ಜನಪ್ರಿಯ ಕಾದಂಬರಿಕಾರ ಎಸ್ ಎಲ್ ಭೈರಪ್ಪ ಅವರು ವಯೋಸಹಜವಾಗಿ ಬುಧವಾರ ಸಾವನ್ನಪ್ಪಿದ್ದಾರೆ. ಅವರಿಗೆ 94 ವಯಸ್ಸಾಗಿತ್ತು.
ಬೆಂಗಳೂರಿನ ರಾಜರಾಜೇಶ್ವರಿ ನಗರದ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಮಧ್ಯಾಹ್ನ ವಿಧಿವಶರಾಗಿದ್ದಾರೆ. ಮೈಸೂರಿನಲ್ಲಿ ನಿವೃತ್ತಿ ಜೀವನನ್ನು ನಡೆಸುತ್ತಿದ್ದ ಭೈರಪ್ಪ ಅವರು ವಯೋಸಹಜದಿಂದಾಗಿ ಸಣ್ಣ ಪುಟ್ಟ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಿಂದ ಪತ್ರಕರ್ತ ವಿಶ್ವೇಶ್ವರ ಭಟ್ ಅವರ ಬೆಂಗಳೂರಿನ ಮನೆಯಲ್ಲಿ ಬಂದು ವಾಸವಾಗಿದ್ದರು.
ಅವರ ಸಾಹಿತ್ಯಿ ಸಾಧನೆ ಗುರುತಿಸಿ ಕೇಂದ್ರ ಸರ್ಕಾರ ಅತ್ಯುನ್ನತ ಪ್ರಶಸ್ತಿಗಳಾದ ಪದ್ಮಭೂಷಣ ಮತ್ತು ಸರಸ್ವತಿ ಸಮ್ಮಾನ್ ಪ್ರಶಸ್ತಿ ನೀಡಿ ಗೌರವಿಸಿದೆ. ಎಸ್. ಎಲ್. ಭೈರಪ್ಪ ಅವರು ಕನ್ನಡದ ಪ್ರಮುಖ ಜನಪ್ರಿಯ ಕಾದಂಬರಿಕಾರರಾಗಿ ಗುರುತಿಸಿಕೊಂಡಿದ್ದರು. ಅವರದ್ದೇ ಆದ ಓದುಗರ ಅಭಿಮಾನಿ ವರ್ಗವಿದೆ. ಅವರ ಕಾದಂಬರಿಗಳು ಭಾರತೀಯ ಬೇರೆ ಬೇರೆ ಭಾಷೆಗಳಿಗೆ ಅನುವಾದಗೊಂಡಿವೆ.
ಭೈರಪ್ಪ ಅವರಿಗೆ ಸರಸ್ವತಿ ಸಮ್ಮಾನ್ (2010), ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1975), ಪದ್ಮಭೂಷಣ (2023) ಸೇರಿದಂತೆ ಹಲವಾರು ಪ್ರಮುಖ ಪ್ರಶಸ್ತಿಗಳು ಲಭಿಸಿವೆ. ತಮ್ಮ ಹುಟ್ಟೂರಿನ ಅಭಿವೃದ್ಧಿಗಾಗಿ ಮತ್ತು ಸಮಾಜದ ಇತರ ಕಾರ್ಯಗಳಿಗೆ ನೆರವು ನೀಡಲು ಡಾ. ಎಸ್. ಎಲ್. ಭೈರಪ್ಪ ಪ್ರತಿಷ್ಠಾನ (ರಿ) ಸ್ಥಾಪಿಸಿದ್ದಾರೆ.
ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಸಂತೇಶಿವರದಲ್ಲಿ 26-07-1934ರಂದು ಹುಟ್ಟಿದ ಭೈರಪ್ಪನವರು ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲೇ ಪಡೆದಿದ್ದಾರೆ. ಕಿತ್ತು ತಿನ್ನುವ ಬಡತನ, ಬೇಜವಾಬ್ದಾರಿ ತಂದೆ, ಪ್ಲೇಗ್ ಮಾರಿಯಿಂದ ತತ್ತರಗೊಂಡ ಪರಿಸರದಲ್ಲಿ ಬದುಕಿದ ಕಥೆಯನ್ನು ಅವರು ತಮ್ಮ ಆತ್ಮಕಥೆ ಭಿತ್ತಿಯಲ್ಲಿ ಹೇಳಿಕೊಂಡಿದ್ದಾರೆ.
1961 ರಲ್ಲಿ `ಧರ್ಮಶ್ರೀ’ ಕಾದಂಬರಿ ಪ್ರಕಟಿಸಿ ನಾಲ್ಕು ದಶಕಗಳಲ್ಲಿ 21 ಕಾದಂಬರಿಗಳನ್ನು ಬರೆದಿದ್ದಾರೆ. ವಂಶವೃಕ್ಷ, ದಾಟು, ತಂತು, ಪರ್ವ, ಗೃಹಭಂಗ, ಸಾರ್ಥ, ಮಂದ್ರ ಇವರ ಪ್ರಮುಖ ಕಾದಂಬರಿಗಳು. ಅವರ ಕೃತಿಗಳು ಕನ್ನಡದಲ್ಲಿ ಹೆಚ್ಚು ಮಾರಾಟವಾಗುತ್ತಿದ್ದವು. ಹಿಂದಿ, ಮರಾಠಿ, ಮತ್ತು ಇಂಗ್ಲಿಷ್ ಸೇರಿದಂತೆ ಹಲವು ಭಾರತೀಯ ಭಾಷೆಗಳಿಗೆ ಭೈರಪ್ಪ ಅವರ ಕಾದಂಬರಿಗಳು ಅನುವಾದಗೊಂಡಿವೆ. ಆಯಾ ಕಾಲದಲ್ಲಿ ಬಂದ ಅವರ ಕಾದಂಬರಿಗಳೆಲ್ಲ ಚರ್ಚೆಗೆ ಒಳಗಾಗಿವೆ. ಅವರ `ಪರ್ವ’ ಕಾದಂಬರಿ ಭಾರೀ ಚರ್ಚೆಗೆ ಒಳಗಾಗಿದೆ.
ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ಮತದಾನ ಕಾದಂಬರಿಗಳು ಚಲನಚಿತ್ರವಾಗಿ ಪ್ರಶಸ್ತಿ ಗಳಿಸಿವೆ. ವಂಶವೃಕ್ಷಕ್ಕೆ 1966ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1975ರಲ್ಲಿ ದಾಟು ಕಾದಂಬರಿಗೆ ರಾಜ್ಯ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.
ಕಾದಂಬರಿಗಳಲ್ಲದೆ ಸಾಹಿತ್ಯ ಮೀಮಾಂಸೆಗೆ ಸಂಬಂಧಿಸಿದ ಸಾಹಿತ್ಯ ಮತ್ತು ಪ್ರತೀಕ, ಕಥೆ ಮತ್ತು ಕಥಾವಸ್ತು’, `ನಾನೇಕೆ ಬರೆಯುತ್ತೇನೆ’ ಎಂಬ ಕೃತಿಗಳನ್ನೂ ಭೈರಪ್ಪ ರಚಿಸಿದ್ದಾರೆ. 1999ರಲ್ಲಿ ಕನಕಪುರಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಭೈರಪ್ಪ ಆಯ್ಕೆಯಾಗಿದ್ದರು. ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ 2019ನೇ ಸಾಲಿನ ಉದ್ಘಾಟಕರನ್ನಾಗಿ ಎಸ್.ಎಲ್. ಭೈರಪ್ಪ ಆಯ್ಕೆಯಾಗಿದ್ದರು.