ಲೈಂಗಿಕ ಹಗರಣವೆಸಗಿ ವಿದೇಶಕ್ಕೆ ಪರಾರಿಯಾಗಿರುವ ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಬಗ್ಗೆ ವಿದೇಶಾಂಗ ಇಲಾಖೆ ಸ್ಪಷ್ಟನೆ ನೀಡಿದೆ.
ಪ್ರಜ್ವಲ್ ರೇವಣ್ಣ ವಿದೇಶಾಂಗ ಸಚಿವಾಲಯದಿಂದ ಯಾವುದೇ ಅನುಮತಿ ಪಡೆಯದೆ ರಾಜತಾಂತ್ರಿಕ ಪಾಸ್ಪೋರ್ಟ್ ಮೂಲಕ ಜರ್ಮನಿಗೆ ತೆರಳಿದ್ದಾನೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.
ವಾರದ ನಿಯಮಿತ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಇಲಾಖೆಯ ವಕ್ತಾರ ರಣಧೀರ್ ಜೈಸ್ವಾಲ್, ಸಂಸದನಿಗೆ ಜರ್ಮನಿಗೆ ತೆರಳಲು ರಾಜಕೀಯ ಅನುಮತಿ(ಪೊಲಿಟಿಕಲ್ ಕ್ಲಿಯರೆನ್ಸ್) ಅಥವಾ ವಿದೇಶಾಂಗ ಇಲಾಖೆಯ ಅನುಮತಿ ನೀಡಿರಲಿಲ್ಲ. ಸಂಸದ ಕೂಡ ಪಡೆದುಕೊಂಡಿರಲಿಲ್ಲ. ಆದರೆ ರಾಜತಾಂತ್ರಿಕ ಪಾಸ್ಪೋರ್ಟ್ ಮೂಲಕ ಸಂಸದ ವಿದೇಶಕ್ಕೆ ತೆರಳಿದ್ದಾನೆ ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ನೋಟಾವನ್ನು ಅಭ್ಯರ್ಥಿಯನ್ನಾಗಿ ಪರಿಗಣಿಸಲು ಇದು ಸಕಾಲ
ರಾಜತಾಂತ್ರಿಕ ಪಾಸ್‌ಪೋರ್ಟ್ ಹೊಂದಿರುವವರಿಗೆ ಯಾವುದೇ ದೇಶಕ್ಕೆ ತೆರಳಲು ವೀಸಾ ಅಗತ್ಯವಿಲ್ಲ. ಜರ್ಮನಿಗೆ ಪ್ರಯಾಣಿಸಲು ಸಚಿವಾಲಯವು ವೀಸಾ ಟಿಪ್ಪಣಿಯನ್ನೂ ನೀಡಿಲ್ಲ. ರಾಜತಾಂತ್ರಿಕ ಪಾಸ್ಪೋರ್ಟ್ ಮೂಲಕ ಪ್ರಜ್ವಲ್ ರೇವಣ್ಣ ಪ್ರಯಾಣಿಸಿದ್ದಾನೆ ಎಂದು ಹೇಳಿದ್ದಾರೆ.
ಪ್ರಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್ಪೋರ್ಟ್ ಮೂಲಕ ಜರ್ಮನಿಗೆ ತೆರಳಿರುವುದು ಖಚಿತವಾಗಿದೆ. ದೇಶ ಕಂಡ ಅತೀ ದೊಡ್ಡ ಲೈಂಗಿಕ ಹಗರಣದಲ್ಲಿ ಭಾಗಿಯಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದು, ಕರ್ನಾಟಕ ಸರ್ಕಾರ ಎಸ್‌ಐಟಿ ತನಿಖೆ ಕೂಡ ರಚಿಸಿದೆ.
