ಪಿಂಜಾರ ಸಮುದಾಯದ ಬೇಡಿಕೆಗಳನ್ನು ಈಡೇರಿಸುವಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ತಾಳಿರುವುದನ್ನು ಖಂಡಿಸಿ ಒಗ್ಗಟ್ಟು ಪ್ರದರ್ಶಕ್ಕೆ ಸಮುದಾಯ ಸಜ್ಜಾಗುತ್ತಿದೆ. ಅದಕ್ಕೆ ಪೂರ್ವಭಾವಿಯಾಗಿ ಬೆಂಗಳೂರಿನ ಗಾಂಧಿಭವನದಲ್ಲಿ ಪಿಂಜಾರ ಜಾಗೃತಿ ಚಿಂತನಾ ಸಭೆ ಗುರುವಾರ ನಡೆಯಿತು.
ಕರ್ನಾಟಕದಲ್ಲಿ ಒಂದೂವರೆ ಕೋಟಿ ಮುಸ್ಲಿಮರಿದ್ದು ಅದರಲ್ಲಿ 30 ಲಕ್ಷಕ್ಕಿಂತ ಹೆಚ್ಚು ಪಿಂಜಾರರಿದ್ದಾರೆ. ಆದರೆ ಒಂದು ನಿಗಮ ಮಂಡಳಿಗಾಗಿ ಹಲವಾರು ವರ್ಷಗಳಿಂದ ಹೋರಾಡುತ್ತಿದ್ದೇವೆ ಎಂಬುದು ಪಿಂಜಾರ ಮುಖಂಡ ಅಳಲು.
’ಈದಿನ.ಕಾಂ’ ಜೊತೆಯಲ್ಲಿ ಮಾತನಾಡಿದ ಪಿಂಜಾರ ಮುಖಂಡರು ತಮ್ಮ ಸಮುದಾಯ ಎದುರಿಸುತ್ತಿರುವ ಸವಾಲು, ಸಮಸ್ಯೆಗಳನ್ನು ಬಿಚ್ಚಿಟ್ಟರು.
ಯಾದಗಿರಿ ಜಿಲ್ಲಾ ಪಿಂಜಾರ ವಿವಿಧೋದ್ದೇಶ ಸೇವಾ ಸಂಘದ ಅಹಮ್ಮದ್ ಪಠಾಣ್ ಮಾತನಾಡಿ, “ನಾವು ಪಿಂಜಾರರು, ಹಾಸಿಗೆ ದಿಂಬು ತಯಾರಿ ಕೆಲಸ ಮಾಡುತ್ತಿದ್ದವರು. ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು, ನಮ್ಮ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂಬುದು ನಮ್ಮ ಆಗ್ರಹವಾಗಿದೆ. ಸಿ.ಎಸ್.ದ್ವಾರಕನಾಥ್ ಅವರು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಆದರೆ ಸರ್ಕಾರ ಕೆಲವರ ಮಾತು ಕೇಳಿಕೊಂಡು ವರದಿ ಜಾರಿಗೆ ಮಾಡದೆ ಅನ್ಯಾಯ ಮಾಡಿದೆ. ಪಿಂಜಾರರನ್ನು ಜಾಗೃತಿ ಮಾಡಿ ಸರ್ಕಾರವನ್ನು ಅಲ್ಲಾಡಿಸುತ್ತೇವೆ” ಎಂದು ಎಚ್ಚರಿಸಿದರು.
“ಪಿಂಜಾರರನ್ನು ಕ್ಯಾಟಗರಿ ಒಂದರಲ್ಲಿ ಸೇರಿಸಬೇಕು. ಆದರೆ ಅನ್ಯಾಯವಾಗುತ್ತಿದೆ. ದೇವರಾಜು ಅರಸು ನಿಗಮಕ್ಕೆ ಹೋಗಿ ಅಂತಾರೆ. ಅಲ್ಲಿಗೆ ಹೋದರೆ ಅಲ್ಪಸಂಖ್ಯಾತರ ಇಲಾಖೆ ಹೋಗಿ ಅಂತಾರೆ” ಎಂದು ಬೇಸರ ವ್ಯಕ್ತಪಡಿಸಿದರು.
“ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಇಲ್ಲವಾಗಿದೆ. ನಮ್ಮ ಪ್ರಾತಿನಿಧ್ಯ ಕೇವಲ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗೆ ಸೀಮಿತವಾಗಿದೆ” ಎಂದು ತಿಳಿಸಿದರು.
ಅಖಿಲ ಭಾರತ ಪಿಂಜಾರ ಮಹಾಮಂಡಲದ ಅಧ್ಯಕ್ಷ ಫಕ್ರುದ್ದೀನ್ ಗೊರವನಕೊಳ್ಳ ಮಾತನಾಡಿ, “ಪಿಂಜಾರರು ಹಿಂದೂ ಮುಸ್ಲಿಂ ಧರ್ಮಗಳ ಸಾಮರಸ್ಯದ ಕೊಂಡಿ. ಹತ್ತಿ ಬೆಳೆಯುವ ಪ್ರದೇಶದಲ್ಲಿ ಈ ಸಮುದಾಯವಿದೆ. ಕನ್ನಡವೇ ಇವರ ಮನೆ ಮಾತು. ಮೂವತ್ತೈದು ವರ್ಷಗಳಿಂದ ಹೋರಾಟ ಮಾಡುತ್ತಲೇ ಇದ್ದೇವೆ. ನಿಗಮ ಸ್ಥಾಪನೆಯಾಗಿಲ್ಲ. ಬಸವರಾಜ ಬೊಮ್ಮಾಯಿಯವರು ಸಿಎಂ ಆಗಿದ್ದಾಗ ನಿಗಮ ಮಾಡುತ್ತೇವೆ ಎಂದರು. ಆದರೆ ನಿಗಮ ಕಾರ್ಯರೂಪಕ್ಕೆ ಬಂದಿಲ್ಲ” ಎಂದು ಹೇಳಿದರು.
