ಇತ್ತೀಚಿನ ದಿನಗಳಲ್ಲಿ ದಿನ ಬಳಕೆಯ ವಸ್ತುಗಳ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಎಲ್ಲ ರೀತಿಯ ತರಕಾರಿ ಬೆಲೆಯೂ ಗಗನಕ್ಕೇರಿದೆ. ಪೌಷ್ಟಿಕ ಆಹಾರ ಕೊಳ್ಳಲು ಬಡವರು ಮಾತ್ರವಲ್ಲ, ಸಾಮಾನ್ಯರೂ ಹೆಣಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಮಯದಲ್ಲಿ ಈರುಳ್ಳಿ ಬೆಲೆ ಮತ್ತೆ ಏರಿಕೆಯಾಗಿದೆ. ಈ ಹಿಂದೆ 100 ರೂ. ದಾಟಿದ್ದ ಈರುಳ್ಳಿ ದರ, ಕೆಲ ದಿನಗಳಿಂದ 50 ರೂ.ಗಳ ಆಸುಪಾಸಿನಲ್ಲಿತ್ತು. ಇದೀಗ, ಮತ್ತೆ ಏರಿಕೆ ಕಂಡಿದೆ.
ಪ್ರಸ್ತುತ, ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ 80 ರೂ.ಗೆ ಏರಿಕೆಯಾಗಿದೆ. ಹೀಗೆಯೇ ಮುಂದುವರೆದರೆ ಮತ್ತೆ 100 ರೂ. ದಾಟುವ ಸಾಧ್ಯತೆಗಳಿವೆ ಎಂದು ವರ್ತಕರು ಹೇಳುತ್ತಿದ್ದಾರೆ. ಕಳೆದ ಒಂದು ತಿಂಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಈರುಳ್ಳಿಯ ಗುಣಮಟ್ಟ ಕುಸಿದ್ದು, ಇಳುವರಿಯೂ ಕಡಿಮೆಯಾಗಿದೆ. ನೆರೆಯ ರಾಜ್ಯಗಳಿಂದ ಈರುಳ್ಳಿಯನ್ನು ಆಮದು ಮಾಡಿಕೊಳ್ಳಬೇಕಾಗಿದೆ. ಹೀಗಾಗಿ, ಬೆಲೆ ಏರಿಕೆಯಾಗಿದೆ ಎಂದು ಹೇಳಲಾಗುತ್ತಿದೆ.
ಬೆಂಗಳೂರಿನ ಎಪಿಎಂಸಿಯಲ್ಲಿ ಕಳೆದ ವಾರ ಕ್ವಿಂಟಾಲ್ ಈರುಳ್ಳಿಗೆ 2,500ದಿಂದ 4,000 ರೂ. ಇತ್ತು. ಇದೀಗ, 7,500 ರೂ.ಗೆ ಏರಿಕೆಯಾಗಿದೆ. ಪರಿಣಾಮ, ಚಿಲ್ಲರೆ ಅಂಗಡಿಗಳಲ್ಲಿಯೂ ಬೆಲೆ ಏರುತ್ತಿದೆ ಎಂದು ವರದಿಯಾಗಿದೆ.