ಕನ್ನಡಿಗರ ಹೆಮ್ಮೆಯ ಹಾಲಿನ ಬ್ರ್ಯಾಂಡ್ 'ನಂದಿನಿ' ಮೇಲೆ ಗುಜರಾತ್‌ನ ‘ಅಮುಲ್’ ಈಗಾಗಲೇ ಆಕ್ರಮಣಕಾರಿ ದರ ಸಮರ ಸಾರಿ, ‘ನಂದಿನಿ’ಗೆ ನೇರ ಸವಾಲೆಸೆದಿದೆ. ಈ ಬೆಳವಣಿಗೆ ನಡುವೆಯೇ ಮೆಟ್ರೋ ನಿಲ್ದಾಣಗಲ್ಲಿ ಮಳಿಗೆಗಳ ಸ್ಥಾಪನೆಗಾಗಿ ಬಿಎಂಆರ್‌ಸಿಎಲ್ ಕರೆದಿದ್ದ ಟೆಂಡರ್ 'ಅಮುಲ್' ಪಾಲಾಗಿದೆ. 'ನಂದಿನಿ' ಇರುವ ಅವಕಾಶವನ್ನೇ ಕೈ ಚೆಲ್ಲಿದೆ.
ಕರ್ನಾಟಕದಲ್ಲಿ ಹಂತ ಹಂತವಾಗಿ ಅಮುಲ್ ತನ್ನ ಮಾರುಕಟ್ಟೆಯನ್ನು ಹಿಗ್ಗಿಸಿಕೊಳ್ಳುತ್ತಿದ್ದು, ಇದರ ಮುಂದುವರಿಕೆಯಾಗಿ ಬೆಂಗಳೂರಿನ ಪ್ರಮುಖ ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ ಕಿಯೋಸ್ಕ್ ಮಳಿಗೆ ಸ್ಥಾಪಿಸಲು ಮುಂದಡಿಯಿಟ್ಟಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, ಹತ್ತು ಪ್ರಮುಖ ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ ಕಿಯೋಸ್ಕ್ ಮಳಿಗೆ ಸ್ಥಾಪಿಸಲು ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟ ಲಿಮಿಟೆಡ್‌ನೊಂದಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ತಿಳಿಸಿದೆ.
ಪಟ್ಟಂದೂರು ಅಗ್ರಹಾರ, ಇಂದಿರಾನಗರ, ಬೆನ್ನಿಗಾನಹಳ್ಳಿ, ಬೈಯಪ್ಪನಹಳ್ಳಿ, ಟ್ರಿನಿಟಿ, ಸರ್. ಎಂ ವಿಶ್ವೇಶ್ವರಯ್ಯ, ಮೆಜೆಸ್ಟಿಕ್, ನ್ಯಾಷನಲ್ ಕಾಲೇಜು, ಜಯನಗರ ಮತ್ತು ಬನಶಂಕರಿ ನಿಲ್ದಾಣಗಳಲ್ಲಿ ಅಮುಲ್ ಕಿಯೋಸ್ಕ್ ಮಳಿಗೆ ಸ್ಥಾಪನೆಯಾಗುತ್ತಿವೆ. ಬಿಎಂಆರ್‌ಸಿಎಲ್ ಮತ್ತು ಅಮುಲ್ ನಡುವಿನ ಈ ಒಪ್ಪಂದ ಚರ್ಚೆಗೆ ಗ್ರಾಸವಾಗಿದೆ. ಆದರೆ ಕರ್ನಾಟಕದ್ದೇ ಆದ ನಂದಿನಿ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗಿಯಾಗದೇ ಇರುವ ಅವಕಾಶವನ್ನು ಕೈ ಚೆಲ್ಲಿದೆ ಎನ್ನುವ ಮಾತುಗಳು ವ್ಯಕ್ತವಾಗಿವೆ.
