“ಪತ್ರಿಕೆಗಳು ಸರ್ಕಾರದ ಜಾಹೀರಾತುಗಳನ್ನು ಅವಲಂಬಿಸಿರುವುದು ಅನಾರೋಗ್ಯಕರ ಬೆಳವಣಿಗೆ” ಎಂದು ಅಜೀಂ ಪ್ರೇಮ್‌ಜಿ ಯುನಿವರ್ಸಿಟಿಯ ಪ್ರೊಫೆಸರ್ ಎ ನಾರಾಯಣ ಹೇಳಿದರು.
ಮಾಧ್ಯಮ ಅಕಾಡೆಮಿ, ಕರ್ನಾಟಕ ವಾರ್ತಾ ಮತ್ತು ಪ್ರಸಾರ ಇಲಾಖೆ ಸಹಯೋಗದಲ್ಲಿ ವಾರ್ತಾಭವನದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಪತ್ರಿಕಾ ದಿನ ಕಾರ್ಯಕ್ರಮದಲ್ಲಿ “ಬದಲಾಗುತ್ತಿರುವ ಪತ್ರಿಕಾ ಮಾಧ್ಯಮ” ವಿಷಯದಲ್ಲಿ ಅವರು ಮಾತನಾಡಿದರು.
“ಹಿಂದೆ ಪತ್ರಿಕೆ ತೆರೆದರೆ ಕ್ಲಾಸಿಫೈಡ್ ವಿಭಾಗದಲ್ಲಿ ವಧು-ವರರ ಅನ್ವೇಷಣೆ ಜಾಹೀರಾತುಗಳು ಇರುತ್ತಿದ್ದವು. ಈಗ ಅದು ಮ್ಯಾಟ್ರಿಮೊನಿ ವೆಬ್‌ಸೈಟಿಗೆ ಹೋಗಿದೆ. ರಿಯಲ್ ಎಸ್ಟೇಟ್ ಜಾಹೀರಾತುಗಳು, ಫಾಸ್ಟ್ ಮೂವಿಂಗ್ ಕಮರ್ಷಿಯಲ್ ಗೂಡ್ಸ್ ಜಾಹೀರಾತುಗಳು ಇರುತ್ತಿದ್ದವು. ಈಗ ಅವೆಲ್ಲ ಇಲ್ಲ. ಬರೇ ರಾಜಕೀಯ ಜಾಹೀರಾತುಗಳೇ ಕಾಣಿಸುತ್ತಿವೆ. ಪತ್ರಿಕೆಗಳು ಜಾಹೀರಾತುದಾರರಿಗೆ ಮತ್ತು ಓದುಗರಿಗೆ ಬೇಡ ಎಂದಾದರೆ ಅದು ಸರ್ಕಾರಕ್ಕೂ ಬೇಡವಾಗುತ್ತದೆ. ಕಾರ್ಪೊರೇಟ್ ಮತ್ತು ಸರ್ಕಾರದ ಜಾಹೀರಾತು ನಂಬಿ ಪತ್ರಿಕೆ ನಡೆಸುವುದು ಅಂದ್ರೆ ʼಪತ್ರಿಕೆಗಳು ಸಾಯುತ್ತಿಲ್ಲ, ಆತ್ಮಹತ್ಯೆ ಮಾಡಿಕೊಳ್ಳುತ್ತಿವೆʼ ಎಂಬ ಮಾತಿಗೆ ಸಾಕ್ಷಿ” ಎಂದರು.
