ದಿನೇಶ್ ಗುಂಡೂರಾವ್ ಕುಟುಂಬದ ಮೇಲೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಜಾರಿಯಾಗಿದೆ.
ಬೆಂಗಳೂರಿನ 42ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಕೋರ್ಟಿನ ಮ್ಯಾಜಿಸ್ಟ್ರೇಟ್ ಕೆ ಎನ್ ಶಿವಕುಮಾರ್ ಈ ಆದೇಶ ಜಾರಿ ಮಾಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ದಿನೇಶ್ ಗುಂಡೂರಾವ್ ಅವರ ಪತ್ನಿಯ ಟಬು ರಾವ್ ಅವರನ್ನು ಉಲ್ಲೇಖಿಸಿ, “ದಿನೇಶ್ ಗುಂಡೂರಾವ್ ಮನೆಯಲ್ಲಿ ಅರ್ಧ ಪಾಕಿಸ್ತಾನ ಇದೆ” ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಈ ಹೇಳಿಕೆಯ ವಿರುದ್ಧ ಟಬು ರಾವ್ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ಈ ಪ್ರಕರಣಕ್ಕೆ ತಡೆ ನೀಡುವಂತೆ ಕೋರಿ ಹೈಕೋರ್ಟಿನ ಮೆಟ್ಟಿಲೇರಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ಗೆ ಹೈಕೋರ್ಟ್ ಪೀಠ ತರಾಟೆಗೆ ತೆಗೆದುಕೊಂಡಿತ್ತು. ಅಲ್ಲದೇ, ಪ್ರಕರಣ ರದ್ದುಪಡಿಸಲು ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ 42ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ನ್ಯಾಯಾಲಯವು, ಬಂಧನ ವಾರೆಂಟ್ ಜಾರಿ ಮಾಡಿದ್ದಲ್ಲದೇ, ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ 28ಕ್ಕೆ ಮುಂದೂಡಿದೆ.
ಮಾನನಷ್ಟ ಪ್ರಕರಣಕ್ಕೆ ತಡೆ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ್ದ ಹೈಕೋರ್ಟಿನ ನ್ಯಾಯಮೂರ್ತಿ ನಾಗಪ್ರಸನ್ನ ಅವರು, ಪ್ರಕರಣಕ್ಕೆ ತಡೆ ನೀಡಲು ನಿರಾಕರಿಸಿದ್ದರಲ್ಲದೇ, ಶಾಸಕರ ಕೀಳು ಅಭಿರುಚಿಯ ಹೇಳಿಕೆಯನ್ನು ಪ್ರಶ್ನಿಸಿದ್ದರು. “ನೀವು ಹೇಳಿಕೆ ನೀಡಿದ್ದು ಹೌದೋ ಅಲ್ಲವೋ” ಎಂದು ಪ್ರಶ್ನಿಸಿದರು. ಹೇಳಿಕೆ ನೀಡಿದ್ದನ್ನು ಯತ್ನಾಳ್ ಪರ ವಕೀಲ ಒಪ್ಪಿಕೊಂಡಿದ್ದರು.
ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದ ನ್ಯಾಯಮೂರ್ತಿಯವರು, “ಈ ರೀತಿಯ ಪದ ಬಳಕೆ ಯಾವ ಅರ್ಥ ನೀಡುತ್ತದೆ. ವೈಯಕ್ತಿಕ ತೇಜೋವಧೆಗೆ ನೀವು ಏಕೆ ಇಳಿದಿದ್ದೀರಿ? ಇತ್ತೀಚೆಗೆ ಈ ರೀತಿಯ ಹೇಳಿಕೆಗಳು ಮಾಮೂಲಾಗಿವೆ. ಒಂದು ಸಮುದಾಯದ ವಿರುದ್ಧ ಈ ರೀತಿ ಪದಬಳಕೆ ಸರಿಯಲ್ಲ. ಒಬ್ಬರ ಪತ್ನಿ ಮುಸ್ಲಿಂ ಪತ್ನಿ ಆಂದ ತಕ್ಷಣ ಈ ರೀತಿಯ ಹೇಳಿಕೆ ನೀಡುವುದು ಸರಿಯಲ್ಲ” ಎಂದು ಚಾಟಿ ಬೀಸಿದ್ದರು.