ಈಗಾಗಲೇ ಕನ್ನಡಿಗರ ಹೆಮ್ಮೆಯ ಹಾಲಿನ ಬ್ರ್ಯಾಂಡ್ ‘ನಂದಿನಿ’ ಮೇಲೆ ಗುಜರಾತ್‌ನ ‘ಅಮುಲ್’ ರಾಜ್ಯದಲ್ಲಿ ಆಕ್ರಮಣಕಾರಿ ದರ ಸಮರ ಸಾರಿದೆ. ಹಾಲು ಮತ್ತು ಮೊಸರಿನ ದರಗಳನ್ನು ತಗ್ಗಿಸಿ ‘ನಂದಿನಿ’ಗೆ ನೇರ ಸವಾಲೆಸೆದಿದೆ. ಈ ಬೆಳವಣಿಗೆ ನಡುವೆಯೇ ಮೆಟ್ರೋ ನಿಲ್ದಾಣಗಲ್ಲಿ ಮಳಿಗೆಗಳ ಸ್ಥಾಪನೆಗಾಗಿ ಬಿಎಂಆರ್‌ಸಿಎಲ್ ಕರೆದಿದ್ದ ಟೆಂಡರ್ ಅಮುಲ್ ಪಾಲಾಗಿರುವುದು ನಂದಿನಿಗೆ ಹಿನ್ನಡೆಯಾಗಿದೆ. ಇದರಿಂದ ಹಾಲು, ಚಾಕೊಲೇಟ್‌ಗಳು, ಐಸ್‌ಕ್ರೀಮ್, ತ್ವರಿತ ಆಹಾರ ಉತ್ಪನ್ನಗಳು ಮತ್ತು ತಿಂಡಿಗಳನ್ನು ಮೆಟ್ರೋ ಪ್ರಯಾಣಿಕರಿಗೆ ಸುಲಭವಾಗಿ ಕೈಗೆ ಸಿಗುತ್ತವೆ. ಮೆಟ್ರೋ ನಿಲ್ದಾಣ ವ್ಯಾಪ್ತಿಯಲ್ಲಿ ಗ್ರಾಹಕರಿಗೂ ಇದರ ಅನುಕೂಲವಾಗಲಿದೆ.
ಅಮುಲ್ ಮಳಿಗೆ ಸ್ಥಾಪನೆ ವಿಚಾರ ಈಗ ರಾಜಕೀಯ ತಿಕ್ಕಾಟಕ್ಕೂ ವೇದಿಕೆ ಕಲ್ಪಿಸಿದೆ. ಸಾರ್ವಜನಿಕರ ಅಸಮಾಧಾನಕ್ಕೂ ಕಾರಣವಾಗಿದೆ. ಈ ಕುರಿತು ಜೆಡಿಎಸ್ ಎಕ್ಸ್ ತಾಣದಲ್ಲಿ ಡಿ ಕೆ ಶಿವಕುಮಾರ್ ಮತ್ತು ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತಗೆದುಕೊಂಡಿದೆ.

ಕಮಿಷನ್ ಆಸೆಗೆ ಸ್ವಾಭಿಮಾನ ಮಾರಿಕೊಂಡ ಡಿಕೆಶಿ: ಜೆಡಿಎಸ್
“ಕಮಿಷನ್ ಆಸೆಗೆ ಸ್ವಾಭಿಮಾನ ಮಾರಿಕೊಂಡ ಡಿ ಕೆ ಶಿವಕುಮಾರ್ ಡೂಪ್ಲಿಕೇಟ್ ಸಿಎಂ ಡಿಕೆಶಿಯ ನವರಂಗಿ ಆಟ ಮತ್ತೊಮ್ಮೆ ಬಯಲಾಗಿದೆ. ಚುನಾವಣೆಗೂ ಮುಂಚೆ ನಂದಿನಿ ಉಳಿಸಿ, ಕನ್ನಡಿಗರ ಆತ್ಮಗೌರವ ಮಾರಾಟಕ್ಕಿಲ್ಲ ಎಂದು ಪುಂಗಿ ಬಿಡುತ್ತಿದ್ದ ಡಿಕೆಶಿ, ಇಂದು ಕಮಿಷನ್ ಆಸೆಗೆ ಹೊರ ರಾಜ್ಯಗಳ ಹಾಲಿನ ಉತ್ಪನ್ನಗಳಿಗೆ ಮಣೆ ಹಾಕಿದ್ದಾರೆ” ಎಂದು ಜೆಡಿಎಸ್ ಟೀಕಿಸಿದೆ.
