ಹಿರಿಯ ರಾಜಕಾರಣಿ, ಸಮಾಜವಾದಿ ಚಿಂತಕ ಕೆ.ಎಚ್. ಶ್ರೀನಿವಾಸ್(85) ಅವರು ನಿಧನರಾಗಿದ್ದಾರೆ. ಶುಕ್ರವಾರ ಬೆಳಗ್ಗೆ ಸುಮಾರು 11 ಗಂಟೆಗೆ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ.
ಕೆ. ಎಚ್. ಶ್ರೀನಿವಾಸ್ ನಿಧನದ ಬಗ್ಗೆ ಪುತ್ರಿ ವೈಶಾಲಿ ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ. “ಅಪಾರ ದುಃಖದಿಂದ ನಾನು ನಿಮಗೆ ನನಗಾದ ದೊಡ್ಡ ನಷ್ಟದ ಬಗ್ಗೆ ತಿಳಿಸುತ್ತೇನೆ. ನನ್ನ ತಂದೆ ಕೆ.ಎಚ್. ಶ್ರೀನಿವಾಸ್ ಅವರು ಇನ್ನಿಲ್ಲ. ಅವರು ಇಂದು ಬೆಳಗ್ಗೆ 11 ಗಂಟೆಗೆ ನಮ್ಮ ನಿವಾಸದಲ್ಲಿ ನಿಧನರಾದರು” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಉಡುಪಿ | ಸನ್ಮಾರ್ಗ, ಅನುಪಮ ಪತ್ರಿಕೆಯ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ವೈ ಸಿ ಅಬ್ದುಲ್ಲಾ ನಿಧನ
1939ರಲ್ಲಿ ಜನಿಸಿದ ಕೆ.ಎಚ್. ಶ್ರೀನಿವಾಸ್ ಅವರು ಶಿವಮೊಗ್ಗ ಜಿಲ್ಲೆಯ ಸಾಗರದವರು. ಇಂಗ್ಲಿಷ್ ಎಂಎ ಜೊತೆಗೆ ಕಾನೂನು ಪದವಿ ಪಡೆದಿದ್ದಾರೆ. ರಾಜಕಾರಣಿ ಮಾತ್ರವಲ್ಲದೇ ಸಾಹಿತ್ಯ, ಸಂಗೀತಕ್ಕೂ ಅವರ ಕೊಡುಗೆ ಅಪಾರ.
ಡಿ ದೇವರಾಜ ಅರಸು ಸರ್ಕಾರದಲ್ಲಿ ಸಚಿವರಾಗಿ ಇಂಧನ, ವಾರ್ತಾ, ಯುವಜನ ಸೇವೆ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಯೋಜನಾ ಖಾತೆಗಳನ್ನು ನಿರ್ವಹಿಸಿದ ಕೆ.ಎಚ್. ಶ್ರೀನಿವಾಸ್ ಅವರು ಮೂರು ಬಾರಿ ಶಾಸಕರಾಗಿ ಗೆದ್ದು, ಒಂದು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಗೆಲುವಿಗಿಂತ ಹೆಚ್ಚಾಗಿ ಸೋಲನ್ನೇ ಕಂಡವರು.
ಇದನ್ನು ಓದಿದ್ದೀರಾ? ರಾಜಕೀಯ ಚಿಂತಕ, ಹಿರಿಯ ವಿದ್ವಾಂಸ ಎ ಜಿ ನೂರಾನಿ ಇನ್ನಿಲ್ಲ
ಕುವೆಂಪು-ಗೋಪಾಲಗೌಡರ ಪ್ರಭಾವಕ್ಕೆ ಒಳಗಾಗಿ, ಅನಂತಮೂರ್ತಿ-ಲಂಕೇಶರ ಒಡನಾಟ ಹೊಂದಿದ್ದ ಶ್ರೀನಿವಾಸ್ ಅವರು ಸಮಾಜವಾದಿ ಚಿಂತಕರೂ ಹೌದು. ಕವಿ ಹೃದಯದ, ಸೌಮ್ಯಸ್ವಭಾವದ ವ್ಯಕ್ತಿ ಎಂದೇ ಹೆಸರಾದವರು.
ಕಾನಗೋಡು ಮನೆ, ಒಳಸೊನ್ನೆ ಹೊರಸೊನ್ನೆ, ಚಂದ್ರ ನೀನೊಬ್ಬನೆ ಮೂರು ಕವನ ಸಂಕಲನಗಳು, ಗುಬ್ಬಚ್ಚಿಯ ಗೂಡು ಎಂಬ ಚುಟುಕುಗಳ ಸಂಕಲನ, ಕೀನ್ ಎಂಬ ನಾಟಕ, ಸಾರ್ತೃನ ಪದಚರಿತ, ಸಾದತ್ ಹಸನ್ ಮಾಂಟೊ ಕುರಿತ ಅನುವಾದಿತ ಕೃತಿಗಳನ್ನು ಕನ್ನಡ ಸಾಹಿತ್ಯಲೋಕಕ್ಕೆ ಕೊಡುಗೆಯಾಗಿ ಕೊಟ್ಟವರು.
ಸಾಹಿತ್ಯ, ಸಂಗೀತ, ಕಾನೂನು, ರಾಜಕಾರಣದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಶ್ರೀನಿವಾಸ್ ಅವರು ಎಲ್ಲ ಕ್ಷೇತ್ರಗಳ ಜನರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದವರು.
ಕೆ. ಎಚ್. ಶ್ರೀನಿವಾಸ್ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. “ಮಾಜಿ ಸಚಿವರು, ಜನತಾ ಪರಿವಾರದ ಹಿರಿಯ ನಾಯಕರು ಆದ ಕೆ.ಹೆಚ್.ಶ್ರೀನಿವಾಸ್ ಅವರ ನಿಧನದಿಂದ ದುಃಖಿತನಾಗಿದ್ದೇನೆ. ರಾಜಕೀಯದ ಜೊತೆಗೆ ಕಲೆ, ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಬಹುಮುಖಿ ವ್ಯಕ್ತಿ ಶ್ರೀನಿವಾಸ್ ಅವರು ಹಳೆಯ ಮತ್ತು ಹೊಸ ತಲೆಮಾರಿನ ರಾಜಕಾರಣದ ಕೊಂಡಿಯಾಗಿದ್ದರು. ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬವರ್ಗಕ್ಕೆ ನೋವು ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸುತ್ತೇನೆ” ಎಂದು ಸಿಎಂ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮಾಜಿ ಸಚಿವರು, ಜನತಾ ಪರಿವಾರದ ಹಿರಿಯ ನಾಯಕರು ಆದ ಕೆ.ಹೆಚ್.ಶ್ರೀನಿವಾಸ್ ಅವರ ನಿಧನದಿಂದ ದುಃಖಿತನಾಗಿದ್ದೇನೆ. ರಾಜಕೀಯದ ಜೊತೆಗೆ ಕಲೆ, ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಬಹುಮುಖಿ ವ್ಯಕ್ತಿ ಶ್ರೀನಿವಾಸ್ ಅವರು ಹಳೆಯ ಮತ್ತು ಹೊಸ ತಲೆಮಾರಿನ ರಾಜಕಾರಣದ ಕೊಂಡಿಯಾಗಿದ್ದರು.
— CM of Karnataka (@CMofKarnataka) August 30, 2024
ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬವರ್ಗಕ್ಕೆ… pic.twitter.com/ntXb1WHLwD