“ಒಂದು ಕಾಲದಲ್ಲಿ ನಾವು ಪತ್ರಿಕೆಗಳನ್ನು ಓದಿ ಮಾಹಿತಿ ಗ್ರಹಿಸಿದ ವಿಧಾನಕ್ಕೂ, ಈಗಿನ ಯುವ ಸಮೂಹ ಗ್ರಹಿಸುವ ರೀತಿಗೂ ವ್ಯತ್ಯಾಸ ಇದೆ. ಈಗಿನ ಯುವಕರು ಅವರಿಗೆ ಬೇಕಿರುವ ಮಾಹಿತಿಯನ್ನಷ್ಟೇ ಅಂತರ್ಜಾಲದಿಂದ ಆಯ್ದುಕೊಳ್ಳುತ್ತಿದ್ದಾರೆ. ಹಿಂದೆ ಏರ್‌ರ್ಪೋರ್ಟ್‌ನಲ್ಲಿ ಪತ್ರಿಕೆಗಳನ್ನು ಇಟ್ಟರೆ ಅದು ಅಲ್ಲಿ ಇರುತ್ತಿರಲಿಲ್ಲ. ಈಗ ಇಡೀ ದಿನ ಅಲ್ಲೇ ಇರುತ್ತದೆ. ಏರ್ ಕ್ರಾಫ್ಟ್‌ನಲ್ಲಿ ಈಗ ಪತ್ರಿಕೆಗಳನ್ನು ಇಡುತ್ತಿಲ್ಲ. ಒಂದು ವೇಳೆ ಸೀಟಿನ ಮುಂದೆ ಇಟ್ಟರೂ, ಅದನ್ನು ಪ್ರಯಾಣಿಕರು ಮುಟ್ಟಲ್ಲ. ಇದು ಮಾಧ್ಯಮವನ್ನು ಬಳಸುವ ರೀತಿಯಲ್ಲಿ ಆಗಿರುವ ಬದಲಾವಣೆ. ಓದುಗರಿಗೆ ಪತ್ರಿಕೆ ಬೇಡವಾದರೆ ಅದು ಜಾಹೀರಾತುದಾರರ ಮೇಲೆ ಪ್ರಭಾವ ಬೀರುತ್ತದೆ. ವಾಸ್ತವದಲ್ಲಿ ಈಗ ಪತ್ರಿಕೆಗಳನ್ನು ಸಲಹುತ್ತಿರುವುದು ಸರ್ಕಾರದ ಜಾಹೀರಾತುಗಳು ಮಾತ್ರ. ಇದು ಅನಾರೋಗ್ಯಕರ ಬದಲಾವಣೆ” ಎಂದು ವಿಶ್ಲೇಷಿಸಿದರು.
ರಾಜಕಾರಣಿಗಳಿಗೆ ತಾನು ಪತ್ರಿಕಾಗೋಷ್ಠಿ ನಡೆಸುವ ಅಗತ್ಯವಿಲ್ಲ ಎಂದು ಅನ್ನಿಸಿದರೆ, ಅದು ಪತ್ರಿಕೆಗಳಿಗೆ “ನೀವು ಬೇಕಾಗಿಲ್ಲ” ಎಂಬ ಸಂದೇಶ ಕೊಟ್ಟಂತೆ. ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರು ತಿಂಗಳಿಗೊಂದು ಪತ್ರಿಕಾಗೋಷ್ಠಿ ನಡೆಸುತ್ತಿದ್ದರಂತೆ. ಆ ಪರಂಪರೆ ಈಗ ಹತ್ತು ವರ್ಷಗಳಲ್ಲಿ ಒಂದೇ ಒಂದು ಪತ್ರಿಕಾಗೋಷ್ಠಿ ನಡೆಸದಿರುವ ಮಟ್ಟಿಗೆ ಬಂದು ತಲುಪಿದೆ ಎಂದರು.

ಆಶಯ ಭಾಷಣ ಮಾಡಿದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರು, “ಮಾಧ್ಯಮಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿಲ್ಲ, ಮಾಧ್ಯಮ ಪ್ರತಿನಿಧಿಗಳನ್ನು ಕೊಲ್ಲಲಾಗುತ್ತಿದೆ” ಎಂದು ವಿಷಾದ ವ್ಯಕ್ತಪಡಿಸಿದರು. ಉತ್ತರಪ್ರದೇಶದಲ್ಲಿ ಬುಲ್ಡೋಜರ್‌ನಲ್ಲಿ ಮನೆಗಳನ್ನು ಉರುಳಿಸುವುದರ ವಿರುದ್ಧ ಸುಪ್ರೀಂಕೋರ್ಟ್ ಮಧ್ಯಪ್ರವೇಶ ಮಾಡಿದಂತೆ, ಮಾಧ್ಯಮಗಳ ಪರವಾಗಿಯೂ ಸುಪ್ರೀಂಕೋರ್ಟ್ ಮಧ್ಯಪ್ರವೇಶ ಮಾಡುವ ಸಂದರ್ಭ ಬರುತ್ತದೆ ಎಂದು ಹೇಳಿದರು.
