ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ವರ್ಗಾವಣೆ ಪ್ರಕ್ರಿಯೆಯನ್ನು ಏಪ್ರಿಲ್ 17ರಿಂದ (ಗುರುವಾರ) ಆರಂಭಿಸುವುದಾಗಿ ಪಂಚಾಯತ್ ರಾಜ್ ಇಲಾಖೆ ಹೇಳಿದೆ. ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡಲಾಗುತ್ತಿದೆ.
ಇದೇ ಮೊದಲ ಬಾರಿಗೆ ಪಿಡಿಒ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್–1, ಕಾರ್ಯದರ್ಶಿ ಗ್ರೇಡ್–2, ದ್ವಿತೀಯ ದರ್ಜೆ ಲೆಕ್ಕ ಸಹಾಯಕರನ್ನು ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡಲಾಗುತ್ತಿದೆ. ಇದಕ್ಕಾಗಿ, 2024ರ ಜೂನ್‌ನಲ್ಲಿಯೇ ಮಸೂದೆಯನ್ನು ಮಂಡಿಸಿ, ಅಂಗೀಕರಿಸಲಾಗಿತ್ತು.
ಹೊಸ ನಿಯಮದಂತೆ ಮಂಜೂರಾದ ಒಟ್ಟು ಹುದ್ದೆಗಳಲ್ಲಿ 9%ರಷ್ಟು ಕಡ್ಡಾಯ ಮತ್ತು ಸಾಮಾನ್ಯ ಕೋರಿಕೆ ವರ್ಗಾವಣೆ ಮತ್ತು 6%ರಷ್ಟು ವಿಶೇಷ ಪ್ರಕರಣಗಳ ಕೋರಿಕೆ ವರ್ಗಾವಣೆ – ಒಟ್ಟು 15%ರಷ್ಟು ಅಧಿಕಾರಿಗಳ ವರ್ಗಾವಣೆಗೆ ಅವಕಾಶ ಕಲ್ಪಿಸಲಾಗಿದೆ.
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಏಪ್ರಿಲ್ 17ರಿಂದ ಆರಂಭವಾಗಲಿದೆ. ಅರ್ಜಿ ಸಲ್ಲಿಸಲು ಏಪ್ರಿಲ್ 24ರವರೆಗೆ ಅವಕಾಶ ಇರುತ್ತದೆ. ವರ್ಗಾವಣೆ ಬಯಸುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಈ ಅವಧಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ವಿಶೇಷ ಪ್ರಕರಣಗಳ ಕೌನ್ಸೆಲಿಂಗ್ ಮೇ 8ರಂದು ನಡೆಯಲಿದೆ. ಸಾಮಾನ್ಯ ಕೋರಿಕೆಯ ಕೌನ್ಸೆಲಿಂಗ್ ಮೇ 9ರಂದು ನಡೆಯಲಿದ್ದು, ಕಡ್ಡಾಯ ವರ್ಗಾವಣೆ ಕೌನ್ಸೆಲಿಂಗ್ ಮೇ 12 ಮತ್ತು 13ರಂದು ನಡೆಯಲಿದೆ ಎಂದು ಇಲಾಖೆ ತಿಳಿಸಿದೆ.