ಅಖಿಲ ಭಾರತ ಜಮಾತೇ ಮನ್ಸೂರ್ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಗೌಸ್ ಪಾಷಾ ಮಾತನಾಡಿ, “ಪಿಂಜಾರ, ನದಾಫ್, ಮನ್ಸೂರಿ, ದೂದೇಕುಲ, ಲದಾಫ್ ಹೆಸರಿನ ನಮ್ಮ ಸಮುದಾಯ ರಾಜ್ಯದಲ್ಲಿ ಮೂವತ್ತು ಲಕ್ಷಕ್ಕೂ ಹೆಚ್ಚಿದೆ. ಪಿಂಜಾರ ಸಂಘಟನೆಗಳನ್ನು ಒಟ್ಟಿಗೆ ಸೇರಿಸಿ ಒಕ್ಕೂಟ ರಚಿಸುತ್ತಿದ್ದೇವೆ. ಇದು ಮೊದಲನೇ ಹೆಜ್ಜೆ. ಬಳ್ಳಾರಿ, ಬೀದರ್, ಬೆಳಗಾವಿ, ಮೈಸೂರಲ್ಲಿ ಸಭೆ ಮಾಡುತ್ತೇವೆ. ಬೆಂಗಳೂರಿನಲ್ಲಿ ಬೃಹತ್ ಹೋರಾಟ ಸಂಘಟಿಸಲಿದ್ದೇವೆ. ಅಷ್ಟರಲ್ಲಿ ಸರ್ಕಾರ ಎಚ್ಚೆತ್ತುಕೊಳ್ಳಬೇಕು” ಎಂದರು.
“ನಮ್ಮ ಸಮುದಾಯದ ಮೂಲ ಕಸುಬು ಹಾಸಿಗೆ ದಿಂಬು ತಯಾರಿ. ಆದರೆ ಕುರ್ಲಾನ್, ಡ್ಯೂರೆಪ್ಲೆಕ್ಸ್ ಅಂತಹ ಬ್ರಾಂಡೆಂಡ್ ಕಂಪನಿಗಳು ಬಂದು ನಮ್ಮ ಮೂಲವೃತ್ತಿ ನಶಿಸಿ ಹೋಗುತ್ತಿದೆ. ಸರ್ಕಾರ ಈ ಸಮುದಾಯಕ್ಕೆ ಪರ್ಯಾಯ ಮಾರ್ಗಗಳನ್ನು ತೆರೆಯಬೇಕು. ಹದಿನೆಂದು ಸಂಘಟನೆಗಳು ಇಂದಿನ ಸಭೆಯಲ್ಲಿ ಸೇರಿವೆ. ಎಲ್ಲ ಪಕ್ಷಗಳಲ್ಲಿನ ಪಿಂಜಾರರು ರಾಜಕೀಯ ಪಕ್ಕಕ್ಕಿಟ್ಟು ಒಂದಾಗಲು ಬಂದಿದ್ದಾರೆ” ಎಂದು ವಿವರಿಸಿದರು.
ಅಖಿಲ ಕರ್ನಾಟಕ ಜಮಾತೇ ಮನ್ಸೂರ್ ಸಂಘಟನೆಯ ರಾಜ್ಯಾಧ್ಯಕ್ಷ ಕೆ.ಎಂ.ಜಮೀರ್ ಮಾತನಾಡಿ, “ಶಿಕ್ಷಣ, ಜಾತಿ ದೃಢೀಕರಣ ಯಾವುದೂ ಸಿಗುತ್ತಿಲ್ಲ. ಸರ್ಕಾರಗಳು ಮತಬ್ಯಾಂಕ್ ಆಗಿ ಮಾತ್ರ ನಮ್ಮನ್ನು ನೋಡುತ್ತಿವೆ. ಮುಸ್ಲಿಂ ಮುಖಂಡರು ಗೆದ್ದರೂ ಪಿಂಜಾರರಿಗೆ ಯಾವುದೇ ಸವಲತ್ತುಗಳು ಸಿಗುತ್ತಿಲ್ಲ. ಪಿಂಜಾರ ಜಾತಿ ಸರ್ಟಿಫಿಕೇಟ್ ಪ್ರತಿ ತಾಲ್ಲೂಕಿನಲ್ಲೂ ಸಿಗುವಂತಾಗಬೇಕು” ಎಂದು ಆಗ್ರಹಿಸಿದರು.
ಇದನ್ನೂ ನೋಡಿರಿ: ಸಮುದಾಯ ಪರಿಚಯ- 9: ಸಂಕರ ಸಂಸ್ಕೃತಿಯ ಪ್ರತಿರೂಪ ಪಿಂಜಾರರು