ಪ್ರಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷೆ ಆಯೇಶಾ ಖಾನಂ, “ಆಧುನಿಕ ತಂತ್ರಜ್ಞಾನದ ಈ ಯುಗದಲ್ಲಿ ಮಾಧ್ಯಮ ಕ್ಷೇತ್ರದಲ್ಲೂ ಬಹಳಷ್ಟು ಬದಲಾವಣೆಗಳಾಗಿವೆ. ಡಿಜಿಟಲ್ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳಿಂದಾಗಿ ಮಾಹಿತಿಯನ್ನು ಅತ್ಯಂತ ವೇಗವಾಗಿ ತಲುಪಿಸುವುದು ಸಾಧ್ಯವಾಗಿದೆ. ಇದು ಎರಡು ಅಲಗಿನ ಕತ್ತಿಯಿದ್ದ ಹಾಗೆ. ಮಾಹಿತಿ ಹಂಚಿಕೆಯಲ್ಲಿ ಹೆಚ್ಚು ಹೆಚ್ಚು ಜನರು ಭಾಗಿಯಾಗುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿ ಇರುವ ಪ್ರತಿಯೊಬ್ಬರೂ ಪತ್ರಕರ್ತರು, ಛಾಯಾಗ್ರಾಹಕರು ಆಗಿಬಿಟ್ಟಿದ್ದಾರೆ. ಇದರಿಂದಾಗಿ ಸುಳ್ಳು ಸುದ್ದಿ, ವದಂತಿಗಳು ಹರಡುವುದೂ ಹೆಚ್ಚಾಗಿದೆ. ಪತ್ರಿಕೆಗಳು ಸಾಮಾಜಿಕ ಮೌಲ್ಯ, ದೇಶದ ಸ್ಥಿತಿಗತಿಗಳಿಗೆ ಹಿಡಿದ ಕೈಗನ್ನಡಿಯಾಗಿದೆ. ಅದು ಹಾಗೆಯೇ ಇರಬೇಕೇ ಹೊರತು ನಾವು ಬಯಸ್ಸಿದ್ದನ್ನು ನೋಡುವ ಮಾಯಾದರ್ಪಣವಾಗಬಾರದು” ಎಂದು ಹೇಳಿದರು.
ವಾರ್ತಾ ಇಲಾಖೆಯ ಆಯುಕ್ತ ಹೇಮಂತ್ ನಿಂಬಾಳ್ಕರ್ ಮಾತನಾಡಿ, “ಮಾಹಿತಿ ಹಕ್ಕು ಕಾಯ್ದೆಯ ಸ್ವರೂಪವನ್ನೂ ಬದಲಾಯಿಸಲಾಗುತ್ತಿದೆ. ದಿನ ದಿನವೂ ಅದರ ಶಕ್ತಿಹೀನ ಮಾಡುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಮಾಹಿತಿ ಹಕ್ಕು ಜನರ ಮೂಲಭೂತ ಹಕ್ಕು ಎಂದು ನಾವು ಕೊಟ್ಟಿದ್ದೇವೆ. ಈಗ ಸರ್ಕಾರದ ನಾಲ್ಕೈದು ಅಂಗಗಳು ಮಾತ್ರ ಅದಕ್ಕೆ ಒಳಪಟ್ಟಿದೆ. ಬೇರೆಲ್ಲದಕ್ಕೆ ವಿನಾಯ್ತಿ ನೀಡಲಾಗಿದೆ. ಮೂಲ ಆರ್‌ಟಿಐನಿಂದ ನಾವು ಬಹಳ ದೂರ ಬಂದುಬಿಟ್ಟಿದ್ದೇವೆ” ಎಂದರು.
ಮಾಧ್ಯಮಗಳ ಬದಲಾದ ಸ್ವರೂಪದ ಬಗ್ಗೆ ಮಾತನಾಡುವಾಗ ನಾವು ಯೋಚಿಸಬೇಕಾಗಿದ್ದು ಜಾಹೀರಾತುಗಳ ಬಗ್ಗೆ. ಜಾಹೀರಾತು ಇಲ್ಲದೇ ಪತ್ರಿಕೆಗಳನ್ನು ಐದು ರೂಪಾಯಿಗೆ ಓದುಗರಿಗೆ ಕೊಡಲು ಆಗುವುದಿಲ್ಲ. ಅದನ್ನು ಓದುಗರು ಭರಿಸುತ್ತಿಲ್ಲ. ಅದಕ್ಕೆ ಯಾರಾದರೂ ಸಬ್ಸಿಡೈಸ್ ಮಾಡಲೇಬೇಕು. ಅದು ಜಾಹೀರಾತುಗಳಿಂದ ಆಗುತ್ತದೆ. ಈ ಚಕ್ರವ್ಯೂಹದೊಳಗೆ ಪತ್ರಿಕೆಗಳು ಸಿಲುಕಿಕೊಂಡಿವೆ ಎಂದು ವಿಶ್ಲೇಷಿಸಿದರು.
ವಾರ್ತಾ ಇಲಾಖೆಯ ಉಪನಿರ್ದೇಶಕಿ ಸಹನಾ ಎಂ, ಹಿರಿಯ ಪತ್ರಕರ್ತೆ ಡಾ ವಿಜಯಮ್ಮ, ಮಾಧ್ಯಮ ಅಕಾಡೆಮಿಯ ಸದಸ್ಯರು, ಹಿರಿಯ ಪತ್ರಕರ್ತರು ಹಾಗೂ ಪತ್ರಿಕೋದ್ಯಮ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.