ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಕಿಶನ್ ಹೆಗ್ಡೆ ಕೊಳ್ಳೆಬೈಲು ಅವರನ್ನು ನೇಮಕ ಮಾಡಿ ಎಐಸಿಸಿ ಬುಧವಾರ ಅಧಿಕೃತ ಆದೇಶ ಹೊರಡಿಸಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಈ ಕುರಿತು ಆದೇಶ ಹೊರಡಿಸಿದ್ದು, ಕಿಶನ್ ಹೆಗ್ಡೆ ಅವರು ಈ ಹಿಂದೆ ಉಡುಪಿ ಜಿಲ್ಲಾ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕಿಶನ್ ಹೆಗ್ಡೆ ಅವರನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿತ್ತು. ಬಳಿಕ ಆ ನೇಮಕಾತಿಗೆ ತಡೆ ನೀಡಲಾಗಿತ್ತು. ಇತ್ತೀಚೆಗೆ ಎಐಸಿಸಿ ವೀಕ್ಷಕರನ್ನು ನೇಮಿಸಿ, ಸಂಘಟನ್ ಅಭಿಯಾನ್ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಪಕ್ಷದ ಸಂಘಟನೆ ಹಾಗೂ ನಾಯಕರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿತ್ತು. ವೀಕ್ಷಕರು ವರಿಷ್ಠರಿಗೆ ವರದಿ ಸಲ್ಲಿಸಿದ ಬಳಿಕ ಇದೀಗ ಕಿಶನ್ ಹೆಗ್ಡೆ ಅವರನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.
‘ಅಧಿಕಾರವಲ್ಲ, ಜವಾಬ್ದಾರಿ’
ನೂತನ ನೇಮಕಾತಿ ಕುರಿತು ಈದಿನ.ಕಾಮ್ ಜೊತೆ ಮಾತನಾಡಿದ ಕಿಶನ್ ಹೆಗ್ಡೆ ಕೊಳ್ಳೆಬೈಲು, ಪಕ್ಷ ತಮಗೆ ನೀಡಿರುವ ಜವಾಬ್ದಾರಿಯನ್ನು ಅತ್ಯಂತ ಗೌರವದಿಂದ ಸ್ವೀಕರಿಸಿರುವುದಾಗಿ ಹೇಳಿದರು. ‘ಪಕ್ಷ ನನಗೆ ಅಧಿಕಾರದ ಜವಾಬ್ದಾರಿ ಕೊಟ್ಟಿದೆ. ಪಕ್ಷ ನನ್ನನ್ನು ನೇಮಕ ಮಾಡಿರುವುದಕ್ಕೆ ಯಾವ ರೀತಿಯ ಋಣ ಸಂದಾಯ ಮಾಡಬೇಕು ಎಂಬುದು ಅರ್ಥವಾಗುತ್ತಿಲ್ಲ. ನನ್ನನ್ನು ಗುರುತಿಸಿ, ಗೌರವಿಸಿ ಅತ್ಯಂತ ದೊಡ್ಡ ಸ್ಥಾನಮಾನ ನೀಡಿದೆ. ಇದು ನನ್ನ ಜವಾಬ್ದಾರಿ, ಅಧಿಕಾರವಲ್ಲ’ ಎಂದು ಅವರು ಹೇಳಿದರು. ಪಕ್ಷದ ಕಾರ್ಯಕರ್ತರನ್ನು ತಲುಪುವುದು ತಮ್ಮ ಮೊದಲ ಆದ್ಯತೆಯಾಗಿದ್ದು, ಸಂಘಟನೆಯನ್ನು ಬೂತ್ ಮಟ್ಟದಿಂದ ಬಲಪಡಿಸುವುದಾಗಿ ಅವರು ತಿಳಿಸಿದರು.
