ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಕ್ಕೆ ದಾಖಲಾಗಿರುವ ಫೋಕ್ಸೋ ಪ್ರಕರಣ ಸಂಬಂಧ ವಿಚಾರಣೆ ಎದುರಿಸುತ್ತಿರುವ ಚಿತ್ರದುರ್ಗದ ಮುರುಘಾಶ್ರೀಯವರ ಜಾಮೀನು ರದ್ದುಗೊಳಿಸಿಸಿರುವ ಸುಪ್ರೀಂ ಕೋರ್ಟ್, ನಾಲ್ಕು ತಿಂಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.
ಒಂದು ವಾರದಲ್ಲಿ ನ್ಯಾಯಾಂಗ ಬಂಧನಕ್ಕೆ ತೆರಳುವಂತೆ ಸೂಚನೆ ಕೂಡ ನೀಡಿದೆ. ಜೊತೆಗೆ ವಿಶೇಷ ಕೋರ್ಟಿನಲ್ಲಿ ಸಂತ್ರಸ್ತ ಮಕ್ಕಳ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಇದೇ ವೇಳೆ ಆದೇಶಿಸಿದೆ.
ಮುರುಘಾಶ್ರೀಯವರನ್ನು 4 ತಿಂಗಳ ಕಾಲಾವಧಿಗೆ ಜೈಲಿಗೆ ಕಳುಹಿಸಬೇಕು. ಈ ಅವಧಿಯೊಳಗೆ ಸಂತ್ರಸ್ತೆಯರು ಹಾಗೂ ಪೋಷಕರ ವಿಚಾರಣೆಗೆ ಮುಗಿಸಬೇಕು. ಒಂದು ವೇಳೆ ಪ್ರಕರಣದ ವಿಚಾರಣೆಯು ಮುಗಿಯದೇ ಇದ್ದಲ್ಲಿ ಜೈಲು ಶಿಕ್ಷೆಯ ಅವಧಿಯನ್ನು ಮತ್ತೆ ಎರಡು ತಿಂಗಳ ಕಾಲ ವಿಸ್ತರಣೆ ಮಾಡುವ ಕುರಿತು ಸುಪ್ರೀಂ ಕೋರ್ಟ್ ಗಮನಕ್ಕೆ ತರಬೇಕು ಎಂದು ಆದೇಶಿಸಲಾಗಿದೆ.
ಮುರುಘಾಶ್ರೀಗಳನ್ನು ಎಸ್ಜೆಎಂ ವಿದ್ಯಾಪೀಠದಲ್ಲಿನ ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಪ್ರಕರಣ ಸಂಬಂಧ ಬಂಧಿಸಲಾಗಿತ್ತು. ಬಳಿಕ ಹೈಕೋರ್ಟ್ ಮುರುಘಾ ಶ್ರೀಗೆ ಷರತ್ತು ಬದ್ಧ ಜಾಮೀನು ನೀಡಿತ್ತು. ಹಾಗೇ ಜಾಮೀನಿನ ಮೇಲೆ ಹೊರ ಬಂದ ಅವರು, ಮುರುಘಾ ಶ್ರೀ ಮಠ ಹಾಗೂ ಎಸ್ಜೆಎಂ ವಿದ್ಯಾಪೀಠದ ಆಡಳಿತ ನೋಡಿಕೊಳ್ಳುತ್ತಿದ್ದರು.
ಬಳಿಕ ಇದನ್ನು ಪ್ರಶ್ನಿಸಿ ಮಾಜಿ ಸಚಿವ ಎಚ್.ಏಕಾಂತಯ್ಯ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಮುರುಘಾ ಶ್ರೀ ಆಡಳಿತಕ್ಕೆ ನಿರ್ಬಂಧ ವಿಧಿಸಿತ್ತು. ಅಲ್ಲದೆ, ಮುರುಘಾಮಠ ಹಾಗೂ ಎಸ್ಜೆಎಂ ವಿದ್ಯಾಪೀಠ ಆಡಳಿತಕ್ಕೆ ಮೂರು ದಿನದಲ್ಲಿ ಸಮಿತಿ ರಚಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿತ್ತು.
ಅತ್ಯಾಚಾರ ಆರೋಪವನ್ನೇ ರದ್ದುಗೊಳಿಸುವಂತೆ ಅರ್ಜಿ ಸಲ್ಲಿಸಿದ್ದ ಮುರುಘಾ ಶ್ರೀ
ಮುರುಘಾ ಶ್ರೀಗಳು ಜೈಲಿನಿಂದ ಹೊರಗೆ ಬರುತ್ತಿದ್ದಂತೆಯೇ ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪವನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಅರ್ಜಿಯನ್ನು ಕಳೆದ ಮಾರಚ್ ತಿಂಗಳಲ್ಲಿ ವಿಚಾರಣೆ ಮಾಡಿದ್ದ ಹೈಕೋರ್ಟ್ ಮುರುಘಾ ಶರಣರ ಅರ್ಜಿಯನ್ನು ನಿರಾಕರಿಸಿತ್ತು.
ಈ ವೇಳೆ ಪೋಕ್ಸೋ ಪ್ರಕರಣಗಳ ವಿಶೇಷ ನ್ಯಾಯಾಲಯ ಪ್ರಾಸಿಕ್ಯೂಷನ್‌ನ ‘ಪೋಸ್ಟ್ ಆಫೀಸ್’ ಆಗಿ ಕಾರ್ಯ ನಿರ್ವಹಿಸಬಾರದು ಎಂದ ಹೈಕೋರ್ಟ್, ಧಾರ್ಮಿಕ ಸಂಸ್ಥೆಗಳ(ದುರುಪಯೋಗ ತಡೆ) ಕಾಯ್ದೆಯ ನಿಬಂಧನೆಗಳಿಗೆ ಸಂಬಂಧಿಸಿದಂತೆ ಶ್ರೀಗಳ ವಿರುದ್ಧದ ಆರೋಪಗಳನ್ನು ಮರುಪರಿಶೀಲಿಸುವಂತೆ ವಿಶೇಷ ನ್ಯಾಯಾಲಯಕ್ಕೆ ಸೂಚಿಸಿದೆ. ಅಲ್ಲದೆ, ಶ್ರೀಗಳ ವಿರುದ್ಧದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ(ದೌರ್ಜನ್ಯ ತಡೆ) ಕಾಯ್ದೆಗೆ ಸಂಬಂಧಿಸಿದಂತೆ ಕಾನೂನಿನ ಪ್ರಕಾರ ಮುಂದುವರಿಯುವಂತೆ ಆದೇಶಿಸಿತ್ತು.
