ಅಪ್ರಾಪ್ತೆಯರು ಅಥವಾ 18 ವರ್ಷವಾಗದ ಬಾಲಕಿಯರಿಗೆ ಮದುವೆ ಮಾಡುವ ಪರಿಪಾಠಕ್ಕೆ ಪೋಷಕರೇ ಕಾರಣ. ಬಾಲ್ಯವಿವಾಹದ ಪ್ರಕರಣಗಳಲ್ಲಿ ಪೋಷಕರ ವಿರುದ್ಧ ದಾಖಲಾಗುವ ಕ್ರಿಮಿನಲ್ ಪ್ರಕರಣಗಳನ್ನು ರದ್ದುಪಡಿಸಬಾರದು ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ಬಾಲಕಿಯೊಬ್ಬರಿಗೆ ಬಾಲ್ಯವಿವಾಹ ಮಾಡಿಸಿದ್ದ ಕಾರಣಕ್ಕೆ ಆಕೆಯ ಪತಿ ಮತ್ತು ಪೋಷಕರು ವಿರುದ್ಧ ಪೋಕ್ಸೋ ಹಾಗೂ ಬಾಲ್ಯವಿವಾಹ ತಡೆ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣದ ರದ್ದು ಕೋರಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠವು ಅರ್ಜಿಯನ್ನು ವಜಾಗೊಳಿಸಿದೆ.
“ಬಾಲ್ಯ ವಿವಾಹ ಪ್ರಕರಣಗಳಲ್ಲಿ ಪೋಷಕರ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ರದ್ದುಪಡಿಸಬಾರದು. ಆಗ ಮಾತ್ರವೇ, ಇಂತಹ ಅನಿಷ್ಟ ಪದ್ಧತಿಯ ಆಚರಣೆ ನಿಲ್ಲುತ್ತದೆ” ಎಂದು ನ್ಯಾಯಮೂರ್ತಿ ಹೇಳಿದ್ದಾರೆ.
“ಹೆಣ್ಣು ಮಕ್ಕಳಿಗೆ 18 ವರ್ಷಗಳಾಗುವುದಕ್ಕೂ ಮುನ್ನವೇ ಅವರಿಗೆ ಮದುವೆಯಾಗುವಂತೆ ಬಲವಂತ ಮಾಡಲಾಗುತ್ತದೆ. ಈ ರೀತಿ ಯಾಕೆ ಒತ್ತಡ ಹಾಕಬೇಕು. ಪೋಷಕರ ಇಂತಹ ನಡೆಯನ್ನು ಸಮ್ಮತಿಸಲು, ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಅವರ ವಿರುದ್ಧ ದಂಡನಾ ಕ್ರಮ ಜರುಗಿಸಬೇಕು” ಎಂದಿದ್ದಾರೆ.