‘ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ತಲುಪುವ ಕೆಲಸ ನನ್ನಿಂದ ಆಗಬೇಕಿದೆ. ನಾವು ಬೂತ್ ಮಟ್ಟಕ್ಕೆ ಹೋಗಬೇಕಿದೆ. 1112 ಬೂತ್‌ಗಳನ್ನು ಹೊಂದಿರುವ ಉಡುಪಿ ಜಿಲ್ಲೆಯಲ್ಲಿ ಪ್ರತಿಯೊಂದು ಬೂತ್‌ನ ಕಟ್ಟಕಡೆಯ ಕಾರ್ಯಕರ್ತನನ್ನು ಭೇಟಿಯಾಗಿ ಬಂದಾಗ ಮಾತ್ರ ಜಿಲ್ಲಾ ಅಧ್ಯಕ್ಷನಾಗಿ ನಾನು ಸಾರ್ಥಕನಾಗಿದ್ದೇನೆ ಎಂದು ಭಾವಿಸುತ್ತೇನೆ’ ಎಂದರು.
‘2028ರಲ್ಲಿ ಕಾಂಗ್ರೆಸ್ ಶಾಸಕರ ಪಡೆಯನ್ನು ತರುತ್ತೇವೆ’
ಉಡುಪಿ ಜಿಲ್ಲೆಯಲ್ಲಿ ಪ್ರಸ್ತುತ ಐದಕ್ಕೆ ಐದು ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಶಾಸಕರಿಲ್ಲ ಎಂಬ ವಾಸ್ತವವನ್ನು ಒಪ್ಪಿಕೊಂಡ ಕಿಶನ್ ಹೆಗ್ಡೆ, ಇದೇ ಪರಿಸ್ಥಿತಿಯನ್ನು ಬದಲಿಸುವ ಶಕ್ತಿ ಕಾಂಗ್ರೆಸ್ ಕಾರ್ಯಕರ್ತರಲ್ಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಇವತ್ತು ಈ ಜಿಲ್ಲೆಯಲ್ಲಿ ಐದಕ್ಕೆ ಐದು ಶಾಸಕರು ನಮ್ಮ ಪಕ್ಷದವರಿಲ್ಲ. ಆದರೆ ಒಂದು ವಿಷಯವನ್ನು ನೆನಪಿಟ್ಟುಕೊಳ್ಳಬೇಕು. ಇಲ್ಲ ಎನ್ನುವುದನ್ನು ಇದೆ ಎನ್ನುವಂತೆ ಮಾಡುವ ಶಕ್ತಿ ಕಾರ್ಯಕರ್ತರಲ್ಲಿದೆ. 2028ರ ಚುನಾವಣೆಯಲ್ಲಿ ಖಂಡಿತವಾಗಿಯೂ ಈ ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರ ಪಡೆಯನ್ನು ತಂದು ನಿಲ್ಲಿಸುವ ಕೆಲಸವನ್ನು ಕಾರ್ಯಕರ್ತರು ಮಾಡುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಅದು ಎರಡಿರಬಹುದು ಅಥವಾ ಐದೇ ಇರಬಹುದು, ಅದು ಬೇರೆ ವಿಷಯ. ಆದರೆ ಕಾಂಗ್ರೆಸ್ ಶಾಸಕ ಈ ಕಾಂಗ್ರೆಸ್ ಕಚೇರಿಯ ಮೆಟ್ಟಿಲನ್ನು ತುಳಿಯುತ್ತಾನೆ ಎನ್ನುವ ಭರವಸೆ ನಮ್ಮಲ್ಲಿದೆ. 2028ರ ಚುನಾವಣೆಯಲ್ಲಿ ಅದು ನಮ್ಮೆಲ್ಲರ ಕರ್ತವ್ಯ’ ಎಂದರು.
‘ಕಾಂಗ್ರೆಸ್‌ಗೆ ಅಧಿಕಾರ ತರುವುದೇ ಋಣ ಸಂದಾಯ’
ಪಕ್ಷದ ಋಣವನ್ನು ತೀರಿಸುವುದಾದರೆ, ಕಾಂಗ್ರೆಸ್ ಇಲ್ಲದ ಜಾಗದಲ್ಲಿ ಪಕ್ಷವನ್ನು ಸಂಘಟಿಸಿ ಅಧಿಕಾರಕ್ಕೆ ತರುವುದು ತಮ್ಮ ಮುಂದಿರುವ ಪ್ರಮುಖ ಗುರಿಯಾಗಿದೆ ಎಂದು ಕಿಶನ್ ಹೆಗ್ಡೆ ಹೇಳಿದರು.
