ನಕ್ಸಲ್ ಹೋರಾಟಗಾರರನ್ನು ಮುಖ್ಯವಾಹಿನಿಗೆ ತರುವ ಸರ್ಕಾರ ಪ್ರಯತ್ನದ ಭಾಗವಾಗಿ ಆರು ಮಂದಿ ಮಾವೋವಾದಿಗಳು ಶರಣಾಗತಿಗೆ ಮುಂದಾಗಿದ್ದಾರೆ. ಬುಧವಾರ ಚಿಕ್ಕಮಗಳೂರಿನಲ್ಲಿ ಸರ್ಕಾರದ ಎದುರು ಶರಣಾಗಲಿದ್ದಾರೆ ಎಂದು ವರದಿಯಾಗಿದೆ. ಶರಣಾಗತಿಗೂ ಮುನ್ನ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಕ್ಕೆ ಪತ್ರ ಬರೆದಿರುವ ನಕ್ಸಲ್ ಹೋರಾಟಗಾರರು ಹಲವು ಬೇಡಿಕೆಗಳನ್ನಿಟ್ಟಿದ್ದಾರೆ.
ಮಾವೋವಾದಿ ಹೋರಾಟದಲ್ಲಿದ್ದ ಚಿಕ್ಕಮಗಳೂರಿನ ಮುಂಡಗಾರು ಲತಾ, ವನಜಾಕ್ಷಿ, ದಕ್ಷಿಣ ಕನ್ನಡದ ಸುಂದರಿ, ಕೇರಳದ ಜೀಶ, ತಮಿಳುನಾಡಿನ ವಸಂತ ಕೆ ಅಲಿಯಾಸ್ ರಮೇಶ ಮತ್ತು ಆಂದ್ರಪ್ರದೇಶದ ಮಾರೆಪ್ಪ ಅರೋಲಿ ಅವರು ಸರ್ಕಾರದ ಎದುರು ಶರಣಾಗಿದ್ದಾರೆ. ಸರ್ಕಾರಗಳಿಗೆ ಬರೆದ ಪತ್ರದಲ್ಲಿ, ನಿರುದ್ಯೋಗ ಹೋಗಲಾಡಿಸಲು ಉದ್ಯೋಗ ಸೃಷ್ಟಿಗೆ ಆಧ್ಯತೆ ಕೊಡಬೇಕು, ತಮ್ಮ ವಿರುದ್ಧದ ಸುಳ್ಳು ಪ್ರಕರಣಗಳನ್ನು ರದ್ದುಗೊಳಿಸಬೇಕು ಹಾಗೂ ವಿಕ್ರಂಗೌಡ ಎನ್ಕೌಂಟರ್ ಪ್ರಕರಣದ ನ್ಯಾಯಾಂಗ ತನಿಖೆ ನಡೆಸಬೇಕು ಎಂಬುದು ಸೇರಿದಂತೆ ಹಲವಾರು ಹಕ್ಕೊತ್ತಾಯಗಳನ್ನು ಮುಂದಿಟ್ಟಿದ್ದಾರೆ.
“ದೇಶದ ಪ್ರಸ್ತುತ ಸಮಯದಲ್ಲಿ ಚಳುವಳಿಗಳು ಪಡೆಯುತ್ತಿರುವ ರೂಪಾಂತರ, ಸಾಮಾಜಿಕ ಅಗತ್ಯಗಳನ್ನು ಗಮನಿಸಿ ಸಶಸ್ತ್ರ ಹೋರಾಟ ಮಾರ್ಗವನ್ನು ತ್ಯಜಿಸಿ ಪ್ರಜಾತಾಂತ್ರಿಕ ಮುಖ್ಯವಾಹಿನಿಗೆ ಮರಳುವುದು ಉತ್ತಮವೆಂದು ನಾವು ಅರಿತಿದ್ದೇವೆ. ಯಾವುದೇ ಒತ್ತಡವಿಲ್ಲದೆ, ಸ್ವ-ಇಚ್ಛೆಯಿಂದ ಮುಖ್ಯವಾಹಿನಿಗೆ ಬರಲು ಬಯಸಿದ್ದೇವೆ” ಎಂದು ಹೇಳಿದ್ದಾರೆ. ಜೊತೆಗೆ ಕೆಲವು ಬೇಡಿಕೆಗಳನ್ನು ಸರ್ಕಾರಗಳ ಮುಂದಿಟ್ಟಿದ್ದಾರೆ.