“ಬೆಂಗಳೂರಿನಲ್ಲಿ 10ಕ್ಕೂ ಹೆಚ್ಚು ಮೆಟ್ರೋ ನಿಲ್ದಾಣಗಳಲ್ಲಿ ಹೊರ ರಾಜ್ಯದ ಹಾಲಿನ ಉತ್ಪನ್ನಗಳ ಮಾರಾಟ ಮಳಿಗೆಗೆ ಅವಕಾಶ ನೀಡಲಾಗಿದೆ. ನಮ್ಮ ರೈತರ ಹಾಗೂ ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿರುವ ನಂದಿನಿ ಬ್ರ್ಯಾಂಡ್‌ಅನ್ನು ತನ್ನ ಪ್ರಚಾರಕ್ಕೆ ಬಳಸಿಕೊಂಡ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನಂದಿನಿಯನ್ನು ಮರೆತು, ಹೊರ ರಾಜ್ಯಗಳ ಹಾಲಿನ ಉತ್ಪನ್ನಗಳಿಗೆ ರತ್ನ ಕಂಬಳಿ ಹಾಸಿದೆ” ಎಂದು ವಾಗ್ದಾಳಿ ನಡೆಸಿದೆ.
“ನಂದಿನಿ ಹಾಲಿನ ಉತ್ಪನ್ನಗಳಿಗೆ ಸ್ಪರ್ಧಾತ್ಮಕವಾಗಿ ಮಾರುಕಟ್ಟೆ ಸೃಷ್ಟಿಸುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದ್ದು, ಕನ್ನಡಿಗರ ಹೆಮ್ಮೆಯ ಬ್ರ್ಯಾಂಡ್ ‘ನಂದಿನಿ’ಯ ಹಿತಾಸಕ್ತಿಗೆ ಧಕ್ಕೆ ತರುತ್ತಿದೆ” ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.

ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್) ವ್ಯವಸ್ಥಾಪಕ ನಿರ್ದೇಶಕ ಬಿ. ಶಿವಸ್ವಾಮಿ ಅವರನ್ನು ಈ ವಿಚಾರವಾಗಿ ‘ಈದಿನ.ಕಾಂ‘ ಸಂಪರ್ಕಿಸಿದಾಗ, “ಪ್ರಮುಖ ಮೆಟ್ರೋ ನಿಲ್ದಾಣಗಳಲ್ಲಿ ಮಳಿಗೆ ಸ್ಥಾಪನೆ ಇನ್ನೂ ಫೈನಲ್ ಆಗಿಲ್ಲ. ಕೆಎಂಎಫ್ ಕಡೆಯಿಂದಲೂ ಮನವಿ ಸಲ್ಲಿಸಲಾಗಿದೆ. ಆದರೆ ಬಿಎಂಆರ್‌ಸಿಎಲ್ ಪ್ರತಿ ಮಳಿಗೆಗೆ ಬಹಳಷ್ಟು ದುಬಾರಿ ಬಾಡಿಗೆ ಹೇಳುತ್ತಿದ್ದು, ವಾಣಿಜ್ಯೋದ್ಯಮ ಬಾಡಿಗೆಗಿಂತಲೂ ಅಧಿಕವಾಗಿದೆ. ಬಾಡಿಗೆ ದರ ಪರಿಶೀಲಿಸಲು ಕೋರಿದ್ದೇವೆ. ಕರ್ನಾಟಕದ ನಂದಿನಿಗೆ ಅವಕಾಶ ಕೊಡಿ ಎಂದು ಮನವಿ ಪತ್ರ ಸಲ್ಲಿಸಿದ್ದೇವೆ” ಎಂದು ತಿಳಿಸಿದರು.
