ಹಿಂದೂ ಕಾರ್ಯಕರ್ತ ಹಾಗೂ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಕಳೆದ ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಅಬ್ಧುಲ್ ರಹಮಾನ್ ಎಂಬಾತನನ್ನು ರಾಷ್ಟ್ರೀಯ ತನಿಖಾ ದಳ (NIA) ಬಂಧಿಸಿದೆ. ಕತಾರ್‌ನಿಂದ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಆರೋಪಿಯನ್ನು ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ನಾಯಕರ ನಿರ್ದೇಶನದನ್ವಯ ಪ್ರಕರಣದ ಪ್ರಮುಖ ದಾಳಿಕೋರರಿಗೆ ಅಬ್ದುಲ್ ರೆಹಮಾನ್ ಸ್ವಯಂಪ್ರೇರಣೆಯಿಂದ ಆಶ್ರಯ ನೀಡಿದ್ದ ಎಂದು ಎನ್‌ಐಎ ತನಿಖೆಯಲ್ಲಿ ಉಲ್ಲೇಕವಾಗಿದೆ.
ಪ್ರಕರಣದ ಇತರೆ ಆರೋಪಿಗಳ ಬಂಧನವಾಗುತ್ತಿದ್ದಂತೆ ಆರೋಪಿ ಕತಾರ್‌ಗೆ ಪರಾರಿಯಾಗಿದ್ದ. ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಒಟ್ಟು 6 ಆರೋಪಿಗಳ ಮಾಹಿತಿಗಾಗಿ (ಅಬ್ದುಲ್ ರಹಮಾನ್‌ಗಾಗಿ 4 ಲಕ್ಷ) ಎನ್ಐಎ ಬಹುಮಾನ ಘೋಷಿಸಿತ್ತು. ಅಲ್ಲದೆ ಅಬ್ದುಲ್ ರೆಹಮಾನ್, ತಲೆಮರೆಸಿಕೊಂಡಿರುವ ಇನ್ನಿಬ್ಬರು ಆರೋಪಿಗಳು ಸೇರಿದಂತೆ ಒಟ್ಟು 4 ಜನ ಆರೋಪಿಗಳ ವಿರುದ್ಧ ಈ ವರ್ಷ ಏಪ್ರಿಲ್‌ನಲ್ಲಿ ಎನ್ಐಎ ಚಾರ್ಜ್ ಶೀಟ್ ಸಲ್ಲಿಸಿತ್ತು. ಆ ಮೂಲಕ ಪ್ರಕರಣದಲ್ಲಿ ಒಟ್ಟು 28 ಜನರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದಂತಾಗಿತ್ತು.
2022 ಜುಲೈ 26ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದಲ್ಲಿ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರನ್ನು ಪಿಎಫ್‌ಐ ಕಾರ್ಯಕರ್ತರು ಮತ್ತು ಸದಸ್ಯರು ಭೀಕರವಾಗಿ ಕೊಲೆ ಮಾಡಿದ್ದರು. ಈ ಸಂಬಂಧ ಆಗಸ್ಟ್ 4 ರಂದು ಎನ್ಐಎ ತನಿಖೆ ಆರಂಭಿಸಿತ್ತು. ಪ್ರಕರಣದ ಗಂಭೀರತೆ ಅರಿತ ಎನ್ಐಎ ಆಗಸ್ಟ್ 4ರಂದು ತನಿಖೆಯನ್ನ ಕೈಗೆತ್ತಿಕೊಂಡಿತ್ತು.