ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಮಳಗಾಳಿನಲ್ಲಿ ವಾರದ ಹಿಂದೆ ದಲಿತ ಯುವಕನ ಕೈಹಿಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಮುಖ ಆರೋಪಿಗಳಾದ ರೌಡಿ ಹರ್ಷ ಅಲಿಯಾಸ್ ಕೈಮ ಮತ್ತು ಕರುಣೇಶ್ ಅಲಿಯಾಸ್ ಕಣ್ಣನ ಕಾಲಿಗೆ ಪೊಲೀಸರು ಭಾನುವಾರ ಬೆಳಿಗ್ಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಗಾಯಗೊಂಡಿರುವ ಆರೋಪಿಗಳಿಬ್ಬರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೃತ್ಯದ ಬಳಿಕ ತಲೆ ಮರೆಸಿಕೊಂಡು ಓಡಾಡುತ್ತಿದ್ದ ಆರೋಪಿಗಳಿಬ್ಬರು, ಕಗ್ಗಲಿಪುರ ಬಳಿಯ ವ್ಯಾಲಿ ಸ್ಕೂಲ್ ರಸ್ತೆ ಬಳಿ ಬಚ್ಚಿಟ್ಟುಕೊಂಡಿದ್ದರು. ಖಚಿತ ಮಾಹಿತಿ ಮೇರೆಗೆ ಇಬ್ಬರನ್ನು ಬಂಧಿಸಲು ಬೆಳಿಗ್ಗೆ 5 ಗಂಟೆ ಸುಮಾರಿಗೆ ಕನಕಪುರ ಟೌನ್ ಠಾಣೆ ಪಿಐ ಮಿಥುನ್ ಶಿಲ್ಪಿ, ಗ್ರಾಮಾಂತರ ಪಿಐ ಕೃಷ್ಣ ಲಮಾಣಿ, ಪಿಎಸ್ಐಗಳಾದ ಮನೋಹರ್, ರವಿಕುಮಾರ್, ಕಾನ್‌ಸ್ಟೆಟೇಬಲ್‌ಗಳಾದ ರಾಜಶೇಖರ್ ಹಾಗೂ ಶಿವಕುಮಾರ್ ಸ್ಥಳಕ್ಕೆ ತೆರಳಿದ್ದರು.
ಆರೋಪಿಗಳಿದ್ದ ಸ್ಥಳವನ್ನು ಪೊಲೀಸರು ಸುತ್ತುವರಿಯುತ್ತಿದ್ದಂತೆ, ಆರೋಪಿಗಳಿಬ್ಬರು ಸಿಬ್ಬಂದಿ ರಾಜಶೇಖರ್ ಮತ್ತು ಶಿವಕುಮಾರ್ ಮೇಲೆ ಹಲ್ಲೆ ನಡೆಸಿ ಪಾರಾಗಲು ಯತ್ನಿಸಿದರು. ಆಗ ಗಾಳಿಯಲ್ಲಿ ಗುಂಡು ಹಾರಿಸಿದ ಪಿಐ ಮಿಥುನ್ ಶಿಲ್ಪಿ ತಪ್ಪಿಸಿಕೊಳ್ಳದಂತೆ ಎಚ್ಚರಿಕೆ ನೀಡಿದರು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಇದೆಲ್ಲ ಸಿದ್ದರಾಮಯ್ಯರನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸುವ ಷಡ್ಯಂತ್ರವೇ?
‘ಎಚ್ಚರಿಕೆ ಲೆಕ್ಕಿಸದೆ ಪೊಲೀಸರ ಮೇಲೆಯೇ ಹಲ್ಲೆ ನಡೆಸಲು ಯತ್ನಿಸಿದಾಗ ಆತ್ಮರಕ್ಷಣೆಗಾಗಿ ಹರ್ಷ ಕಾಲಿಗೆ ಮಿಥುನ್ ಶಿಲ್ಪಿ ಮತ್ತು ಕರುಣೇಶ್ ಕಾಲಿಗೆ ಪಿಎಸ್ಐ ಮನೋಹರ್ ಗುಂಡು ಹಾರಿಸಿದರು. ಸ್ಥಳದಲ್ಲೇ ಕುಸಿದು ಬಿದ್ದ ಇಬ್ಬರನ್ನೂ ವಶಕ್ಕೆ ಪಡೆದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಯಿತು’ ಎಂದು ಹೇಳಿದರು.
‘ಆರೋಪಿಗಳ ವಿರುದ್ದ ಕನಕಪುರ ಟೌನ್, ಗ್ರಾಮಾಂತರ ಸೇರಿದಂತೆ ವಿವಿಧ ಠಾಣೆಗಳಲ್ಲಿ ಕೊಲೆ ಯತ್ನ, ಪರಿಶಿಷ್ಟರ ಮೇಲೆ ದೌರ್ಜನ್ಯ ಸೇರಿದಂತೆ ಐದು ಪ್ರಕರಣಗಳಿವೆ. ಆಸ್ಪತ್ರೆಯಲ್ಲಿರುವ ಆರೋಪಿಗಳು ಚೇತರಿಸಿಕೊಂಡ ಬಳಿಕ ವಶಕ್ಕೆ ಪಡೆದು, ವಿಚಾರಣೆ ನಡೆಸಲಾಗುವುದು. ಕೃತ್ಯದಲ್ಲಿ ಒಟ್ಟು 7 ಮಂದಿ ಭಾಗಿಯಾಗಿದ್ದು, ಘಟನೆ ನಡೆದ ಮಾರನೇ ದಿನವೇ ಐವರನ್ನು ಬಂಧಿಸಲಾಗಿತ್ತು’ ಎಂದು ಮಾಹಿತಿ ನೀಡಿದರು.
ಆಸ್ಪತ್ರೆಗೆ ಕಾರ್ತಿಕ್ ರೆಡ್ಡಿ ಮತ್ತು ಬಂಧನ ಕಾರ್ಯಾಚರಣೆ ತಂಡ ಮೇಲ್ವಿಚಾರಣೆ ನಡೆಸುತ್ತಿದ್ದ ಚನ್ನಪಟ್ಟಣ ಡಿವೈಎಸ್ಪಿ ಕೆ ಸಿ ಗಿರಿ ಭೇಟಿ ನೀಡಿದರು.
