ರಾಜ್ಯ ಸರ್ಕಾರದ ಅಧಿಕೃತ ಕಾರ್ಯಕ್ರಮಗಳು ಹಾಗೂ ಸಮಾರಂಭಗಳಲ್ಲಿ ರಾಷ್ಟ್ರಗೀತೆ ‘ವಂದೇ ಮಾತರಂ’ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಲು ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (DPAR) ಈ ಕುರಿತು ಸುತ್ತೋಲೆ ಹೊರಡಿಸಿದ್ದು, ಇತ್ತೀಚೆಗೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದಂತೆ ಈ ಕ್ರಮ ಕೈಗೊಳ್ಳಲಾಗಿದೆ.
ಸರ್ಕಾರದ ಈ ನೂತನ ನಿಯಮವು ಎಲ್ಲ ಸಾಮಾನ್ಯ ರಾಜ್ಯ ಸರ್ಕಾರಿ ಕಾರ್ಯಕ್ರಮಗಳಿಗೆ ಅನ್ವಯಿಸಲಿದೆ. ಆದರೆ, ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿ ಅಥವಾ ರಾಜ್ಯಪಾಲರು ಭಾಗವಹಿಸುವ ಅತ್ಯುನ್ನತ ಮಟ್ಟದ ಅಧಿಕೃತ ಕಾರ್ಯಕ್ರಮಗಳು ಹಾಗೂ ಸಮಾರಂಭಗಳಿಗೆ ಈ ನಿರ್ಬಂಧ ಅನ್ವಯಿಸುವುದಿಲ್ಲ. ಇಂತಹ ಕಾರ್ಯಕ್ರಮಗಳಲ್ಲಿ ಸಂಪೂರ್ಣ ಗೀತೆಯನ್ನು ಬಳಸಲು ಅವಕಾಶವಿರಲಿದೆ.
ಇದನ್ನೂ ಓದಿ: ಮೋದಿ ಸರ್ಕಾರದ ವಿರುದ್ಧ ಅರ್ನಬ್ ಹಠಾತ್ತನೆ ಆರ್ಭಟಿಸಿದ್ದೇಕೆ? ಸ್ವಾರ್ಥಕ್ಕೋ ಪರಮಾರ್ಥಕ್ಕೋ!
ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ‘ವಂದೇ ಮಾತರಂ’ ಗೀತೆಯು ದೇಶಭಕ್ತಿ, ಏಕತೆ ಮತ್ತು ರಾಷ್ಟ್ರೀಯತೆಯ ಭಾವನೆ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು ಎಂಬುದನ್ನು ರಾಜ್ಯ ಸರ್ಕಾರ ತನ್ನ ಆದೇಶದ ಮುನ್ನುಡಿಯಲ್ಲಿ ಉಲ್ಲೇಖಿಸಿದೆ. ವಿವಿಧ ಸರ್ಕಾರಿ ಕಾರ್ಯಕ್ರಮಗಳ ಸ್ವರೂಪಕ್ಕೆ ಅನುಗುಣವಾಗಿ ಗೌರವ, ಏಕರೂಪತೆ ಮತ್ತು ಸೂಕ್ತ ಶಿಷ್ಟಾಚಾರವನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಈ ನಿರ್ಧಾರ ತಳೆಯಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಇತ್ತೀಚೆಗೆ ಕೇಂದ್ರ ಗೃಹ ಸಚಿವಾಲಯವು ಗೀತೆಯ ಗಾಯನಕ್ಕೆ ಸಂಬಂಧಿಸಿದಂತೆ ಕೆಲವು ಮಾರ್ಗಸೂಚಿಗಳನ್ನು ನೀಡಿತ್ತು. ಅದಾಗ್ಯೂ, ಕಾಂಗ್ರೆಸ್‌ನ 1937ರ ಐತಿಹಾಸಿಕ ನಿರ್ಣಯದ ತತ್ತ್ವಗಳಿಗೆ ಬದ್ಧವಾಗಿ ರಾಜ್ಯ ಸರ್ಕಾರ ಈ ನಿಯಮಾವಳಿಯನ್ನು ಜಾರಿಗೆ ತಂದಿದೆ.





