ ದೇಶದ ರೈತರು ಕಾಣಿಸಲ್ಲ. ಬಂಡವಾಳಶಾಹಿಗಳು ಮಾತ್ರ ಕಾಣಿಸುತ್ತಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಬಂಡವಾಳಶಾಹಿಗಳಿಗೆ ಇಡೀ ದೇಶದ ಭೂಮಿಯ ಮೇಲೆ ಕಣ್ಣಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ನೀತಿಯನ್ನು ತಂದು ರೈತರ ವ್ಯವಹಾರ, ಕೃಷಿ ವ್ಯವಸ್ಥೆಯನ್ನು ಬಂಡವಾಳಶಾಹಿಗಳ ಕೈಗಿಡಲು ಕೇಂದ್ರ ಸರ್ಕಾರ ಹವಣಿಸುತ್ತಿದೆ. ಕೇಂದ್ರ ಸರ್ಕಾರದ ಮಾರುಕಟ್ಟೆ ನೀತಿ ಜಾರಿಗೆ ಬಂದರೆ, ಅದಾನಿ-ಅಂಬಾನಿಗಳು ಈ ಕೃಷಿ ಮಾರುಕಟ್ಟೆಯನ್ನು ತಮ್ಮ ಹತೋಟಿಗೆ ತೆಗೆದುಕೊಳ್ಳುತ್ತಾರೆ. ಕರ್ನಾಟಕ ಸರ್ಕಾರ ಇದನ್ನು ವಜಾ ಮಾಡಬೇಕು. ರೈತರ ಬೆಳೆಗೆ 1.5 ಪಟ್ಟು ಹೆಚ್ಚು ಆದಾಯ ಸಿಗುವಂತೆ ಬೆಲೆ ನಿಗದಿ ಮಾಡಬೇಕು. ಇದು ಕಾನೂನಾಗಿ ಜಾರಿಗೆ ಬರಬೇಕು. ದೇಶದ ಎಲ್ಲ ರೈತರ ಸಾಲ ಮನ್ನ ಮಾಡಬೇಕು. ಎಲ್ಲ ರೈತರಿಗೂ ಸರ್ಕಾರವೇ ಸಾಲದ ವ್ಯವಸ್ಥೆ ಮಾಡಬೇಕು” ಎಂದು ಆಗ್ರಹಿಸಿದರು.

ಕೇಂದ್ರ ಸರ್ಕಾರ ಜನರ ವಿರೋಧಿ ಯೋಜನೆಇಂದೂಧರ

ಹಿರಿಯ ಪತ್ರಕರ್ತ ಹೋರಾಟಗಾರ ಇಂದೂಧರ ಹೊನ್ನಾಪುರ ಮಾತನಾಡಿ, “ಬಡವರು, ರೈತರು, ತಳಸಮುದಾಯದವರ ಇವತ್ತಿನ ಸ್ಥಿತಿಗೆ ನೇರವಾಗಿ ಸರ್ಕಾರವೇ ಹೊಣೆ. ಇದು ಸರ್ಕಾರಕ್ಕೂ ಗೊತ್ತು. ಸರ್ಕಾರ ತನ್ನ ಜವಾಬ್ದಾರಿಯನ್ನು ಮರೆತಿದೆ. ಸಹಕಾರಿ ಸಂಸ್ಥೆಗಳ ಮೂಲಕ ಅಗತ್ಯವಿದ್ದ ಬಡವರಿಗೆ ಸರಿಯಾಗಿ ಸಾಲ ಕೊಡದೇ ಇರುವುದೇ ಇದಕ್ಕೆ ಕಾರಣ. ಹಾಗಾಗಿ, ಇಡೀ ಕರ್ನಾಟಕದ ಜನ ಅತಿ ನೋವಿನಿಂದ ಕಣ್ಣೀರಿಡುವ ಪರಿಸ್ಥಿತಿ ಬಂದಿದೆ. ಸರ್ಕಾರ ನೆಪಗಳನ್ನು ಹೇಳದೆ ಜನರ ಸಮಸ್ಯೆಗಳನ್ನು ಪರಿಹರಿಸಬೇಕು. ಕೇಂದ್ರ ಸರ್ಕಾರ ಜನರ ವಿರೋಧಿ ಯೋಜನೆಗಳನ್ನು ತರುತ್ತಿದೆ. ಜನರಿಗೆ ಯಾವುದೇ ರೀತಿಯ ಸಹಕಾರ ನೀಡುತ್ತಿಲ್ಲ. ಆದರೆ, ಕರ್ನಾಟಕ ಸರ್ಕಾರ ಈ ರೀತಿ ಮಾಡದೇ, ರೈತರ ಪರವಾಗಿ ನಿಲ್ಲಬೇಕು. ಜನರ ಪರವಾಗಿ ನಿಲ್ಲಬೇಕು. ನಾವೆಲ್ಲರೂ ಒಟ್ಟಾಗಿ ರೈತರ ಪರವಾಗಿ ಹೋರಾಟ ಮಾಡಬೇಕು” ಎಂದು ಕರೆಕೊಟ್ಟರು.

ಸಚಿವ ಮಹಾದೇವಪ್ಪ ಮಾತನಾಡಿ, “ಪೈನಾನ್ಸ್ ಹಾವಳಿಯಿಂದ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಚಿಕ್ಕ ಬಾಲಕ ಫೈನಾನ್ಸ್ ಹಾವಳಿಗೆ ಬೇಸತ್ತು ಅನುಮತಿ ಕೊಟ್ಟರೆ ಕಿಡ್ನಿ ಮಾರುತ್ತೇನೆ ಎಂದು ಹೇಳಿದ. ನಿಜಕ್ಕೂ ಬೇಸರ ತರಿಸುತ್ತೆ. ಈಗಾಗಲೇ ಮುಖ್ಯಮಂತ್ರಿ ಮೈಕ್ರೋ ಫೈನಾನ್ಸ್ ತಡೆಯುವುದಕ್ಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ರೈತರು ನೀಡಿರುವ ನಿರ್ಣಯಗಳನ್ನು ಸಚಿವ ಸಂಪುಟದಲ್ಲಿ ಚರ್ಚೆ ಮಾಡುತ್ತೇವೆ” ಎಂದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025ಕ್ಕೆ ವಿಧಾನ ಪರಿಷತ್ತಿನಲ್ಲೂ ಅಂಗೀಕಾರ

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025 ಕ್ಕೆ ವಿಧಾನ ಪರಿಷತ್ತಿನಲ್ಲಿ...

ಸರ್ಕಾರಿ ಶಾಲೆಗಳನ್ನು ಮುಚ್ಚಿ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸರ್ಕಾರದಿಂದಲೇ ಷಡ್ಯಂತ್ರ: ಪ್ರೊ. ಮುರಿಗೆಪ್ಪ

"ತನ್ನ ಮೇಲಿನ ಭಾರವನ್ನು ಇಳಿಸಿಕೊಳ್ಳಲು ಸರ್ಕಾರಿ ಶಾಲೆಗಳನ್ನು ಮುಚ್ಚಿ ಖಾಸಗಿ ಶಾಲೆಗಳಿಗೆ...

Download Eedina App Android / iOS

X