‘ನಾವು ಕಾರ್ಯಕರ್ತರಾಗಿ ಕಾಂಗ್ರೆಸ್ ಪಕ್ಷದ ಋಣ ಸಂದಾಯ ಮಾಡುವುದಿದ್ದರೆ, ರಾಜ್ಯದಲ್ಲಿ ನಾವು ಇಲ್ಲ ಎನ್ನುವಂತಹ ಜಾಗದಲ್ಲಿ ನಾವು ಇದ್ದೇವೆ ಎನ್ನುವಂತೆ ಮಾಡುವುದೇ ನಮ್ಮ ಕರ್ತವ್ಯ. ಮುಂದಿನ ಸರ್ಕಾರದ ರಚನೆಯಲ್ಲಿ ಡಿ.ಕೆ. ಶಿವಕುಮಾರ್, ಬಿ.ಕೆ. ಹರಿಪ್ರಸಾದ್ ಅವರ ಕೈ ಬಲಪಡಿಸುವಲ್ಲಿ ಉಡುಪಿ ಜಿಲ್ಲೆಯ ಶಾಸಕರು ಇದ್ದಾರೆ ಎನ್ನುವುದನ್ನು ನಾವು ತೋರಿಸಿಕೊಡುತ್ತೇವೆ’ ಎಂದು ಅವರು ಹೇಳಿದರು.
‘ಅಷ್ಟರ ಮಟ್ಟಿಗೆ ನಾನು ಪಕ್ಷ ಸಂಘಟನೆ ಮಾಡುತ್ತೇನೆ ಎಂದು ಎದೆ ತಟ್ಟಿ ಹೇಳುತ್ತೇನೆ’ ಎಂದು ಕಿಶನ್ ಹೆಗ್ಡೆ ಕೊಳ್ಳೆಬೈಲು ವಿಶ್ವಾಸ ವ್ಯಕ್ತಪಡಿಸಿದರು.
‘ಸೋಲಿಗೆ ಕಾಂಗ್ರೆಸ್ ಹೆದರುವುದಿಲ್ಲ’
ಕಳೆದ ಚುನಾವಣೆಯ ಸೋಲಿನಿಂದ ಕಾಂಗ್ರೆಸ್ ಕಾರ್ಯಕರ್ತರು ಧೃತಿಗೆಡಬೇಕಿಲ್ಲ. ಪಕ್ಷ ಸೋಲಿಗೆ ಹೆದರುವುದಿಲ್ಲ ಎಂದು ಅವರು ಹೇಳಿದರು.
‘ನಾವು ಸೋತಿದ್ದೇವೆ, ಸರಿ. ಆದರೆ ಕಾಂಗ್ರೆಸ್ ಪಕ್ಷ ಸೋಲಿಗೆ ಹೆದರುವುದಿಲ್ಲ. ನಾವು ಗೆಲುವಿಗಾಗಿ ಬಿಜೆಪಿಯವರ ರೀತಿಯಲ್ಲಿ ವಾಮಮಾರ್ಗ ಹಿಡಿಯುವ ಪಕ್ಷವೂ ನಮ್ಮದಲ್ಲ. ನಾವು ಶ್ರಮಿಸುತ್ತೇವೆ, ಪಕ್ಷದ ಕಾರ್ಯಕರ್ತರೊಂದಿಗೆ ಬೆರೆಯುತ್ತೇವೆ. ಕಾರ್ಯಕರ್ತರ ಮುಖಾಂತರವೇ ಪಕ್ಷವನ್ನು ಈ ಜಿಲ್ಲೆಯಲ್ಲಿ ಅಧಿಕಾರಕ್ಕೆ ತರುತ್ತೇವೆ’ ಎಂದು ಅವರು ಹೇಳಿದರು.
‘ಇದು ನನ್ನ ಪ್ರಾಮಾಣಿಕ ಪ್ರಯತ್ನದ ಪ್ರಥಮ ಹೆಜ್ಜೆ’ ಎಂದು ಕಿಶನ್ ಹೆಗ್ಡೆ ಕೊಳ್ಳೆಬೈಲು ತಿಳಿಸಿದರು.

ಶಾರೂಕ್ ತೀರ್ಥಹಳ್ಳಿ
ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.