ಬೆಂಗಳೂರು ಮೆಟ್ರೋ ರೈಲು ನಿಗಮದ ಪಿಆರ್‌ಒ ಶ್ರೀನಿವಾಸ್ ಮಾತನಾಡಿ, “10 ಮೆಟ್ರೋ ನಿಲ್ದಾಣಗಳಲ್ಲಿ ಮಳಿಗೆ ಸ್ಥಾಪನೆ ಟೆಂಡರ್ ಅಮುಲ್ ಪಾಲಾಗಿದೆ. ‘ನಂದಿನಿ’ ಟೆಂಡರ್ ಪ್ರಕ್ರಿಯೆಯಲ್ಲಿಯೇ ಭಾಗಿಯಾಗಿಲ್ಲ. ಹೀಗಿರುವಾಗ ನಾವು ಅವಕಾಶಕೊಡಲು ಹೇಗೆ ಸಾಧ್ಯ? ನಮ್ಮ ಆದ್ಯತೆ ಸಹ ನಂದಿನಿಯಾಗಿದೆ. ಆದರೆ ಅವರು ಮಳಿಗೆ ಸ್ಥಾಪಿಸಲು ಮುಂದೆ ಬರುತ್ತಿಲ್ಲ. ಹಿಂದೆ ಎಂಜಿ ರೋಡ್, ವಿಜಯನಗರ ಹಾಗೂ ಮಹಾಲಕ್ಷ್ಮೀ ಲೇಔಟ್‌ನಲ್ಲಿ ನಂದಿನಿ ಮಳಿಗೆ ಸ್ಥಾಪಿಸಿತ್ತು. ಲಾಭವಾಗಲಿಲ್ಲ ಎಂದು ಎರಡು ಮಳಿಗೆ ಕ್ಲೋಸ್ ಮಾಡಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮುಂಗಾರು ಮಳೆಗೆ ಸರ್ಕಾರ ಸಿದ್ಧವಿದೆಯೇ?
2023ರ ವಿಧಾನಸಭೆ ಚುನಾವಣೆ ಮುನ್ನ ಕೆಎಂಎಫ್ ಅನ್ನು ಅಮುಲ್ ಜತೆ ವಿಲೀನ ಮಾಡುವ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಡ್ಯದಲ್ಲಿ ಪ್ರಸ್ತಾಪಿಸಿದ್ದರು. ಅಮಿತ್ ಶಾ ಅವರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಅಮಿತ್ ಶಾ ಹೇಳಿಕೆಯಿಂದ ಹಾಲು ಉತ್ಪಾದಕ ಸಹಕಾರಿ ಸಂಘಗಳಲ್ಲಿ ಆತಂಕ ಶುರುವಾಗಿತ್ತು. ಕೆಎಂಎಫ್ ಹಾಗೂ ಅಮುಲ್ ವಿಲೀನ ಮಾಡುವ ಹುನ್ನಾರ ನಡೆಯುತ್ತಿದೆ ಅನ್ನೋ ಊಹಾಪೋಹ ಕೇಳಿ ಬಂದಿತ್ತು. ಗುಜರಾತಿನ ಅಮುಲ್ ದಾಳಿ ಹಿಂದೆ ರಾಜ್ಯದ ಸಹಕಾರ ವ್ಯವಸ್ಥೆ, ಸಣ್ಣ ರೈತರ ಬದುಕನ್ನು ನಾಶಗೊಳಿಸುವ ಹುನ್ನಾರ ಅಡಗಿದೆ ಎಂದು ಪ್ರತಿಪಕ್ಷದ ಸ್ಥಾನದಲ್ಲಿದ್ದ ಕಾಂಗ್ರೆಸ್ ಆಗ ಆಕ್ರೋಶ ವ್ಯಕ್ತಪಡಿಸಿತ್ತು.
ಹಿಂದೆ ಅಮುಲ್ ಆನ್‌ಲೈನ್‌ನಲ್ಲಿ ವ್ಯಾಪಾರಕ್ಕೆ ಇಳಿದಿರುವ ಕ್ರಮವು ಕನ್ನಡಿಗರ ಆಕ್ರೋಶಕ್ಕೂ ಕಾರಣವಾಗಿತ್ತು. ಅಮುಲ್ ಹಾಲು, ಮೊಸರನ್ನು ರಾಜ್ಯದಲ್ಲಿ ಪರಿಚಯಿಸುವ ಸಲುವಾಗಿಯೇ, ನಂದಿನಿ ಉತ್ಪನ್ನಗಳ ಕೃತಕ ಅಭಾವ ಸೃಷ್ಟಿಸಲಾಗುತ್ತಿದೆಯೇ ಎಂಬ ಅನುಮಾನವೂ ಮೂಡಿದ್ದರಿಂದ ಅಮುಲ್ ಹಾಲು ಮತ್ತು ಮೊಸರಿನ ಮಾರಾಟಕ್ಕೆ ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.