“ನಾವು ಮುಖ್ಯವಾಹಿನಿಗೆ ಬರುವ ಪ್ರಕ್ರಿಯೆ ಘನತೆಯುತವಾಗಿ ನಡೆಯಬೇಕು. ನಮ್ಮ ಆತ್ಮಗೌರವ ಹಾಗೂ ಸ್ವಾಭಿಮಾನಕ್ಕೆ ದಕ್ಕೆಯಾಗುವಂತೆ ಯಾವುದೇ ಒತ್ತಡಗಳನ್ನು ಹೇರಬಾರದು. ನಾವು ಜನಪರ ಹೋರಾಟವನ್ನು ಕೈಬಿಡುವುದಿಲ್ಲ. ಪ್ರಜಾತಾಂತ್ರಿಕ ಚಳುವಳಿಗಳಲ್ಲಿ ತೊಡಗಿಸಿಕೊಳ್ಳಲು ಯಾವುದೇ ರೀತಿಯ ತಡೆ ಒಡ್ಡಬಾರದು. ನಮ್ಮ ಬದುಕನ್ನು ಜನತೆಗೆ ಮುಡುಪಿಟ್ಟಿದ್ದೇವೆ. ಜನ ಹಿತಕ್ಕಾಗಿಯೇ ಬದುಕಲು ಬಯಸುತ್ತೇವೆ” ಎಂದು ಹೇಳಿದ್ದಾರೆ.
ಈ ವರದಿ ಓದಿದ್ದೀರಾ?: ಮಣಿಪುರ ಹೊತ್ತಿ ಉರಿದಿದ್ದಕ್ಕೆ ಪ್ರಧಾನಿ ಮೋದಿ ಏಕೆ ಕ್ಷಮೆ ಕೇಳಬೇಕು?
“ನಾವು ಸಶಸ್ತ್ರ ಹೋರಾಟ ತ್ಯಜಿಸಿ ಬಂದ ಬಳಿಕ, ಜೈಲುಗಳಲ್ಲಿ ಕೊಳೆಯುವ ಸ್ಥಿತಿ ಎದುರಾಗಬಾರದು. ನಮ್ಮ ಮೇಲೆ ಹಾಕಿರುವ ಹಲವಾರು ಪ್ರಕರಣಗಳು ಸುಳ್ಳು ಪ್ರಕರಣಗಳಾಗಿವೆ. ಅವೆಲ್ಲವನ್ನೂ ರದ್ದುಗೊಳಿಸಬೇಕು. ಸುಳ್ಳು ಪ್ರಕರಣಗಳ ಜಾಲದಿಂದ ನಮಗೆ ಮುಕ್ತಿ ಸಿಗಬೇಕು” ಎಂದು ಒತ್ತಾಯಿಸಿದ್ದಾರೆ.
“ಮುಖ್ಯವಾಹಿನಿಗೆ ಬಂದ ಬಳಿಕ, ಜಾಮೀನು ಪಡೆದ ಹೊರಬರಲು ಸಹಕಾರ ನೀಡಬೇಕು. ಎಲ್ಲ ಪ್ರಕರಣಗಳನ್ನು ಒಂದೇ ನ್ಯಾಯಾಲಯದ ಅಡಿ ತಂದು ತ್ವರಿತ ವಿಚಾರಣೆ ನಡೆಸಬೇಕು. ಪ್ರಕರಣಗಳ ವಿಚಾರಣೆಗೆ ಕಾನೂನು ಹಾಗೂ ಆರ್ಥಿಕ ನೆರವನ್ನು ಸರ್ಕಾರವೇ ಭರಿಸಬೇಕು. ಹೊರ ಬಂದ ನಂತರ ನಮ್ಮ ಜೀವನಕ್ಕೆ ದಾರಿ ಏನು ಎಂಬುದರ ಕುರಿತು ಸ್ಪಷ್ಟತೆ ಬೇಕು” ಎಂದು ಕೇಳಿದ್ದಾರೆ.
“ವಿಕ್ರಮಗೌಡ ಅವರ ಎನ್ಕೌಂಟರ್ ಹತ್ಯೆ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು” ಎಂದು ಒತ್ತಾಯಿಸಿದ್ದಾರೆ.